ಉಡುಪಿಯ ರಾಜಾಂಗಣದಲ್ಲಿ ಗುಂಡಿಬೈಲು ಯಕ್ಷಗಾನ ಕಲಾಕ್ಷೇತ್ರದ ಅಮೃತ ಮಹೋತ್ಸವವನ್ನು ಡಾ. ಉದಯಕುಮಾರ್​ ಸರಳತ್ತಾಯ ಉದ್ಘಾಟಿಸಿದರು. ಮಹಾಬಲ ಶೆಟ್ಟಿ, ಕೇಶವಮೂರ್ತಿ ಬಿಲ್ಪತ್ರೆ, ಗಣೇಶ್​ ಕೋಟ್ಯಾನ್​ ಇದ್ದರು. 
ಉಡುಪಿ

ಯಕ್ಷಗಾನ ಕಲೆಯ ತವರೂರು ಉಡುಪಿ

* ಡಾ. ಉದಯಕುಮಾರ್​ ಸರಳತ್ತಾಯ ಅಭಿಪ್ರಾಯ

* ರಾಜಾಂಗಣದಲ್ಲಿ ಯಕ್ಷಗಾನ ಸಪ್ತಾಹ ಉದ್ಘಾಟನೆ

ಉಡುಪಿ: ಯಕ್ಷಗಾನವು ಕರಾವಳಿಯ ಶ್ರೇಷ್ಠ ಹಾಗೂ ವಿಶೇಷ ಕಲೆಯಾಗಿದ್ದು, ಉಡುಪಿಯು ಯಕ್ಷಗಾನ ಕಲೆಯ ತವರೂರು ಆಗಿದೆ. ಇಲ್ಲಿನ ಅಷ್ಟ ಮಠಗಳ ಸಹಕಾರದಿಂದ ಹಾಗೂ ವಿವಿಧ ಸಂಘ-ಸಂಸ್ಥೆಗಳ ವತಿಯಿಂದ ಸದಾಕಾಲ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಲೇ ಇರುತ್ತದೆ. ಹೀಗಾಗಿ ಉಡುಪಿಯು ಸಾಂಸ್ಕೃತಿಕ ನಗರಿ ಎಂಬ ಖ್ಯಾತಿಗೂ ಪಾತ್ರವಾಗಿದೆ ಎಂದು ಪರ್ಯಾಯ ಶೀರೂರು ಮಠದ ದಿವಾನ ಡಾ. ಉದಯಕುಮಾರ್​ ಸರಳತ್ತಾಯ ಸಂತಸ ವ್ಯಕ್ತಪಡಿಸಿದರು.
ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಗುಂಡಿಬೈಲು ಯಕ್ಷಗಾನ ಕಲಾಕ್ಷೇತ್ರದ ಅಮೃತ ಮಹೋತ್ಸವದ ನಿಮಿತ್ತ ಆಯೋಜಿಸಿದ್ದ ಯಕ್ಷಗಾನ ಸಪ್ತಾಹ ಉದ್ಘಾಟಿಸಿ, 75 ವರ್ಷ ಪೂರೈಸಿರುವ ಕಲಾಕ್ಷೇತ್ರವು ಮುಂದೆ ಶತಮಾನೋತ್ಸವದ ಸಂಭ್ರಮವನ್ನೂ ಇದೇ ರಾಜಾಂಗಣದಲ್ಲಿಯೇ ಆಚರಿಸುವಂತಾಗಲಿ ಎಂದು ಶುಭಹಾರೈಸಿದರು.
ಉದ್ಯಮಿ ಪ್ರಸಾದರಾಜ್​ ಕಾಂಚನ್​ ಮಾತನಾಡಿ, ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಕಲಾಕ್ಷೇತ್ರವು ಯಕ್ಷಗಾನ ಸಂಘಗಳಿಗೆ ಮಾದರಿಯಾಗಿದೆ ಎಂದರು.
ನಿಟ್ಟೂರು ಮಹಾಬಲ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಲಾಕ್ಷೇತ್ರದ ಅಧ್ಯಕ್ಷ ಕೇಶವಮೂರ್ತಿ ಬಿಲ್ಪತ್ರೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಷ್ಣುಮೂರ್ತಿ ಉಪಾಧ್ಯ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಗಣೇಶ್​ ಕೋಟ್ಯಾನ್​ ವಂದಿಸಿದರು. 
ಹಿರಿಯ ಸದಸ್ಯರಾದ ನಾಗರಾಜ್​ ಉಪಾಧ್ಯ, ಡಾ. ರಮೇಶ್​ ಬೆಂಬಾಳ್ಕರ್​, ಕೋಶಾಧಿಕಾರಿ ನರಸಿಂಹ ಎನ್​.ಆರ್​. ಸಹಕರಿಸಿದರು. ಸಭಾ ಕಾರ್ಯಕ್ರಮದ ಬಳಿಕ ಯಕ್ಷಗಾನ ಪ್ರದರ್ಶನ ನಡೆಯಿತು.