ಉಡುಪಿ ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್ ಯೋಜನೆಯಡಿ ವಿದ್ಯಾರ್ಥಿನಿ ಅಂಕಿತಾ ಮೊಗವೀರ ಅವರಿಗೆ ನಿರ್ಮಿಸಿಕೊಟ್ಟ ನೂತನ ಮನೆಯ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಯಶ್ಪಾಲ್ ಸುವರ್ಣ, ಸೂರ್ಯನಾರಾಯಣ ಅಡಿಗ, ಗಿರಿಜಾ ಅಡಿಗ, ಎಚ್. ಧನಂಜಯ ಶೆಟ್ಟಿ, ವೈಕುಂಠ ಹೇರ್ಳೆ, ಎಂ. ಗಂಗಾಧರ ರಾವ್, ಮುರಳಿ ಕಡೆಕಾರ್, ಯು. ವಿಶ್ವನಾಥ ಶೆಣೈ, ಯು.ಎಸ್. ರಾಜಗೋಪಾಲ್ ಆಚಾರ್ಯ, ಭುವನಪ್ರಸಾದ ಹೆಗ್ಡೆ ಇತರರಿದ್ದರು.
* ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಸಂತಸ
* ವಿದ್ಯಾಪೋಷಕ್ನ 87ನೇ ಮನೆಯ ಹಸ್ತಾಂತರ
ಉಡುಪಿ: ಯಕ್ಷಗಾನ ಕಲಾರಂಗವು ಯಾವುದೇ ಆಡಂಬರವಿಲ್ಲದೆ ಪ್ರಾಮಾಣಿಕ ಮತ್ತು ನಿರಂತರ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಎಲ್ಲರ ಪ್ರೀತಿ, ವಿಶ್ವಾಸ ಗಳಿಸಿದೆ. ಸೂರ್ಯನಾರಾಯಣ ಅಡಿಗ ಅವರು ತಮ್ಮ ವಿವಾಹದ ಸುವರ್ಣೋತ್ಸವವನ್ನು ಬಡ ವಿದ್ಯಾರ್ಥಿನಿಗೆ ಮನೆ ನಿರ್ಮಿಸಿಕೊಡುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಶಾಸಕ ಯಶ್ಪಾಲ್ ಸುವರ್ಣ ಸಂತಸ ವ್ಯಕ್ತಪಡಿಸಿದರು.
ಉಡುಪಿಯ ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್ನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಅಂಕಿತಾ (ಅಮಿತಾ ಮತ್ತು ನಾರಾಯಣ ಮೊಗವೀರ ಅವರ ಪುತ್ರಿ)ಳಿಗೆ ಬ್ರಹ್ಮಾವರ ತಾಲೂಕಿನ ನಾಲ್ಕೂರಿನಲ್ಲಿ ಮಂದಾರ್ತಿಯ ನಿವೃತ್ತ ಉಪನ್ಯಾಸಕ ಸೂರ್ಯನಾರಾಯಣ ಅಡಿಗ ಮತ್ತು ಗಿರಿಜಾ ಸೂರ್ಯನಾರಾಯಣ ಅಡಿಗ ಅವರು ವಿವಾಹದ ಸವಿನೆನಪಿಗಾಗಿ 6.50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿಕೊಟ್ಟ ನೂತನ ಮನೆ 'ಶ್ರೀದೇವಿ ಕೃಪಾ' ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂಸ್ಥೆಯ 87ನೇ ಮನೆ
ಸಂಸ್ಥೆಯ ಕಾರ್ಯದರ್ಶಿ ಮುರಲಿ ಕಡೆಕಾರ್ ಮಾತನಾಡಿ, ವಿದ್ಯಾ ಪೋಷಕ್ ಯೋಜನೆ ಮೂಲಕ ಯಕ್ಷಗಾನ ಕಲಾರಂಗವು ಬಡ ಪಿಯುಸಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಹಕರಿಸುತ್ತಿದೆ. ಅಲ್ಲದೆ, ಆ ಬಡ ಕುಟುಂಬಕ್ಕೆ ಅನೇಕ ದಾನಿಗಳ ಸಹಕಾರದಿಂದ ಮನೆ ನಿರ್ಮಿಸಿಕೊಟ್ಟು, ಅವರೂ ಸಹ ಸಮಾಜದಲ್ಲಿ ಒಳ್ಳೆಯ ಜೀವನ ನಡೆಸುವಂತಾಗಬೇಕು ಎಂಬ ಆಶಯ ಹೊಂದಿದೆ. ವಿದ್ಯಾಪೋಷಕ್ ಯೋಜನೆಯಡಿ ನಿರ್ಮಾಣಗೊಂಡ 87ನೇ ಮನೆಯಿದು ಎಂದು ತಿಳಿಸಿದರು.
ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಮೊಕ್ತೇಸರ ಎಚ್. ಧನಂಜಯ ಶೆಟ್ಟಿ ಅವರು ಮನೆಯೊಳಗೆ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ವೈಕುಂಠ ಹೇರ್ಳೆ ಮಾತನಾಡಿದರು. ನೇತಾಜಿ ಸೇವಾ ವೇದಿಕೆಯ ಸ್ಥಾಪಕಾಧ್ಯಕ್ಷ ಪ್ರಸಾದ್ ಹೆಗ್ಡೆ ಮಾರಾಳಿ, ಪ್ರತಾಪ್ ಹೆಗ್ಡೆ ಮಾರಾಳಿ, ಶೇಡಿಕೊಡ್ಲು ವಿಠ್ಟಲ ಶೆಟ್ಟಿ, ಗ್ರಾಪಂ ಅಧ್ಯಕ್ಷೆ ಶೋಭಾ ಕೆ. ಪೂಜಾರಿ, ಅಶೋಕ್ ಭಟ್, ವಾಣಿ ವಿ. ಹೇರ್ಳೆ, ಡಾ. ಭಾರ್ಗವಿ ಆರ್. ಐತಾಳ್, ಎಂ. ಗಣೇಶ್ ಅಡಿಗ, ದೇವಕಿ ಜಿ. ಅಡಿಗ, ವಾರಿಜಾ ಆರ್. ಅಡಿಗ, ಕಾತ್ಯಾಯಿನಿ ಜೆ. ಅಡಿಗ, ವಿಶ್ವೇಶ್ವರ ಅಡಿಗ, ಕೆ. ಅಣ್ಣಾಜಿ ರಾವ್, ರಾಜು ಕುಲಾಲ್, ನಾಲ್ಕೂರು ಶಾಲಾ ಮುಖ್ಯೋಪಾಧ್ಯಾಯ ಕೃಷ್ಣ ನಾಯ್ಕ್, ಯಕ್ಷಗುರು ಮಹೇಶ್ ಮಂದಾರ್ತಿ ಉಪಸ್ಥಿತರಿದ್ದರು.
ಸಂಸ್ಥೆಯ ಪದಾಧಿಕಾರಿಗಳಾದ ಪ್ರೊ. ಕೆ. ಸದಾಶಿವ ರಾವ್, ವಿದ್ಯಾಪ್ರಸಾದ್, ಸದಸ್ಯರಾದ ಯು. ವಿಶ್ವನಾಥ ಶೆಣೈ, ಯು.ಎಸ್. ರಾಜಗೋಪಾಲ್ ಆಚಾರ್ಯ, ಭುವನಪ್ರಸಾದ ಹೆಗ್ಡೆ, ವಿಜಯ ಕುಮಾರ್ ಮುದ್ರಾಡಿ, ಅನಂತರಾಜ ಉಪಾಧ್ಯಾಯ, ಅಶೋಕ್ ಎಂ., ಕೃಷ್ಣಮೂರ್ತಿ ಭಟ್, ಎಚ್. ಸುಜಯೀಂದ್ರ ಹಂದೆ, ಗಣೇಶ್ ಬ್ರಹ್ಮಾವರ, ಸುದರ್ಶನ ಬಾಯರಿ, ಸುಜಯ್ ಶೆಟ್ಟಿ, ಕೆ. ಯೋಗೀಶ್ ಪೈ ಪಾಲ್ಗೊಂಡಿದ್ದರು.
ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು.
ಇಂತಹ ಒಂದು ಸಂಕಲ್ಪ ಮಾಡಲು ನನ್ನ ಪತ್ನಿ ಪ್ರೇರಕಶಕ್ತಿಯಾದಳು. ಇದು ನನ್ನ ಬದುಕಿನ ಅತ್ಯಂತ ಸಂತಸದ ಕ್ಷಣ. ಇಂತಹ ಒಂದು ಅವಕಾಶ ಕಲ್ಪಿಸಿದ ಯಕ್ಷಗಾನ ಕಲಾರಂಗಕ್ಕೆ ಕೃತಜ್ಞನಾಗಿದ್ದೇನೆ. ವಿದ್ಯಾರ್ಥಿನಿ ಅಂಕಿತಾ ಮೊಗವೀರ ಅವರ ಕುಟುಂಬದೊಂದಿಗೆ ನಾವಿದ್ದೇವೆ.