ಉಡುಪಿಯ ಕೂಸಮ್ಮ ಶಂಭು ಶೆಟ್ಟಿ ಹಾಜಿ ಅಬ್ದುಲ್ಲ ತಾಯಿ-ಮಕ್ಕಳ ಆಸ್ಪತ್ರೆಗೆ ಎಕ್ಸರೆ ಮತ್ತು ಡಿಜಿಟಲ್​ ರೇಡಿಯೋಗ್ರಫಿ ಸಾಧನ ಹಸ್ತಾಂತರ ಕಾರ್ಯಕ್ರಮವನ್ನು ಡಾ. ಬಸವರಾಜ್​ ಹುಬ್ಬಳ್ಳಿ ಉದ್ಘಾಟಿಸಿದರು. ಡಾ. ಪ್ರಶಾಂತ್​ ಭಟ್​, ಪ್ರಮೋದ್​ ಫೆರ್ನಾಂಡಿಸ್​, ರೊನಾಲ್ಡ್​ ಡಿಸೋಜಾ, ಡಾ.ಚಿದಾನಂದ ಸಂಜು ಇದ್ದರು. 
ಉಡುಪಿ

ಟಿಬಿ ಮುಕ್ತ ಜಿಲ್ಲೆಯಾಗಿಸಲು ಇಲಾಖೆ ಪಣ

* ಆರೋಗ್ಯಾಧಿಕಾರಿ ಡಾ. ಬಸವರಾಜ ಮಾಹಿತಿ

* ತಾಯಿ-ಮಕ್ಕಳ ಆಸ್ಪತ್ರೆಗೆ ಎಕ್ಸರೆ ಹಸ್ತಾಂತರ

ಉಡುಪಿ: ಜಿಲ್ಲೆಯ ಆರೋಗ್ಯ ಕ್ಷೇತ್ರ ಮೇಲ್ದರ್ಜೆಗೇರಿಸಲು ದ ಮಣಿಪಾಲ್​ ಗ್ರೂಪ್​ ಸಂಸ್ಥೆಯು ದಶಕದಿಂದ ತಮ್ಮಸಿಎಸ್​ಆರ್​ ನಿಧಿಯಿಂದ ಹಲವಾರು ಮೂಲಸೌಕರ್ಯ, ಉಪಕರಣ ಕೊಡುಗೆಯಾಗಿ ನೀಡಿದೆ. ಅವು ಸದ್ಬಳಕೆಯಾಗಿ ಜನರಿಗೆ ಪ್ರಯೋಜನವಾದಾಗ ಸಂಸ್ಥೆ ನೀಡಿದ ಕೊಡುಗೆ ಸಾರ್ಥಕವಾಗುತ್ತದೆ. ಸಮೂಹ ಸಂಸ್ಥೆಗಳ ಸಹಯೋಗದೊಂದಿಗೆ ಜಿಲ್ಲೆಯನ್ನು ಸಂಪೂರ್ಣವಾಗಿ ಟಿಬಿ ಮುಕ್ತವಾಗಿಸಲು ಇಲಾಖೆ ಪಣತೊಟ್ಟಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಬಸವರಾಜ ಹುಬ್ಬಳ್ಳಿ ತಿಳಿಸಿದರು.
ಉಡುಪಿಯ ಅಜ್ಜರಕಾಡುನಲ್ಲಿರುವ ಜಿಲ್ಲಾ ಸರ್ವೇಕ್ಷಣ ಘಟಕದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಇಲಾಖೆ, ದ ಮಣಿಪಾಲ್​ ಗ್ರೂಪ್​ ಮಣಿಪಾಲ ಆಶ್ರಯದಲ್ಲಿ ಟಿಎಂಜಿ ಸುನಿಧಿ ಫೌಂಡೇಷನ್​ ಟ್ರಸ್ಟ್​ನ ಸಿಎಸ್​ಆರ್​ ನಿಧಿಯಿಂದ ಕೂಸಮ್ಮ ಶಂಭು ಶೆಟ್ಟಿ ಹಾಜಿ ಅಬ್ದುಲ್ಲ ತಾಯಿ-ಮಕ್ಕಳ ಆಸ್ಪತ್ರೆಗೆ ಕೊಡುಗೆಯಾಗಿ ನೀಡಿದ ಪೋರ್ಟೆಬಲ್​ ಎಕ್ಸರೆ ಮತ್ತು ಡಿಜಿಟಲ್​ ರೇಡಿಯೋಗ್ರಫಿ ಸಾಧನ ಹಸ್ತಾಂತರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹಸಿರೀಕರಣಕ್ಕೆ ಆದ್ಯತೆ

ಜಿಲ್ಲಾ ಸಾಂಕ್ರಾಮಿಕ ರೋಗಗಳ ನಿಯಂತ್ರಣಾಧಿಕಾರಿ ಡಾ. ಪ್ರಶಾಂತ್​ ಭಟ್​ ಮಾತನಾಡಿ, ಆರೋಗ್ಯ ಕ್ಷೇತ್ರವನ್ನೂ ಸಹ ಹಸಿರೀಕರಣ ಮಾಡಲು ಇಲಾಖೆಯು ಎಐ ಆಧಾರಿತ ಪೋರ್ಟೆಬಲ್​ ಎಕ್ಸರೆ ಮತ್ತು ಡಿಜಿಟಲ್​ ರೇಡಿಯೋಗ್ರಫಿ ಉಪಕರಣಗಳತ್ತ ಮುಖ ಮಾಡಿದೆ. ಅದರಿಂದ ಪರಿಸರದಲ್ಲಿ ಇಂಗಾಲದ ಪ್ರಮಾಣ ಗಣನೀಯವಾಗಿ ಕಡಿಮೆ ಮಾಡಬಹುದು. ದ ಮಣಿಪಾಲ್​ ಗ್ರೂಪ್​ ಸಂಸ್ಥೆಯು ನೀಡಿದ ಈ ಕೊಡುಗೆಯು ಹಸಿರೀಕರಣಕ್ಕೆ ಪೂರಕವಾಗಿದೆ. ಸಂಸ್ಥೆಯು ಈ ಹಿಂದೆಯೂ ಸಹ ದಿವ್ಯಾಂಗರಿಗೆ ಶ್ರವಣ ಸಾಧನ, ಬ್ಯಾಟರಿ ಚಾಲಿತ ವಾಹನ ನೀಡುವ ಮೂಲಕ ಸಾಮಾಜಿಕ ಕಳಕಳಿ ತೋರಿದೆ ಎಂದರು.
ಜಿಲ್ಲಾ ಆರೋಗ್ಯ ಇಲಾಖೆಗೆ ಉಪಕರಣ ಹಸ್ತಾಂತರಿಸಿ ಮಾತನಾಡಿದ ಮಣಿಪಾಲ್​ ಗ್ರೂಪ್​ನ ಸಿಎಚ್​ಆರ್​ಒ ಪ್ರಮೋದ್​ ಫೆರ್ನಾಂಡಿಸ್​, ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಮೂಲಸೌಕರ್ಯದ ಉನ್ನತೀಕರಣಕ್ಕೆ ಆಸಕ್ತಿ ತೋರಿರುವುದು ಅಭಿನಂದನಾರ್ಹ. ಜಿಲ್ಲೆಯ ಆರೋಗ್ಯ ಕ್ಷೇತ್ರಕ್ಕೆ ಮುಂದಿನ ದಿನಗಳಲ್ಲಿ ಸಂಸ್ಥೆಯು ಇನ್ನೂ ಹೆಚ್ಚಿನ ಕೊಡುಗೆ ನೀಡಲು ಉತ್ಸುಕವಾಗಿದೆ ಎಂದರು.
ಮಣಿಪಾಲ್​ ಟೆಕ್ನಾಲಜೀಸ್​ನ ಜಿಎಂ&ಎಚ್​ಆರ್​ ರೊನಾಲ್ಡ್​ ಡಿಸೋಜಾ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಅಶೋಕ್​ ಎಚ್​. ಉಪಸ್ಥಿತರಿದ್ದರು. 
ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಚಿದಾನಂದ ಸಂಜು ಸ್ವಾಗತಿಸಿದರು. ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಸತೀಶ್​ ರಾವ್​ ಕಾರ್ಯಕ್ರಮ ನಿರೂಪಿಸಿದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಶಿಧರ್​ ವಂದಿಸಿದರು.