ಕಾಲುಬಾಯಿ ಲಸಿಕಾ ಅಭಿಯಾನ ಜಿಲ್ಲಾ ಮಟ್ಟದ ನಿರ್ವಹಣಾ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಜಿಲ್ಲಾಧಿಕಾರಿ ಸ್ವರೂಪ ಮಾತನಾಡಿದರು. 
ಉಡುಪಿ

ಕಾಲುಬಾಯಿ ರೋಗ ನಿಯಂತ್ರಣಕ್ಕೆ ಲಸಿಕೆ ಪರಿಹಾರ: ಜಿಲ್ಲಾಧಿಕಾರಿ

ಉಡುಪಿ: ಕಾಲುಬಾಯಿ ರೋಗ ಜಾನುವಾರುಗಳಲ್ಲಿ ಅತ್ಯಂತ ವೇಗವಾಗಿ ಹರಡುವ ಸಾಂಕ್ರಾಮಿಕ ರೋಗವಾಗಿದ್ದು, ಜಾನುವಾರುಗಳಿಗೆ ವೈರಾಣುವಿನಿಂದ ಹರಡುವ ಈ ರೋಗ ತಡೆಗೆ ಲಸಿಕೆಯೊಂದೇ ಪರಿಹಾರ. ಈ ರೋಗದ ನಿಯಂತ್ರಣಕ್ಕಾಗಿ ರಾಷ್ಟ್ರೀಯ ಜಾನುವಾರು ರೋಗಗಳ ನಿಯಂತ್ರಣ ಕಾರ್ಯಕ್ರಮದಡಿ 9ನೇ ಸುತ್ತಿನ ಕಾಲುಬಾಯಿ ಲಸಿಕಾ ಕಾರ್ಯಕ್ರಮ ಮೇ 22ರವರೆಗೆ ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ತಿಳಿಸಿದರು.
ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕಾಲುಬಾಯಿ ಲಸಿಕಾ ಅಭಿಯಾನ ಜಿಲ್ಲಾ ಮಟ್ಟದ ನಿರ್ವಹಣಾ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಾನುವಾರುಗಳು ಈ ರೋಗಕ್ಕೆ ತುತ್ತಾದಲ್ಲಿ ಹಾಲಿನ ಉತ್ಪಾದನೆ ಕುಂಠಿತವಾಗಿ ಆರೋಗ್ಯ ಹದಗೆಡುತ್ತದೆ. ಇದರಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತಾರೆ. ಆದ್ದರಿಂದ ಲಸಿಕಾ ಕಾರ್ಯಕ್ಕಾಗಿ ಮನೆ ಮನೆ ಭೇಟಿ ನೀಡುವ ಪಶುವೈದ್ಯರು, ತಾಂತ್ರಿಕ ಸಿಬ್ಬಂದಿ, ಕೆ.ಎಂ.ಎಫ್​ ಸಿಬ್ಬಂದಿ, ಮೈತ್ರಿ ಕಾರ್ಯಕರ್ತರು, ಪಶು ಸಖಿಯರು ಹಾಗೂ ಇತರೆ ತರಬೇತಿ ಹೊಂದಿದ ಸಿಬ್ಬಂದಿಗೆ ರೈತರು ಅಗತ್ಯ ಸಹಕಾರ ನೀಡಬೇಕು ಎಂದರು.
ಶೇ. 96 ರಷ್ಟು ಪ್ರಗತಿ
ಕಳೆದ ಎಂಟನೇ ಸುತ್ತಿನ ಕಾಲುಬಾಯಿ ಜ್ವರ ಲಸಿಕಾ ಕಾರ್ಯಕ್ರಮದಲ್ಲಿ ಜಿಲ್ಲೆಯ 2,00,518 ಜಾನುವಾರುಗಳಲ್ಲಿ 1,92,434 ಜಾನುವಾರುಗಳಿಗೆ ಲಸಿಕೆ ಹಾಕಿಸಿ ಶೇ. 96 ರಷ್ಟು ಪ್ರಗತಿ ಸಾಧಿಸಲಾಗಿದೆ. ಒಂಭತ್ತನೇ ಸುತ್ತಿಗೆ 1,96,905 ಗುರಿ ನಿಗದಿಪಡಿಸಿದ್ದು, ಈವರೆಗೆ 68,840 ಜಾನುವಾರುಗಳಿಗೆ ಲಸಿಕೆ ಹಾಕುವುದರೊಂದಿಗೆ ಶೇ. 34.96 ರಷ್ಟು ಗುರಿ ಸಾಧಿಸಲಾಗಿದೆ. ಲಸಿಕಾ ಕಾರ್ಯಕ್ಕಾಗಿ ಜಿಲ್ಲೆಯಲ್ಲಿ ಒಟ್ಟು 2,16,643 ಡೋಸ್​ ಲಸಿಕೆಗಳು ಲಭ್ಯವಿದೆ ಎಂದರು.

ಪಶುಪಾಲನಾ ಮತ್ತು ಪಶು ವೈದ್ಯಕಿಯ ಸೇವಾ ಇಲಾಖೆಯ ಉಪ ನಿರ್ದೇಶಕ ಡಾ.ಎಂ.ಸಿ ರೆಡ್ಡಪ್ಪ ಮತನಾಡಿ, ಜಿಲ್ಲೆಯಲ್ಲಿ ಒಟ್ಟು 8 ಪಶು ಸಂಜೀವಿನಿ ಆಂಬುಲೆನ್ಸ್​ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ಈ ವಾಹನಗಳ ಮೂಲಕ ಒಟ್ಟು 10,043 ಜಾನುವಾರುಗಳಿಗೆ ಚಿಕಿತ್ಸೆ ನೀಡಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು. ಸಭೆಯಲ್ಲಿ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸುಬ್ರಹ್ಮಣ್ಯ, ಪಶುವೈದ್ಯಕಿಯ ಪಾಲಿ ಕ್ಲಿನಿಕ್​ ಉಪನಿರ್ದೇಶಕ ಡಾ. ಬಾಬಣ್ಣ ಮತ್ತಿತರರು ಉಪಸ್ಥಿತರಿದ್ದರು.