ಹೊಂಡಗಳಿಂದ ಕೂಡಿರುವ ಸುಳ್ಯದ ಹಳೆಗೇಟು- ಕೊಡಿಯಾಲಬೈಲು ರಸ್ತೆ. 
ಉಡುಪಿ

ಹಳೆಗೇಟು-ಕೊಡಿಯಾಲಬೈಲು ಸಂಚಾರ ದುಸ್ತರ

ವಿಜಯವಾಣಿ ಸುದ್ದಿಜಾಲ ಸುಳ್ಯ
ನಗರದಲ್ಲಿಯೇ ಇದ್ದರೂ ಸುಂದರ ಪ್ರಕೃತಿಯ ಮಧ್ಯೆ ಹಾದು ಹೋಗುವ ರಸ್ತೆ. ಆದರೆ ಈ ರಸ್ತೆಯ ಪ್ರಯಾಣ ಮಾತ್ರ ಅಷ್ಟೇನು ಸುಂದರ ಮತ್ತು ಸುಖಕರವಾಗಿಲ್ಲ. ಇದು ಸುಳ್ಯದ ಬಹು ಉಪಯೋಗಿ ಹಳೆಗೇಟು-ಕೊಡಿಯಾಲಬೈಲು ರಸ್ತೆಯ ದುಸ್ಥಿತಿ.
25 ವರ್ಷಗಳಿಂದ ಅಭಿವೃದ್ಧಿ, ಡಾಂಬರು ಕಾಣದೆ ರಸ್ತೆ ಸಂಪೂರ್ಣ ಹದಗೆಟ್ಟು ಬೃಹತ್ ಹೊಂಡಗಳು ಸೃಷ್ಟಿಯಾಗಿ ವಾಹನ ಸವಾರರು, ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಹಳೆಗೇಟು ಹೊಸಗದ್ದೆ ಕಟ್ಟೆ ಬಳಿಯಿಂದ ಕೊಡಿಯಾಲಬೈಲು-ದುಗ್ಗಲಡ್ಕ ರಸ್ತೆಗೆ ಸಂಧಿಸುವ ರಸ್ತೆ ಸುಮಾರು 2.5 ಕಿ.ಮೀ. ದೂರ ಇದೆ. ಅಗಲ ಕಿರಿದಾದ ಈ ರಸ್ತೆಯ ಅಲ್ಲಲ್ಲಿ ಭಾರಿ ಗಾತ್ರದ ಹೊಂಡಗಳು ಸೃಷ್ಟಿಯಾಗಿವೆ. ಕೆಲವು ಕಡೆ ಡಾಂಬರು ಸಂಪೂರ್ಣ ಎದ್ದು ಹೋಗಿ ಕೆಸರುಮಯವಾಗಿದೆ. ಹೊಂಡಗಳಲ್ಲಿ ಕೆಸರು ಮಿಶ್ರಿತ ನೀರು ತುಂಬಿ ಪಾದಚಾರಿಗಳಿಗೆ ನಡೆದಾಡಲು ಸಮಸ್ಯೆಯಾಗುತ್ತಿದೆ.
ಚರಂಡಿ ಇಲ್ಲದೆ ಮಳೆ ನೀರೆಲ್ಲ ರಸ್ತೆಯಲ್ಲಿಯೇ ಹರಿಯುತ್ತ್ತಿದೆ. ಮಳೆ ಬಂದರೆ ನೀರೆಲ್ಲ ರಸ್ತೆಯಲ್ಲಿಯೇ ಶೇಖರಣೆಯಾಗಿ ತೋಡಿನಂತಾಗುತ್ತದೆ. ಪ್ರತಿ ನಿತ್ಯ ನೂರಾರು ವಾಹನಗಳು ಸರ್ಕಸ್ ಮಾಡುತ್ತ ಸಂಚರಿಸುವಂತಾಗಿದೆ. ಈ ರಸ್ತೆ ಪೂರ್ತಿ ಡಾಂಬರು ಕಾಣದೆ 25 ವರ್ಷಗಳೇ ಕಳೆದಿದ್ದು, 15 ವರ್ಷಗಳ ಹಿಂದೆ ಸ್ವಲ್ಪ ಭಾಗದಲ್ಲಿ ಡಾಂಬರು ಹಾಕಲಾಗಿತ್ತು. ಅದು ಕೂಡ ಎದ್ದು ಹೋಗಿ ರಸ್ತೆ ಸಂಚಾರ ದುಸ್ತರವಾಗಿದೆ.

ಅಭಿವೃದ್ಧಿಗೆ ಒಕ್ಕೊರಲ ಆಗ್ರಹ

ಸುಳ್ಯ-ಜಟ್ಟಿಪಳ್ಳ- ಕೊಡಿಯಾಲಬೈಲು ರಸ್ತೆಯಂತೆಯೇ ಹಳೆಗೇಟು-ಕೊಡಿಯಾಲಬೈಲು ರಸ್ತೆ ಪ್ರಮುಖ ಸಂಪರ್ಕ ಕೊಂಡಿಯಾಗಿದೆ. ದುಗ್ಗಲಡ್ಕ ಕಡೆಗೆ ಹೋಗಲೂ ಈ ರಸ್ತೆ ಬಲು ಹತ್ತಿರ. ಈ ಭಾಗದ ಹಲವಾರು ಕುಟುಂಬಗಳಿಗೂ ಪ್ರಯಾಣಕ್ಕಾಗಿ ಈ ರಸ್ತೆಯೇ ಆಸರೆಯಾಗಿದೆ. ಈ ರಸ್ತೆಯನ್ನು ಅಭಿವೃದ್ಧಿ ಪಡಿಸಬೇಕೆಂಬುದು ಬಹು ವರ್ಷಗಳ ಬೇಡಿಕೆಯಾಗಿದ್ದು, ಕೇವಲ ಎರಡೂವರೆ ಕಿ.ಮೀ. ಇರುವ ರಸ್ತೆಯನ್ನು ಸ್ವಲ್ಪ ಅಗಲೀಕರಣ ಮಾಡಿ ಡಾಮರೀಕರಣ ಮಾಡಿದಲ್ಲಿ ನಗರಕ್ಕೊಂದು ಸುಂದರ ಸಂಪರ್ಕ ರಸ್ತೆ ಸೌಲಭ್ಯ ಸಿಗಲಿದೆ. ಸರ್ಕಾರ, ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸಿ ರಸ್ತೆ ಅಭಿವೃದ್ಧಿಗೆ ಪ್ರಯತ್ನಿಸಿಬೇಕು ಎಂಬುದು ಈ ಭಾಗದ ಜನರ ಒಕ್ಕೊರಲ ಬೇಡಿಕೆಯಾಗಿದೆ.

ಹಳೆಗೇಟು-ಕೊಡಿಯಾಲಬೈಲು ರಸ್ತೆ ಡಾಮರೀಕರಣ ಕಾಣದೆ 25 ವರ್ಷಗಳಾಗಿವೆ. ಈ ರಸ್ತೆ ಅಭಿವೃದ್ಧಿಪಡಿಸಬೇಕು ಎಂಬುದು ಹಲವು ವರ್ಷಗಳ ಬೇಡಿಕೆಯಾಗಿದೆ. ಎರಡೂವರೆ ಕಿ.ಮೀ. ರಸ್ತೆ ಅಭಿವೃದ್ಧಿಗೆ ಅನುದಾನ ಮೀಸಲಿರಿಸಿ ಅಭಿವೃದ್ಧಿಪಡಿಸಬೇಕು ಎಂಬುದು ಈ ಭಾಗದ ಜನರ ಪ್ರಮುಖ ಬೇಡಿಕೆಯಾಗಿದೆ.