ಕಾರ್ಕಳ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವ ‘ಜ್ಞಾನಸಂಭ್ರಮ’ ಕಾರ್ಯಕ್ರಮದಲ್ಲಿ ರಾಷ್ಟ್ರಮಟ್ಟದ ಬಾಸ್ಕೆಟ್ ಬಾಲ್ ಟೂರ್ನಿಗೆ ಆಯ್ಕೆಯಾದ ವಿದ್ಯಾರ್ಥಿನಿ ಗ್ರೀಷ್ಮಾ ಮತ್ತು ಅವರ ತಂದೆ ಸತೀಶ್ ಕೆ.ಅವರನ್ನು ಸನ್ಮಾನಿಸಲಾಯಿತು.  
ಉಡುಪಿ

ಪ್ರತಿಭಾವಂತರಿಗೆ ಜ್ಞಾನಸುಧಾ ಸಂಸ್ಥೆ ವೇದಿಕೆ

ವಿಜಯವಾಣಿ ಸುದ್ದಿಜಾಲ ಕಾರ್ಕಳ
ಶಿಸ್ತು, ಪರಿಶ್ರಮ ಹಾಗೂ ದೃಢತೆ ಎಂಬ ತ್ರಿಸೂತ್ರ ಅಳವಡಿಸಿಕೊಂಡವರಿಗೆ ಯಶಸ್ಸು ನಿಶ್ಚಿತ. ಶ್ರದ್ಧೆ, ಬದ್ಧತೆ ಮತ್ತು ಪ್ರಾಮಾಣಿಕತೆಯುಳ್ಳ ವಿದ್ಯಾರ್ಥಿ ಪ್ರತಿಭಾನ್ವಿತನಾಗಿ ಹೊರಹೊಮ್ಮುತ್ತಾನೆ. ಅಂತಹ ಪ್ರತಿಭೆಗೆ ಜ್ಞಾನಸುಧಾ ಶಿಕ್ಷಣ ಸಂಸ್ಥೆ ಉತ್ತಮ ವೇದಿಕೆ ಎಂದು ಬಂಟಕಲ್ಲು ಶ್ರೀ ಸೋದೆ ವಾದಿರಾಜ ಮಠ ಎಜುಕೇಶನಲ್ ಇನ್‌ಸ್ಟಿಟ್ಯೂಶನ್ಸ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ರಾಧಾಕೃಷ್ಣ ಎಸ್. ಐತಾಳ್ ಹೇಳಿದರು.
ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಜ್ಞಾನಸಂಭ್ರಮ-2025ರ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಉದ್ಯಮಿ ಅಂಡಾರು ಮಹಾವೀರ ಹೆಗ್ಡೆ ಮಾತನಾಡಿ, ವಿದ್ಯೆಯೊಂದಿಗೆ ಜೀವನ ಕೌಶಲವನ್ನು ತುಂಬಿಸುವ ಮಹಾತ್ಕಾರ್ಯ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳಿಂದ ನಡೆಯುತ್ತಿರುವುದು ಶ್ಲಾಘನೀಯ ಎಂದರು.
ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿನೇಶ್ ಎಂ.ಕೊಡವೂರು ಮಾತನಾಡಿ, ಬದುಕಿನ ಕಗ್ಗಂಟುಗಳನ್ನು ಮೆಟ್ಟಿ ನಿಂತವನಿಗೆ ಅನುಭವ ಜಾಸ್ತಿ. ಅಂಥವರೇ ಎಲ್ಲರಿಗೂ ಸ್ಫೂರ್ತಿಯಾಗುತ್ತಾರೆ ಎಂದರು.
ಅಜೆಕಾರ್ ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿ, ಆಡಳಿತ ಮಂಡಳಿ ಸದಸ್ಯ ಶಾಂತಿರಾಜ್ ಹೆಗ್ಡೆ, ಪಿಆರ್‌ಒ ಜ್ಯೋತಿ ಪದ್ಮನಾಭ ಭಂಡಿ, ಕಾರ್ಕಳ ಜ್ಞಾನಸುಧಾ ಪಪೂ ಕಾಲೇಜು ಉಪಪ್ರಾಂಶುಪಾಲೆ ಸಾಹಿತ್ಯಾ, ಜ್ಞಾನಸುಧಾ ಆಂಗ್ಲ ಮಾಧ್ಯಮ ಪ್ರೌಢಶಾಲೆ ಉಪಪ್ರಾಂಶುಪಾಲೆ ವಾಣಿ ಕೆ., ಡೀನ್ ಅಕಾಡೆಮಿಕ್ ಡಾ.ಮಿಥುನ್ ಯು., ಡೀನ್ ಸ್ಟೂಡೆಂಟ್ ಅಫೈರ್ ಶಕುಂತಳಾ ಎಂ.ಸುವರ್ಣ, ವಿದ್ಯಾರ್ಥಿ ನಾಯಕರಾದ ನಿಶಾನ್ ಎನ್.ಸಾಲ್ಯಾನ್ ಹಾಗೂ ಚೈತ್ರಿಕಾ ಚೌದರಿ ಉಪಸ್ಥಿತರಿದ್ದರು.
ರಸಾಯನಶಾಸ್ತ್ರ ವಿಭಾಗ ಮುಖ್ಯಸ್ಥ ಡಾ.ಪ್ರಜ್ವಲ್ ಕುಲಾಲ್ ಸಂಸ್ಥೆಯ ವಾರ್ಷಿಕ ವರದಿ ವಾಚಿಸಿದರು. ಶರತ್ ಆಚಾರ್ಯ, ಅಭಿಷೇಕ್ ಎ.ಜಿ. ಸೌಜನ್ಯಾ ಹೆಗ್ಡೆ ಸಾಧಕರ ಪಟ್ಟಿ ವಾಚಿಸಿದರು. ಉಪಪ್ರಾಂಶುಪಾಲೆ ಉಷಾ ರಾವ್ ಯು. ಸ್ವಾಗತಿಸಿದರು. ಆಂಗ್ಲಭಾಷಾ ವಿಭಾಗ ಮುಖ್ಯಸ್ಥೆ ಸಂಗೀತಾ ಕುಲಾಲ್ ನಿರೂಪಿಸಿದರು.

ವಿವಿಧ ಕ್ಷೇತ್ರದ ಸಾಧಕರಿಗೆ ಗೌರವ

ರಾಷ್ಟ್ರಮಟ್ಟದ ಬಾಸ್ಕೆಟ್‌ಬಾಲ್ ಟೂರ್ನಿಗೆ ಆಯ್ಕೆಯಾದ ಸಂಸ್ಥೆಯ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಗ್ರೀಷ್ಮಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿ ಸತೀಶ್ ಕೆ. ಅವರನ್ನು ಸನ್ಮಾನಿಸಲಾಯಿತು. 2025ನೇ ಸಾಲಿನ ರಾಷ್ಟ್ರ, ರಾಜ್ಯಮಟ್ಟದಲ್ಲಿ ಸಾಧನೆಗೈದ ಕ್ರೀಡಾ ಸಾಧಕರನ್ನು, ಕಾಲೇಜು ಹಂತದ ಸಾಂಸ್ಕೃತಿಕ ಸ್ಪರ್ಧಾ ವಿಜೇತರನ್ನು ಗೌರವಿಸಲಾಯಿತು. ಸಮಗ್ರ ಕ್ರೀಡಾ ಪ್ರಶಸ್ತಿಯನ್ನು ಜೆಇಇ ಬ್ಯಾಚ್ ಪಡೆದುಕೊಂಡಿತು.