ಉಡುಪಿಯಲ್ಲಿ ಆಯೋಜಿಸಿದ್ದ 'ಗುರು ಸಂದೇಶ ಸಾಮರಸ್ಯ ಜಾಥಾ ಮತ್ತು ರಾಜ್ಯಮಟ್ಟದ ಭಾಷಣ ಸ್ಪರ್ಧೆ'ಯನ್ನು ಮಂಜುನಾಥ್ ಪೂಜಾರಿ ಉದ್ಘಾಟಿಸಿದರು. ಗುರ್ಮೆ ಸುರೇಶ್ ಶೆಟ್ಟಿ, ಕೆ..ರಘುಪತಿ ಭಟ್, ಪ್ರವೀಣ್ ಪೂಜಾರಿ, ರಮೇಶ್ ಕಾಂಚನ್, ದಿವಾಕರ್ ಸನಿಲ್ ಇತರರಿದ್ದರು.
ನಿಗಮದ ಅಧ್ಯಕ್ಷ ಮಂಜುನಾಥ್ ಪೂಜಾರಿ ಆಶಯ
* 'ನಾರಾಯಣಗುರು ಸಂದೇಶ ಸಾಮರಸ್ಯ ಜಾಥಾ' ಉದ್ಘಾಟನೆ
ಉಡುಪಿ: ನಾರಾಯಣಗುರುಗಳ ತತ್ತ್ವ, ಸಂದೇಶ ಅನುಸರಿಸಿದ್ದರಿಂದ ನಮ್ಮ ಸಮಾಜ ಶಿಕ್ಷಣ, ಉದ್ಯಮ ಕ್ಷೇತ್ರದಲ್ಲಿ ಸಾಧಿಸುವಂತಾಗಿದೆ. ಅಸ್ಪೃಶ್ಯತೆ, ಬಡತನ, ಮೇಲು-ಕೀಳೆಂಬ ಭಾವನೆ ಹಿಂದೆ ಇತ್ತು. ಸಂಪ್ರದಾಯವಾದಿಗಳಿಂದ ದೇವಸ್ಥಾನಕ್ಕೆ ಇತರರಿಗೆ ಪ್ರವೇಶ ಇರಲಿಲ್ಲ. ಅಂತಹ ಸಂದರ್ಭದಲ್ಲಿ ಗುರುಗಳು ನಾವೆಲ್ಲ ಒಂದೇ ಜಾತಿ-ಕುಲವೆಂದು ಸಾರಿ ಸಮಾಜದಲ್ಲಿ ಮಹತ್ತರ ಬದಲಾವಣೆ ತಂದರು. ನಮ್ಮಹೋರಾಟ ಧರ್ಮಾಧಾರಿತ ಆಗಿರದೆ ಬದುಕಿನ ಆಧಾರದಲ್ಲಿ ನಡೆಯಬೇಕು ಎಂದು ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ್ ಪೂಜಾರಿ ಆಶಯ ವ್ಯಕ್ತಪಡಿಸಿದರು.
ಉಡುಪಿಯ ಬನ್ನಂಜೆಯಲ್ಲಿರುವ ಶ್ರೀ ನಾರಾಯಣ ಗುರು ಸಭಾಭವನದಲ್ಲಿ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ (ರಿ.) ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮ ಜಯಂತಿಯ ನಿಮಿತ್ತ ಭಾನುವಾರ (ಆ.30) ಆಯೋಜಿಸಿದ್ದ 'ಗುರು ಸಂದೇಶ ಸಾಮರಸ್ಯ ಜಾಥಾ ಮತ್ತು ರಾಜ್ಯಮಟ್ಟದ ಭಾಷಣ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ನಾರಾಯಣ ಗುರುಗಳ ಸಂದೇಶ ಮುಂದಿನ ಪೀಳಿಗೆಗೆ ತಲುಪಲು ಇಂತಹ ಕಾರ್ಯಕ್ರಮಗಳಲ್ಲಿ ಸರ್ಕಾರಿ ಶಾಲೆಗಳ ಮಕ್ಕಳನ್ನು ತೊಡಗಿಸಿಕೊಳ್ಳುವಂತಾಗೇಕು. ದೇಶಾದ್ಯಂತ ಗುರುಗಳ ಸಂದೇಶ ಪಸರಿಸಲು ಹಾಗೂ ಸಮಾಜದ ಅಭಿವೃದ್ಧಿಗಾಗಿ ಸರ್ಕಾರವು ನಿಗಮಕ್ಕೆ 500 ಕೋಟಿ ರೂ. ಅನುದಾನ ನೀಡಬೇಕು. ಈ ನಿಟ್ಟಿನಲ್ಲಿ ಶಾಸಕ ಸುನೀಲಕುಮಾರ್ ನೇತೃತ್ವದಲ್ಲಿ ಕರಾವಳಿ ಭಾಗದ ಎಲ್ಲ ಶಾಸಕರ ನಿಯೋಗದೊಂದಿಗೆ ಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸೋಣ ಎಂದರು.
ಜಿಲ್ಲಾ ಬಿಲ್ಲವ ಯುವ ವೇದಿಕೆಯ ಅಧ್ಯಕ್ಷ ಪ್ರವೀಣ್ ಪೂಜಾರಿ ಮಾತನಾಡಿ, ನಾರಾಯಣ ಗುರು ಜಯಂತಿ ಆಚರಣೆಗೆ ಸರ್ಕಾರ ಸಾರ್ವತ್ರಿಕ ರಜೆ ಘೋಷಿಸಬೇಕು. ಎಲ್ಲ ಸರ್ಕಾರಿ ಶಾಲೆಗಳಲ್ಲೂ ನಾರಾಯಣಗುರುಗಳ ಜಯಂತಿ ಆಚರಣೆಗೆ ಆದೇಶ ಹೊರಡಿಸಬೇಕು. ವಿಧಾನಸೌಧದ ಬಳಿ ಗುರುಗಳ ಪುತ್ಥಳಿ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.
ಮಾಜಿ ಶಾಸಕ ಕೆ.ರಘುಪತಿ ಭಟ್, ಸೂರ್ಯಕಾಂತ ಸುವರ್ಣ, ರಮೇಶ್ ಕಾಂಚನ್, ಉದ್ಯಮಿ ಪ್ರಭಾಕರ್ ಪೂಜಾರಿ, ಸೂರ್ಯೋದಯ ಪೆರಂಪಳ್ಳಿ, ಶ್ರೀನಿವಾಸ ಪೂಜಾರಿ ಮಣಿಪಾಲ, ದಿವಾಕರ್ ಸನಿಲ್, ನವೀನ್ ಚಂದ್ರ ಸುವರ್ಣ ಅಡ್ವೇ ಉಪಸ್ಥಿತರಿದ್ದರು.
ಪಲ್ಲವಿ ಪ್ರಾರ್ಥಿಸಿದರು. ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯ ಅಧ್ಯಕ್ಷ ಪ್ರವೀಣ್ ಪೂಜಾರಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸುನೀಲಕುಮಾರ್ ಮಲ್ಪೆ ವಂದಿಸಿದರು. ತೇಜೇಶ್ ಜೆ. ಬಂಗೇರ ಕಾರ್ಯಕ್ರಮ ನಿರೂಪಿಸಿದರು.
ವಿವಿಧ ಕ್ಷೇತ್ರಗಳ ಯುವ ಸಾಧಕರಾದ ವಿದುಷಿ ದೀಕ್ಷಾ, ಪಿಯುಸಿ ಟಾಪರ್ ದಿಶಾ ಪೂಜಾರಿ, ಎಸ್ಎಸ್ಎಲ್ಸಿ ಟಾಪರ್ ಪ್ರೀತಮ್ ಪೂಜಾರಿ, ಯೋಗ ಸಾಧಕಿ ತನುಶ್ರೀ ಪಿತ್ರೋಡಿ, ಅಂತಾರಾಷ್ಟ್ರೀಯ ಕರಾಟೆಪಟು ಛಾಯಾ ಎಸ್. ಪೂಜಾರಿ ಅವರು ಸಾಮರಸ್ಯ ಜಾಥಾಕ್ಕೆ ಚಾಲನೆ ನೀಡಿದರು. ರಾಜ್ಯ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ಪದವಿ ವಿಭಾಗದಲ್ಲಿ ಮಂಗಳೂರು ವಿವಿಯ ಸಂಜನಾ ಪೂಜಾರಿ (ಪ್ರ), ಆಳ್ವಾಸ್ ಕಾಲೇಜಿನ ನಿರೀಕ್ಷಾ ಎನ್. (ದ್ವಿ), ಶಿವಮೊಗ್ಗದ ಜೆಎನ್ಎನ್ ಇಂಜಿನೀಯರಿಂಗ್ ಕಾಲೇಜಿನ ಪ್ರೇರಿತಾ ಎಸ್. ಪೂಜಾರಿ (ತೃ), ಪಿಯುಸಿ ವಿಭಾಗದಲ್ಲಿ ಸರ್ಕಾರಿ ಪಿಯು ಕಾಲೇಜ್ ಕರ್ಜೆಯ ದೀಕ್ಷಾ ಶೆಟ್ಟಿ (ಪ್ರ), ಉಡುಪಿ ಎಂಜಿಎಂ ಪಿಯು ಕಾಲೇಜಿನ ಮಹಾಲಕ್ಷ್ಮೀ (ದ್ವಿ), ಕುಂದಾಪುರದ ಭಂಡಾರಕರ್ಸ್ ಕಾಲೇಜಿನ ದೀಪಿಕಾ (ತೃ) ವಿಜೇತರಾಗಿದ್ದು ಅವರಿಗೆ ಬಹುಮಾನ ವಿತರಿಸಲಾಯಿತು.
ಕಳೆದ ಚುನಾವಣೆಯ ಸಂದರ್ಭದಲ್ಲಿ ನಮ್ಮ ಸಮುದಾಯಕ್ಕೆ ಹೆಚ್ಚಿನ ಸೌಲಭ್ಯ, ಅನುದಾನ ನೀಡುವುದಾಗಿ ಹಿಂದಿನ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದರು. ಆದರೆ, ಯಾವುದೇ ಸೌಲಭ್ಯ ನೀಡದಿರುವುದು ನೋವುಂಟುಮಾಡಿದೆ. ಹಿಂದಿನ ಅಧಿವೇಶನದಲ್ಲಿ ಕರಾವಳಿಯ ಶಾಸಕರು ನಿಗಮಕ್ಕೆ ಹೆಚ್ಚಿನ ಅನುದಾನ, ಸೌಲಭ್ಯ ನೀಡುವಂತೆ ಒತ್ತಾಯಿಸಿರುವುದು ಸಂತಸ ತಂದಿದೆ. ನಾನೂ ಸಹ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಒತ್ತಾಯಿಸುತ್ತೇನೆ.
— ಮಂಜುನಾಥ್ ಪೂಜಾರಿ. ನಾರಾಯಣಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ.