ಬಿ.ಎಚ್.ರಸ್ತೆಯಿಂದ ಗುಲ್ವಾಡಿ ಕಳುವಿನ ಬಾಗಿಲುವಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಸಂಪೂರ್ಣ ಹದಗೆಟ್ಟಿರುವುದು.
ವಿಜಯವಾಣಿ ಸುದ್ದಿಜಾಲ ಕುಂದಾಪುರ
ಕುಂದಾಪುರ ತಾಲೂಕು ಬಳ್ಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿ.ಎಚ್.ರಸ್ತೆಯಿಂದ ಗುಲ್ವಾಡಿ ಕಳುವಿನ ಬಾಗಿಲುವಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಸಮರ್ಪಕ ನಿರ್ವಹಣೆಯಿಲ್ಲದೆ ಸಂಚಾರಕ್ಕೆ ದುಸ್ತರವಾಗಿದೆ.
ಈ ರಸ್ತೆ ಕಳುವಿನಬಾಗಿಲು ಮೂಲಕ ಗುಲ್ವಾಡಿ ಮೊದಲಾದ ಭಾಗಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದ್ದು, ಮುಖ್ಯವಾಗಿ ಬಳ್ಕೂರು ಗ್ರಾಪಂ ವ್ಯಾಪ್ತಿಯ ಜನವಸತಿ ಪ್ರದೇಶಗಳ ಪ್ರಮುಖ ಕೊಂಡಿಯಾಗಿದೆ. 2007ರಲ್ಲಿ ಅಭಿವೃದ್ಧಿಯಾದ ಈ ರಸ್ತೆ 2018ರಲ್ಲಿ ಡಾಂಬರುಗೊಂಡಿತ್ತು. ಬಳಿಕ ಇಷ್ಟು ವರ್ಷವಾದರೂ ದುರಸ್ತಿ ಇಲ್ಲದೆ ರಸ್ತೆಯಲ್ಲಿ ಹೊಂಡಗುಂಡಿಯಾಗಿದೆ. ಈಗ ಚೋಣನಗುಡ್ಡೆ ಅಂಗನವಾಡಿಯಿಂದ ರಸ್ತೆ ಸಂಪೂರ್ಣ ಹದಗೆಟ್ಟು ವಾಹನಗಳ ಸಂಚಾರಕ್ಕೆ ಕಷ್ಟವಾಗುತ್ತಿದೆ. ಇನ್ನು ಮಳೆಗಾಲ ಪ್ರಾರಂಭವಾಯಿತೆಂದರೆ ಸಂಚಾರಕ್ಕೆ ಸಂಪೂರ್ಣ ಅಡ್ಡಿಯಾಗಲಿದೆ.
ಕಳೆದ ಹತ್ತು ವರ್ಷಗಳಿಂದಿಚೆ ಈ ಭಾಗ ಸಾಕಷ್ಟು ಬೆಳೆದಿದೆ. ಜನವಸತಿ ಹೆಚ್ಚಾಗಿದೆ. ಈ ರಸ್ತೆಯನ್ನು ಅವಲಂಬಿಸುವ ವಾಹನಗಳ ಸಂಖ್ಯೆಯೂ ಹೆಚ್ಚಳವಾಗಿದೆ. ಬೆಳವಣಿಗೆಗೆ ತಕ್ಕಂತೆ ರಸ್ತೆ ಅಭಿವೃದ್ಧಿ ಕಂಡಿಲ್ಲ. ಗೋಪಾಲಕೃಷ್ಣ ದೇವಸ್ಥಾನ, ನಂದಿಕೇಶ್ವರ ದೇವಸ್ಥಾನಗಳಿಗೆ ಈ ರಸ್ತೆಯಲ್ಲಿಯೇ ಬರಬೇಕು. ಎರಡು ಕಡೆ ದಟ್ಟವಾದ ಮರಗಳು ಬೆಳೆದಿರುವ ಪ್ರದೇಶದಲ್ಲಿ ರಸ್ತೆ ಸಂಪೂರ್ಣ ಹೊಂಡ ಬಿದ್ದಿದೆ. ಇಲ್ಲಿ ಮಳೆಗಾಲದಲ್ಲಿ ಸಂಚರಿಸುವುದೇ ಕಷ್ಟ. ರಾತ್ರಿ ವೇಳೆ ಈ ದುರ್ಗಮ ರಸ್ತೆಯಲ್ಲಿ ವಾಹನ ಸವಾರರು ಸಂಚರಿಸಲು ಭಯ ಪಡುತ್ತಾರೆ. ಸರಿಯಾದ ಚರಂಡಿ ವ್ಯವಸ್ಥೆಯೂ ರಸ್ತೆಗೆ ಇಲ್ಲ. ಹಾಗಾಗಿ ಮಳೆ ನೀರು ರಸ್ತೆ ಮೇಲೆಯೇ ಹರಿಯುತ್ತದೆ.
ಅಸಮರ್ಪಕ ನಿರ್ವಹಣೆ
ರಸ್ತೆ ಇಷ್ಟೊಂದು ಹದಗೆಟ್ಟು ಹೋಗಿದ್ದರೂ ಸ್ಥಳೀಯ ಗ್ರಾಮ ಪಂಚಾಯಿತಿ ಕನಿಷ್ಠ ತೇಪೆ ಹಾಕುವ ಬಗ್ಗೆ ಆಲೋಚನೆ ಮಾಡಿಲ್ಲ ಎನ್ನುತ್ತಾರೆ ಗ್ರಾಮಸ್ಥರು. ಸಾಕಷ್ಟು ಜನವಸತಿ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯನ್ನು ಕಡೆಗಣಿಸುತ್ತಿರುವುದರಿಂದ ನಿತ್ಯವೂ ಈ ವಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ಹಿಡಿಶಾಪ ಹಾಕುತ್ತಿದ್ದಾರೆ. ಸಮರ್ಪಕವಾಗಿ ರಸ್ತೆ ನಿರ್ವಹಣೆ ವಾಡದೆ ರಸ್ತೆ ಹೀಗಾಗಿದೆ ಎನ್ನುತ್ತಾರೆ ಗ್ರಾಮಸ್ಥರು.
ಜವಾಬ್ದಾರಿಯುತ ಅಧಿಕಾರಿಗಳು, ಜನಪ್ರತಿನಿಧಿಗಳು ಸ್ವಲ್ಪವಾದರೂ ಕಾಳಜಿ ವಹಿಸಿದ್ದರೆ ರಸ್ತೆ ಇಷ್ಟೊಂದು ಹದಗೆಟ್ಟು ಹೋಗುತ್ತಿರಲಿಲ್ಲ. ಪ್ರಾರಂಭದಲ್ಲಿಯೇ ತೇಪೆ ಹಾಕಿ, ನಿರ್ವಹಣೆ ವಾಡಬೇಕಿತ್ತು. ಈಗ ಒಂದಿಷ್ಟು ಭಾಗದ ರಸ್ತೆಯನ್ನು ಪೂರ್ಣ ಹೊಸತಾಗಿ ಡಾಂಬರು ವಾಡಬೇಕಾಗುತ್ತದೆ. ಎರಡು ಕಡೆ ಬೃಹತ್ ಮರಗಳು ಇರುವ ಪ್ರದೇಶದಲ್ಲಿ ಕಾಂಕ್ರೀಟ್ ರಸ್ತೆ ವಾಡಿದರೆ ಉತ್ತಮ.