ಉಡುಪಿಯಲ್ಲಿ ಆಯೋಜಿಸಿದ್ದ ಗುಜರಾತ್ನ ಪಿಥೋರ ಚಿತ್ರಕಲೆಯ ಕಾರ್ಯಾಗಾರವನ್ನು ಡಾ. ಪಾದೇಕಲ್ಲು ವಿಷ್ಣು ಭಟ್ ಉದ್ಘಾಟಿಸಿದರು. ಡಾ. ಬಿ.ಜಗದೀಶ್ ಶೆಟ್ಟಿ, ಡಾ. ಅರುಣಕುಮಾರ್ ಎಸ್.ಆರ್., ಮಂಜುನಾಥ್ ರಾವ್ ಹಾವಂಜೆ, ಡಾ. ಜನಾರ್ದನ್ ರಾವ್, ನಾರನ್ ಭಾಯ್ ಎಚ್. ರಥ್ವ ಇದ್ದರು.
* ವಿದ್ವಾಂಸ ಡಾ. ಪಾದೇಕಲ್ಲು ವಿಷ್ಣು ಭಟ್ ಅನಿಸಿಕೆ
* ಪಿಥೋರ ಕಲೆಯ ಕಾರ್ಯಾಗಾರ ಉದ್ಘಾಟನೆ
ಉಡುಪಿ: ದೇಶದಲ್ಲಿ ಲಾಂತರ ಪ್ರಕಾರದ ಜನಪದ ಕಲೆಗಳಿವೆ. ಆದರೆ, ಕಾಲ ಉರುಳಿದಂತೆ ಆ ಕಲೆಗಳ ತಂತ್ರಗಾರಿಕೆ ನಶಿಸುವ ಸಂದರ್ಭವೇ ಹೆಚ್ಚಿದೆ. ಹೀಗಾಗಿ ಜನಪದ ಕಲೆಗಳ ವಿಶೇಷತೆ, ವೈಶಿಷ್ಟ್ಯ ಉಳಿಸುವಲ್ಲಿ ಇಂತಹ ಕಾರ್ಯಾಗಾರಗಳು ಮಹತ್ವದ್ದಾಗಿದೆ. ಜನಪದ ಚಿತ್ರಗಳಲ್ಲಿ ಭಾವ ಮುಖ್ಯವೇ ಹೊರತು ರೂಪ ಮುಖ್ಯವಲ್ಲ ಎಂದು ಹಿರಿಯ ವಿದ್ವಾಂಸ ಡಾ. ಪಾದೇಕಲ್ಲು ವಿಷ್ಣು ಭಟ್ ಅನಿಸಿಕೆ ವ್ಯಕ್ತಪಡಿಸಿದರು.
ಉಡುಪಿಯ ಎಂಜಿಎಂ ಕಾಲೇಜಿನ ಆವರಣದಲ್ಲಿರುವ ಧ್ವನ್ಯಾಲೋಕ ಸಭಾಂಗಣದಲ್ಲಿ ಭಾವನಾ ಫೌಂಡೇಷನ್ (ರಿ.), ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ಹಾವಂಜೆ, ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರದ ಜಂಟಿ ಆಶ್ರಯದಲ್ಲಿ ಶನಿವಾರ (ಜೂ.27) ಯೋಜಿಸಿದ್ದ ಜನಪದ ಕಲೆಗಳ ಸರಣಿ ಕಾರ್ಯಾಗಾರದಲ್ಲಿ ಗುಜರಾತ್ ರಾಜ್ಯದ 'ಪಿಥೋರ' ಜನಪದ ಕಲೆಯ ಕಲಿಕಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ.ಜಗದೀಶ್ ಶೆಟ್ಟಿ ಮಾತನಾಡಿದರು. ಕೇಂದ್ರದ ಸಹ ಸಂಶೋಧಕ ಡಾ. ಅರುಣಕುಮಾರ್ ಎಸ್.ಆರ್., ಭಾವನಾ ಫೌಂಡೇಷನ್ನ ಅಧ್ಯಕ್ಷ ಮಂಜುನಾಥ್ ರಾವ್ ಹಾವಂಜೆ ಉಪಸ್ಥಿತರಿದ್ದರು.
ಪಿಥೋರ ಚಿತ್ರಕಲೆಯನ್ನು ಗುಜರಾತ್ನ ರಥ್ವ ಜನಾಂಗದ ನಾರನ್ ಭಾಯ್ ಎಚ್. ರಥ್ವ ಅವರು ಶಿಬಿರಾರ್ಥಿಗಳಿಗೆ ಕಲಿಸಿಕೊಟ್ಟರು. ಕಾರ್ಯಾಗಾರದ ಸಂಯೋಜಕ, ಖ್ಯಾತ ಕಾವಿ ಕಲಾವಿದ ಡಾ. ಜನಾರ್ದನ್ ರಾವ್ ಹಾವಂಜೆ ಕಾರ್ಯಕ್ರಮ ನಿರ್ವಹಿಸಿದರು.
ಜನಪದ ಕಲೆಗಳ ಸರಣಿಯಲ್ಲಿ 20ನೇ ಕಾರ್ಯಾಗಾರ ಇದಾಗಿದೆ. ಕರಾವಳಿಯ ಕಲಾಸಕ್ತರಿಗೆ ದೇಸೀಯ ಅನ್ಯ ಕಲೆಗಳ ಪರಿಚಯ ಮಾಡುವುದು ಹಾಗೂ ನೈಸರ್ಗಿಕ ಕಲೆಗಳ ತಾಂತ್ರಿಕತೆ ವಿನ್ಯಾಸ, ರೂಪಗಳನ್ನು ಕಲಿಯುವುದಕ್ಕಾಗಿ ಹಮ್ಮಿಕೊಳ್ಳಲಾಗಿದೆ. ವಿವಿಧ ಪ್ರಾಂತ್ಯದ ಭಾರತೀಯ ಜನಪದ ಕಲೆಗಳನ್ನು ಉಡುಪಿಗೆ ಪರಿಚಯಿಸುವುದು ನಮ್ಮ ಉದ್ದೇಶ.
— ಡಾ. ಜನಾರ್ದನ್ ರಾವ್ ಹಾವಂಜೆ. ಖ್ಯಾತ ಕಾವಿ ಕಲಾವಿದ.