ರಾಘವೇಂದ್ರ ಪೈ ಗಂಗೊಳ್ಳಿ ಕುಂದಾಪುರ
ಗುಜ್ಜಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅನೇಕ ಪ್ರಮುಖ ರಸ್ತೆಗಳಲ್ಲಿ ರಾತ್ರಿ ವೇಳೆ ಕತ್ತಲು ಆವರಿಸುತ್ತಿದ್ದು, ಸಮರ್ಪಕ ಬೆಳಕಿನ ವ್ಯವಸ್ಥೆ ಇಲ್ಲದೆ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.
ಕೊಡಪಾಡಿಯಿಂದ ನಾಯಕವಾಡಿವರೆಗಿನ ತ್ರಾಸಿ ಗಂಗೊಳ್ಳಿ ಮುಖ್ಯರಸ್ತೆ, ನಾಯಕವಾಡಿ ಮುಳ್ಳಿಕಟ್ಟೆ ರಸ್ತೆ, ಗುಜ್ಜಾಡಿ ಮತ್ತು ನಾಯಕವಾಡಿಯಿಂದ ಬೆಣ್ಗೆರೆ ಸಂಪರ್ಕಿಸುವ ರಸ್ತೆ, ನಾಯಕವಾಡಿಯಿಂದ ಹೊಸಪೇಟೆ ಸಂಪರ್ಕಿಸುವ ರಸ್ತೆ, ಮಂಕಿ ಸಂಪರ್ಕ ರಸ್ತೆ, ಕೊಡಂಚ ರಸ್ತೆ ವಾರ್ಗದಲ್ಲಿ ಸೂಕ್ತ ದಾರಿದೀಪಗಳಿಲ್ಲದಿರುವುದು ಸಮಸ್ಯೆಯಾಗಿದೆ. ಸಂಜೆ ಕತ್ತಲಾಗುತ್ತಿದ್ದಂತೆಯೇ ಈ ದಾರಿಯಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ನಾಗರಿಕರಿಗೆ ಕಗ್ಗತ್ತಲಿನ ಪಯಣವಾಗುತ್ತಿದೆ. ಬೀದಿದೀಪಗಳ ಕೊರತೆಯಿಂದ ವಾಹನ ಸವಾರರು ಹಾಗೂ ಪಾದಚಾರಿಗಳು ರಾತ್ರಿ ಸಂಚಾರಕ್ಕೆ ಸಮಸ್ಯೆ ಎದುರಿಸುತ್ತಿದ್ದಾರೆ.
ಪ್ರಮುಖ ಸಂಪರ್ಕ ರಸ್ತೆಯಾಗಿರುವ ಈ ರಸ್ತೆಗಳು ಸಹಸ್ರಾರು ಜನರ ದೈನಂದಿನ ಸಂಚಾರಕ್ಕೂ ಪ್ರಮುಖವಾಗಿವೆ. ಹೀಗಿದ್ದರೂ ರಾತ್ರಿ ವೇಳೆಯಲ್ಲಿ ಅಗತ್ಯ ಬೆಳಕಿನ ವ್ಯವಸ್ಥೆ ಇಲ್ಲದಿರುವುದು ಗ್ರಾಮೀಣ ಮೂಲಸೌಕರ್ಯದ ವಾಸ್ತವ ಚಿತ್ರಣವನ್ನು ತೆರೆದಿಡುತ್ತಿದೆ. ಸಂಜೆಯಾಗುತ್ತಿದ್ದಂತೆ ರಸ್ತೆ ಕತ್ತಲಿನಲ್ಲಿ ಮುಳುಗುವುದರಿಂದ ದ್ವಿಚಕ್ರ ವಾಹನ ಸವಾರರು, ಪಾದಚಾರಿಗಳು ಹಾಗೂ ರಾತ್ರಿ ವೇಳೆ ಸಂಚರಿಸುವ ಸಾರ್ವಜನಿಕರು ಆತಂಕದಿಂದ ಪ್ರಯಾಣಿಸುವ ಪರಿಸ್ಥಿತಿ ನಿರ್ವಾಣವಾಗಿದೆ.
ರಸ್ತೆ ಬದಿಯಲ್ಲಿ ಸಮರ್ಪಕ ಬೆಳಕಿಲ್ಲದಿರುವುದು ಅಪಘಾತಗಳು ಸಂಭವಿಸುವ ಆತಂಕವನ್ನೂ ಹೆಚ್ಚಿಸಿದೆ. ಬಹುತೇಕ ಎಲ್ಲ ರಸ್ತೆಗಳ ಎರಡೂ ಬದಿಗಳಲ್ಲಿ ಬೆಳೆದು ನಿಂತಿರುವ ಹುಲ್ಲು ಗಿಡಗಂಟಿಗಳು ಪಾದಚಾರಿಗಳು ಹಾಗೂ ವಿದ್ಯಾರ್ಥಿಗಳ ಸಂಚಾರವನ್ನು ಅಪಾಯಕ್ಕೆ ತಳ್ಳುತ್ತಿವೆ. ರಸ್ತೆಯಲ್ಲಿ ವಾಹನ ಸಂಚಾರ ಇರುವುದರಿಂದ ಕತ್ತಲಿನಲ್ಲಿ ಪಾದಚಾರಿಗಳಾಗಿ ಸಾಗುವ ವಿದ್ಯಾರ್ಥಿಗಳ ಸುರಕ್ಷತೆ ಕುರಿತು ಪಾಲಕರಲ್ಲಿ ಆತಂಕ ಹೆಚ್ಚಾಗಿದೆ. ವಿಶೇಷವಾಗಿ ರಸ್ತೆ ಪರಿಚಯವಿಲ್ಲದ ವಾಹನ ಸವಾರರಿಗೆ ರಾತ್ರಿ ವೇಳೆ ಸಂಚರಿಸುವುದು ಸವಾಲಾಗಿದೆ.
ಒಂದು ಸಣ್ಣ ಅವಘಡ ಸಂಭವಿಸಿದ ಬಳಿಕ ಎಚ್ಚೆತ್ತುಕೊಳ್ಳುವುದಕ್ಕಿಂತ ಅದಕ್ಕೂ ಮುನ್ನ ವ್ಯವಸ್ಥೆ ಎಚ್ಚೆತ್ತುಕೊಳ್ಳಬೇಕಲ್ಲವೇ ಎಂಬ ಪ್ರಶ್ನೆ ಇದೀಗ ಸ್ಥಳೀಯರಿಂದ ಕೇಳಿಬರುತ್ತಿದೆ. ಸಮಸ್ಯೆಗೆ ಶಾಶ್ವತ ಪರಿಹಾರವಾಗಿ ರಸ್ತೆಯಲ್ಲಿ ದಾರಿದೀಪಗಳನ್ನು ಅಳವಡಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಕನಿಷ್ಠ ಸೋಲಾರ್ ದೀಪಗಳನ್ನಾದರೂ ಅಳವಡಿಸಿ ನಾಗರಿಕರಿಗೆ ಬೆಳಕಿನ ದಾರಿ ತೋರಿಸಬೇಕು ಎಂಬ ಬೇಡಿಕೆ ಕೇಳಿಬಂದಿದೆ. ಜತೆಗೆ ರಸ್ತೆ ಬದಿಯಲ್ಲಿ ಬೆಳೆದಿರುವ ಹುಲ್ಲು ಗಿಡಗಂಟಿಗಳನ್ನು ತಕ್ಷಣ ತೆರವುಗೊಳಿಸಿ ಅಗತ್ಯವಿರುವ ಕಡೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ದಾರಿದೀಪ ಅಳವಡಿಸಲು, ರಸ್ತೆ ಬದಿಯ ಹುಲ್ಲು ತೆರವುಗೊಳಿಸಲು ದೊಡ್ಡ ಅನುದಾನ ಬೇಕಿಲ್ಲ. ಪಂಚಾಯಿತಿಗೆ ಈಗಾಗಲೇ ಮನವಿ ನೀಡಿದರೂ ಪ್ರಯೋಜನವಾಗಿಲ್ಲ. ಇನ್ನಾದರೂ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಆವಶ್ಯಕತೆ ಇರುವ ಕಡೆಗಳಲ್ಲಿ ದಾರಿದೀಪ ಅಳವಡಿಕೆ, ಗಿಡಗಂಟಿಗಳ ತೆರವು ಸೇರಿದಂತೆ ಅಗತ್ಯ ಸುರಕ್ಷತಾ ಕ್ರಮಗಳನ್ನು ತಕ್ಷಣ ಕೈಗೊಳ್ಳಬೇಕು.ಸತೀಶ್ ಗುಜ್ಜಾಡಿ ಸ್ಥಳೀಯ ನಿವಾಸಿ
ಗುಜ್ಜಾಡಿ ಗ್ರಾಮದ ಅನೇಕ ರಸ್ತೆಗಳಲ್ಲಿ ದಾರಿದೀಪ ಅಳವಡಿಸಲು ಕ್ರಿಯಾಯೋಜನೆ ಸಿದ್ಧಪಡಿಸಲಾಗಿದ್ದು, ಅನುದಾನದ ಕೊರತೆಯಿಂದ ಸಮಸ್ಯೆಯಾಗಿದೆ. ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಆದ್ಯತೆ ಮೇರೆಗೆ ದಾರಿದೀಪ ಅಳವಡಿಸಲಾಗುವುದು. ಈ ಬಗ್ಗೆ ಸ್ಥಳೀಯಾಡಳಿತದ ಮೇಲೆ ಒತ್ತಡ ಹೇರಲಾಗುವುದು.ರಾಜು ಪೂಜಾರಿ ಗುಜ್ಜಾಡಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ