ನಗರಸಭೆ ಮಾಜಿ ಅಧ್ಯಕ್ಷ ಗುಜ್ಜಾಡಿ ಪ್ರಭಾಕರ್ ನಾಯಕ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಉಡುಪಿ: ಹಿರಿಯ ಸ್ವಯಂಸೇವಕ ಹಾಗೂ ಸ್ವರ್ಣ ಜುವೆರ್ಲಸ್ ಸಂಸ್ಥಾಪಕ ದಿ. ಗುಜ್ಜಾಡಿ ನರಸಿಂಹ ನಾಯಕ್ ಜನ್ಮಶತಮಾನೋತ್ಸವ ಅಂಗವಾಗಿ "ಗುಜ್ಜಾಡಿ ನೆನಪುಗಳು' ಕೃತಿಯ ಬಿಡುಗಡೆ ಸಮಾರಂಭ ಜುಲೈ 25ರಂದು ಬೆಳಿಗ್ಗೆ 10.30ಕ್ಕೆ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ನಡೆಯಲಿದೆ ಎಂದು ನಗರಸಭೆ ಮಾಜಿ ಅಧ್ಯಕ್ಷ ಗುಜ್ಜಾಡಿ ಪ್ರಭಾಕರ್ ನಾಯಕ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಕೃತಿ ಬಿಡುಗಡೆ ಮಾಡಲಿದ್ದಾರೆ. ಲೆಕ್ಕಪರಿಶೋಧಕ ಕೆ. ಉಲ್ಲಾಸ್ ಕಾಮತ್, ವಿಶ್ವ ಹಿಂದೂ ಪರಿಷತ್ನ ಎಂ.ಎನ್.ನಾಗರಾಜ್ ಹಾಗೂ ಎಒಜೆ ಮುಖ್ಯ ಸಂಪಾದಕ ಸುಮೇಶ್ ವಾಧೇರಾ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಪತ್ರಕರ್ತ ಸತೀಶ್ ಮಲ್ಯ ಅವರು ದಿವಂಗತ ನರಸಿಂಹ ನಾಯಕ್ ಅವರೊಂದಿಗೆ ನಡೆಸಿದ ಸಂದರ್ಶನಗಳ ಆಧಾರದ ಮೇಲೆ ಈ ಕೃತಿಯನ್ನು ಆತ್ಮಕಥನ ರೂಪದಲ್ಲಿ ಸಂಪಾದಿಸಲಾಗಿದೆ. ಪುಸ್ತಕದಲ್ಲಿ ಅವರ ವೈಯಕ್ತಿಕ ಮತ್ತು ಕೌಟುಂಬಿಕ ಜೀವನ, ವ್ಯಾಪಾರ ಕ್ಷೇತ್ರದಲ್ಲಿನ ಸಾಧನೆ ಹಾಗೂ ಸಾಮಾಜಿಕ ಬದುಕನ್ನು ಮೂರು ಪ್ರತ್ಯೇಕ ವಿಭಾಗಗಳಲ್ಲಿ ವಿವರಿಸಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸ್ವರ್ಣ ಜುವೆರ್ಲಸ್ ಪ್ರವರ್ತಕರಾದ ರಾಮ್ದಾಸ್ ನಾಯಕ್, ರಘುವೀರ್ ನಾಯಕ್, ದೀಪಕ್ ಹಾಗೂ ಅಭಯ್ ಉಪಸ್ಥಿತರಿದ್ದರು.