ಉಡುಪಿಯ ಗೀತಾ ಮಂದಿರದಲ್ಲಿ ಡಾ. ಉಷಾ ಹೆಬ್ಬಾರ್ ಅವರಿಗೆ ಗುರು ವಂದನೆ ಸಲ್ಲಿಸಲಾಯಿತು. ನಾಗರಾಜ್ ಆಚಾರ್ಯ, ಯಶೋದಾ ಆರ್., ವಿದ್ಯಾ ರಾವ್, ಭಾರತಿ, ಆಶಾ ರಾವ್, ದಿವ್ಯಾ, ಕೌಶಿಕ್ ಹೆಬ್ಬಾರ್ ಇದ್ದರು.
* ನಾಗರಾಜ್ ಆಚಾರ್ಯ ಶ್ಲಾಘನೆ
* ವಿದುಷಿ ಡಾ. ಉಷಾ ಹೆಬ್ಬಾರ್ಗೆ ಗುರುವಂದನೆ
ಉಡುಪಿ: ಪುತ್ತಿಗೆ ಮಠದ ಶ್ರೀಪಾದದ್ವಯರ ನೆಚ್ಚಿನ ಶಿಷ್ಯೆಯಾಗಿ ಭಜನೆಯ ಮೂಲಕವೇ ಉಷಾ ಹೆಬ್ಬಾರ್ ಹರಿ-ಗುರು ಸೇವೆ ಮಾಡುತ್ತಿದ್ದಾರೆ. ಅವರ ಸಾಧನೆ ಕೃಷ್ಣಪ್ರೀತಿಗೆ ಹಾಗೂ ಗುರು ವಾತ್ಸಲ್ಯಕ್ಕೂ ಕಾರಣವಾಗಿದೆ. ಭಜನೆಯ ಗುರುವಾಗಿ ಅವರನ್ನು ಗುರು ಪೂರ್ಣಿಮೆಯ ದಿನ ಅಭಿನಂದಿಸಿರುವುದು ನಿಜಕ್ಕೂ ಅರ್ಥಪೂರ್ಣ ಎಂದು ಪುತ್ತಿಗೆ ಮಠದ ದಿವಾನ ನಾಗರಾಜ್ ಆಚಾರ್ಯ ಶ್ಲಾಘಿಸಿದರು.
ಉಡುಪಿಯ ಗೀತಾ ಮಂದಿರದಲ್ಲಿರುವ ಶ್ರೀ ಪುತ್ತಿಗೆ ನೃಸಿಂಹ ಆಡಿಟೋರಿಯಂನಲ್ಲಿ ಗುರು ಪೂರ್ಣಿಮೆ ನಿಮಿತ್ತ ಬುಧವಾರ (ಜು.29) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸುಗುಣೇಂದ್ರ ಶ್ರೀಗಳಿಂದ ಸ್ಥಾಪಿಸಲ್ಪಟ್ಟ 'ಸುಗುಣಶ್ರೀ' ಭಜನಾ ಮಂಡಳಿಯ ಗುರು, ಸಂಗೀತ ವಿದುಷಿ ಡಾ. ಉಷಾ ಹೆಬ್ಬಾರ್ ಅವರ ಗುರು ವಂದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶ್ರೀಮಠದ ವಿದ್ವಾನ್ ಕೆ.ವಿ. ರಮಣ ಆಚಾರ್ಯ ಅಭಿನಂದನಾ ಮಾತುಗಳನ್ನಾಡಿ, ಪುತ್ತಿಗೆ ಮಠದ ನಿಕಟಪೂರ್ವ ವಿಶ್ವಗಿತಾ ಪರ್ಯಾಯದ ಸಂದರ್ಭದಲ್ಲಿ ಉಷಾ ಹೆಬ್ಬಾರ್ ಅವರ ಸೇವೆ ಅನನ್ಯ. ಪ್ರಧಾನಿ ನರೇಂದ್ರ ಮೋದಿ ಅವರು ಪಾಲ್ಗೊಂಡಿದ್ದ ಲಕ್ಷ ಕಂಠ ಗೀತಾ ಪಾರಾಯಣದ ಸಂದರ್ಭದಲ್ಲಿ ಭಜಕರಿಗೆ ನೀಡಿದ್ದ ವಿಶೇಷ ತರಬೇತಿಯಿಂದ ಆ ಕಾರ್ಯಕ್ರಮ ಯಶಸ್ವಿಯೂ ಆಗಿತ್ತು. ಇತ್ತೀಚೆಗೆ ಗೌರವ ಡಾಕ್ಟರೇಟ್ ಲಭಿಸಿರುವುದು ಸೂಕ್ತವಾಗಿದೆ ಎಂದರು.
ಸುಗುಣಶ್ರೀ ಭಜನಾ ಮಂಡಳಿಯ ಯಶೋದಾ ಆರ್., ವಿದ್ಯಾ ರಾವ್, ಭಾರತಿ, ಸಹಭಾಗಿತ್ವ ವಹಿಸಿದ್ದ ಯುವ ಬ್ರಾಹ್ಮಣ ಪರಿಷತ್ನ ಬ್ರಾಹ್ಮಿ ಭಜನಾ ಮಂಡಳಿಯ ಆಶಾ ರಾವ್, ದಿವ್ಯಾ, ಬೆಂಗಳೂರಿನ ದಾಸ ನಮನ ಭಜನಾ ತಂಡದ ರಶ್ಮಿ ಹಾಗೂ ಕೌಶಿಕ್ ಹೆಬ್ಬಾರ್ ಉಪಸ್ಥಿತರಿದ್ದರು.
ಮೂರು ಭಜನಾ ತಂಡಗಳ ವತಿಯಿಂದ ಉಷಾ ಹೆಬ್ಬಾರ್ ಅವರಿಗೆ ಅರಿಶಿನ&ಕುಂಕುಮ, ಸ್ಮರಣಿಕೆ, ಗುರುದಕ್ಷಿಣೆ ನೀಡಿ ಗೌರವಿಸಲಾಯಿತು. ವಿವಿಧ ಭಜನಾ ಮಂಡಳಿಯ 200ಕ್ಕೂ ಅಧಿಕ ಶಿಷ್ಯರು ಪಾಲ್ಗೊಂಡಿದ್ದರು.
"
ಭಜನಾ ಶಿಷ್ಯರು ನನಗೆ ನೀಡಿದ ಗುರು ವಂದನೆಯನ್ನು ನನ್ನ ಗುರುಗಳಿಗೆ ಸಮರ್ಪಿಸುತ್ತೇನೆ. ಗುರು-ಶಿಷ್ಯರ ಬಾಂಧವ್ಯ ನಿರಂತರವಾಗಿರಲಿ. ಸಂಗೀತ-ಭಜನೆಯ ಆಧಾರದಲ್ಲಿ ನಾವು-ನೀವು ಸದಾ ಜತೆಯಾಗಿ ಇರೋಣ.
— ಡಾ. ಉಷಾ ಹೆಬ್ಬಾರ್. ಸಂಗೀತ ಗುರು.