ಉಡುಪಿ ಡಿಸಿ ಕಚೇರಿಯಲ್ಲಿ ಜ್ಞಾನ ಭಾರತಂ ಮಿಷನ್ ಯೋಜನೆಯ ಪ್ರಚಾರದ ಪೋಸ್ಟರ್ಅನ್ನು ಸ್ವರೂಪಾ ಟಿ.ಕೆ. ಬಿಡುಗಡೆ ಮಾಡಿದರು. ವಿಂಧ್ಯಾ ಎನ್.ಎಂ., ಸುಬ್ರಹ್ಮಣ್ಯ, ಮಹಾಂತೇಶ್ ಹಂಗರಗಿ, ಡಾ. ಬಿ.ಗೋಪಾಲ್ ಆಚಾರ್ಯ, ಧನಲಕ್ಷ್ಮೀ, ಡಾ. ಬಿ.ಜಗದೀಶ್ ಶೆಟ್ಟಿ, ಸತ್ಯನಾರಾಯಣ ವಿ. ರಾವ್ ಇದ್ದರು.
* ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಕರೆ
* ಜ್ಞಾನ ಭಾರತಂ ಮಿಷನ್ ಯೋಜನೆಯ ಸಭೆ
ಉಡುಪಿ: ದೇಶದಲ್ಲಿರುವ ಶತಮಾನಗಳ ಹಳೆಯದಾದ ಕೈಬರಹ, ಹಸ್ತಪ್ರತಿ, ತಾಳೆಓಲೆ ಹಾಗೂ ಇನ್ನಿತರ ದಾಖಲೆಗಳನ್ನು ತಂತ್ರಜ್ಞಾನದ ಮೂಲಕ ಶಾಶ್ವತವಾಗಿ ಉಳಿಸಲು ಜ್ಞಾನ ಭಾರತಂ ಮಿಷನ್ ಯೋಜನೆಯಡಿ ಡಿಜಿಟಲೀಕರಣ ಕಾರ್ಯ ನಡೆಯುತ್ತಿದೆ. ಇದಕ್ಕೆ ಎಲ್ಲರೂ ಸಹಕಾರ ನೀಡಿ, ಡಿಜಿಟಲೀಕರಣ ಚುರುಕುಗೊಳಸಿಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಸೂಚಿಸಿದರು.
ಉಡುಪಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ (ಮೇ 11) ಆಯೋಜಿಸಿದ್ದ ಸಭೆಯಲ್ಲಿ ಜ್ಞಾನ ಭಾರತಂ ಮಿಷನ್ ಯೋಜನೆಯಡಿ ಹಸ್ತಪ್ರತಿಗಳ ಸಂರಕ್ಷಣೆ ಮತ್ತು ಡಿಜಿಟಲೀಕರಣ ಸರ್ವೇ ಕಾರ್ಯ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸುವ ಕುರಿತು ಚರ್ಚಿಸಿದರು.
ಸಂರಕ್ಷಣೆ ಉದ್ದೇಶ
ಸಾರ್ವಜನಿಕರ ಬಳಿ ಪುರಾಥನ ಕಾಲದ ಯಾವುದೇ ದಾಖಲೆ ಇದ್ದಲ್ಲಿ ಮಾಹಿತಿ ನೀಡಬಹುದು. ಅಥವಾ ನೇರವಾಗಿ ಜ್ಞಾನ ಭಾರತಂ ಆ್ಯಪ್ gynabharatham.com ಮೂಲಕ ಅಪ್ಲೋಡ್ ಮಾಡಬಹುದು. ಮಾಹಿತಿ ನೀಡಿದರೆ ಸಮೀಕ್ಷೆದಾರರು ಬಂದು ದಾಖಲಿಸಿಕೊಳ್ಳಲಿದ್ದಾರೆ. ಐತಿಹಾಸಿಕ ದಾಖಲೆಗಳ ಸಮೀಕ್ಷೆ ನಡೆಸಿ ವಿಮರ್ಶಾತ್ಮಕ ಸಂಪಾದನೆ, ಅನುವಾದ ಮತ್ತು ಪ್ರಕಟಣೆ ಮಾಡುವ ಮೂಲಕ ಕರ್ನಾಟಕದ ಶ್ರೀಮಂತ ಸಾಂಸತಿಕ ಪರಂಪರೆಯನ್ನು ಒಂದೇ ರಾಷ್ಟ್ರೀಯ ವೇದಿಕೆಯಲ್ಲಿ ಒದಗಿಸಲಾಗುತ್ತದೆ. ಭವಿಷ್ಯದ ಪೀಳಿಗೆಗೆ ಜ್ಞಾನ ಸಂಪತ್ತನ್ನು ನೀಡಲು ಸಂರಕ್ಷಣೆಗಾಗಿ ಡಿಜಿಟಲೀಕರಣ ಮಾಡಲಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಜ್ಞಾನ ಭಾರತಂ ಮಿಷನ್ ಯೋಜನೆಯ ಪ್ರಚಾರದ ಪೋಸ್ಟರ್ ಬಿಡುಗಡೆ ಮಾಡಲಾಯಿತು.
ಸಭೆಯಲ್ಲಿ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕಿ ವಿಂಧ್ಯಾ ಎನ್.ಎಂ., ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸುಬ್ರಹ್ಮಣ್ಯ, ಪೌರಯುಕ್ತ ಮಹಾಂತೇಶ್ ಹಂಗರಗಿ, ವಾರ್ತಾಧಿಕಾರಿ ಮಂಜುನಾಥ್ ಬಿ., ಜ್ಞಾನ ಭಾರತಂ ಉಡುಪಿಯ ಜಿಲ್ಲಾ ಸಂಯೋಜಕ ಡಾ. ಬಿ.ಗೋಪಾಲ್ ಆಚಾರ್ಯ, ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಧನಲಕ್ಷ್ಮೀ, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ.ಜಗದೀಶ್ ಶೆಟ್ಟಿ, ಉಡುಪಿ ಸಂಸ್ಕೃತ ಕಾಲೇಜಿನ ಪ್ರಾಂಶುಪಾಲ ಸತ್ಯನಾರಾಯಣ ವಿ. ರಾವ್, ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಉಪಸ್ಥಿತರಿದ್ದರು.
ಜಿಲ್ಲೆಯ ಎಲ್ಲ ವಿವಿಗಳು, ವಸ್ತು ಸಂಗ್ರಹಾಲಯ, ಸಂಘ-ಸಂಸ್ಥೆಗಳು, ಮಠಗಳಲ್ಲಿ ಇರುವ ಹಸ್ತಪ್ರತಿಗಳ ದಾಖಲೀಕರಣಗೊಳಿಸಬೇಕಿದೆ. ಇದಕ್ಕೆ ಜಿಲ್ಲಾಡಳಿತದೊಂದಿಗೆ ಕೈಜೋಡಿಸಬೇಕು. ಈ ಕುರಿತು ಸಾರ್ವಜನಿಕರಿಗೆ ಜಿಲ್ಲಾದ್ಯಂತ ಮಾಹಿತಿ ನೀಡಲು ಮಾಧ್ಯಮಗಳ ಮೂಲಕ ಹೆಚ್ಚಿನ ಪ್ರಚಾರ ಕೈಗೊಳ್ಳಬೇಕು. ವಿವಿಧ ಸಮುದಾಯ, ಅರ್ಚಕರು, ತಂತ್ರಿಗಳು ಸೇರಿದಂತೆ ಇನ್ನಿತರರ ಸಭೆ ಕರೆಯಬೇಕು.
— ಸ್ವರೂಪಾ ಟಿ.ಕೆ. ಉಡುಪಿ ಜಿಲ್ಲಾಧಿಕಾರಿ.