ಉಡುಪಿಯಲ್ಲಿ ಆಯೋಜಿಸಿದ್ದ ಗುಜರಾತ್​ ರಾಜ್ಯದ ಚಿತ್ರಕಲಾ ಶಿಬಿರವನ್ನು ಶಿಲ್ಪಾ ಭಟ್​ ಉದ್ಘಾಟಿಸಿದರು. ಮಮತಾ ರೈ, ಡಾ. ಜನಾರ್ದನ್​ ರಾವ್​ ಹಾವಂಜೆ, ಜಗದೀಶ್​ ಚಿತಾರ್​ ಹಾಗೂ ತರಬೇತು ಕಲಾವಿದರು ಇದ್ದರು. 
ಉಡುಪಿ

ಚಿತ್ರಕಲೆಗಳಲ್ಲಿದೆ ಪ್ರಕೃತಿ, ಸಂಸ್ಕೃತಿಯ ಶಿಕ್ಷಣ

* ಉದ್ಯಮಿ ಶಿಲ್ಪಾ ಭಟ್​ ಅನಿಸಿಕೆ

* ಜನಪದ ದೇಸೀಯ ಕಲಾ ತರಬೇತಿ ಶಿಬಿರ ಉದ್ಘಾಟನೆ

ಉಡುಪಿ: ಭಾರತದಲ್ಲಿ ನೂರಾರು ಬಗೆಯ ದೇಸೀಯ ಕಲೆಗಳಿದ್ದು, ಅವು ಉಳಿಯುವಂತಾಗಲು ಕಾರ್ಯಾಗಾರ ಸಹಕಾರಿ. ಇಂತಹ ಶಿಬಿರಗಳಿಂದ ಪುರಾಣ, ಐತಿಹಾಸಿಕ ಕಾಲದ ಕಲೆ, ಪ್ರಕೃತಿ, ಸಂಸ್ಕೃತಿಯ ಶಿಕ್ಷಣ ಲಭಿಸುತ್ತದೆ. ದೇಸೀಯ ಕಲೆಗಳನ್ನು ಉಡುಪಿಗೆ ಪರಿಚಯಿಸುತ್ತಿರುವ ಭಾವನಾ ಫೌಂಡೇಷನ್​ನ ಕಾರ್ಯ ಶ್ಲಾಘನೀಯ. ಇಂತಹ ನೂತನ ಕಾರ್ಯಕ್ರಮಗಳಿಗೆ ನಮ್ಮ ಸಂಸ್ಥೆಯೂ ಸಹಕರಿಸುತ್ತದೆ ಎಂದು ವೆಂಟನಾ ಫೌಂಡೇಷನ್​ನ ನಿರ್ದೇಶಕಿ ಶಿಲ್ಪಾ ಭಟ್​ ತಿಳಿಸಿದರು.
ಉಡುಪಿಯ ಬಡಗುಪೇಟೆಯಲ್ಲಿರುವ ಹತ್ತು ಮೂರು ಇಪ್ಪತ್ತೆಂಟು ಗ್ಯಾಲರಿಯಲ್ಲಿ ಭಾವನಾ ೌಂಡೇಷನ್​(ರಿ.) ಹಾವಂಜೆ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ, ಉಡುಪಿಯ ವೆಂಟನಾ ಫೌಂಡೇಷನ್​ ಸಹಯೋಗದಲ್ಲಿ ಶನಿವಾರ (ಫೆ.28) ಆಯೋಜಿಸಿದ್ದ ಜನಪದ ದೇಸೀಯ ಕಲೆಗಳ ಸರಣಿ ಕಾರ್ಯಾಗಾರದ ಮುಂದುವರಿದ ಭಾಗವಾಗಿ ಗುಜರಾತ್​ ರಾಜ್ಯದ 'ಕಲಂಕಾರಿ' ಮತ್ತು 'ಮಾತಾ ನಿ ಪಚೇಡಿ' ಚಿತ್ರಕಲಾ ಕಲಿಕೆಯ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಸಮಸ್ಯೆಯಾಯ್ತು ಸಾಧನೆ

ಕದಿಕೆ ಟ್ರಸ್ಟ್​ನ ಸ್ಥಾಪಕ ನಿರ್ದೇಶಕಿ ಮಮತಾ ರೈ ಮಾತನಾಡಿ, ಗುಜರಾತ್​ನ ದೇವಿಯರ ಆರಾಧನೆ ಕುರಿತ 'ಮಾತಾ ನಿ ಪಚೇಡಿ' ಕಲೆಯಲ್ಲಿ ಆಸಕ್ತಿದಾಯಕ ಇತಿಹಾಸವಿದೆ. ಅಡವಿಗಳಲ್ಲಿ ಪ್ರಾಣಿಗಳನ್ನು ಬೇಟೆಯಾಡಿ ಬದುಕುತ್ತಿದ್ದ ವಾಗ್ಡಿ ಬುಡಕಟ್ಟು (ಈಗಿನ ಚಿತಾರ ಕುಟುಂಬ) ಜನರಿಗೆ ದೇವಸ್ಥಾನಗಳಲ್ಲಿ ಪ್ರವೇಶ ಇರಲಿಲ್ಲ. ಹೀಗಾಗಿ ಅವರು ಮರದ ತುಂಡುಗಳ ಮೇಲೆ, ಬಟ್ಟೆಗಳ ಮೇಲೆ ದೇವಿಯರ ಚಿತ್ರ ರಚಿಸಿ ಆರಾಧಿಸಿದರು. ಆ ಸಮುದಾಯಕ್ಕಿದ್ದ ಧಾರ್ಮಿಕ ನೋವು, ಸಮಸ್ಯೆಯೇ ಸಾಧನೆಯಾಗಿ ಅದೊಂದು ಹೆಸರಾಂತ ಕಲೆಯಾಗಿ ಖ್ಯಾತಿಗೊಂಡಿದೆ ಎಂದರು.  

ದೇಶ-ವಿದೇಶಗಳಲ್ಲಿಯೂ ಬೇಡಿಕೆ

ಗುಜರಾತ್​ ಕಲಾವಿದ ಜಗದೀಶ್​ ವಾಗ್​ ಚಿತಾರ ಮಾತನಾಡಿ, ಈ ಕಲೆಗೆ 700 ವರ್ಷದ ಇತಿಹಾಸವಿದ್ದು, ನಮ್ಮ ಪೂರ್ವಜರಿಂದ ಬಳುವಳಿಯಾಗಿ ಬಂದಿದೆ. ಸ್ಥಳೀಯವಾಗಿ ಇರುವ ಬೀಸದ್​ ಮಾತಾ, ಮೆಲಡಿ ಮಾತಾ, ಕೋರಿಯಲ್​ ಮಾತಾ, ವಾನವಟಿ ಮಾತಾ ಹಾಗೂ ಮಮಾಯಿ ಮಾತಾ ಎಂಬ ದೇವಿಯರ ಚಿತ್ರ ರಚನೆಯೇ 'ಮಾತಾ ನಿ ಪಚೇಡಿ' ಕಲೆಯ ವಿಶೇಷತೆಯಾಗಿದೆ. ದೇಶ-ವಿದೇಶಗಳಲ್ಲಿ ಈ ಕಲೆಗೆ ಭಾರಿ ಬೇಡಿಕೆಯಿದೆ ಎಂದರು.
ಬಡಗುಪೇಟೆ ಗ್ಯಾಲರಿಯ ಸಂತೋಷ್​ ಪೈ, ತರಬೇತು ಕಲಾವಿದರಾದ ರೀತಾ ಚಿತಾರ, ಸುನೀಲ್​ ಚಿತಾರ, ಪರೇಶ್​ ಚಿತಾರ, ರಮೀಳಾ ಚಿತಾರ ಉಪಸ್ಥಿತರಿದ್ದರು. ಕಾರ್ಯಾಗಾರದ ಸಂಯೋಜಕ, ಖ್ಯಾತ ಕಾವಿ ಕಲಾವಿದ ಡಾ. ಜನಾರ್ದನ್​ ರಾವ್​ ಹಾವಂಜೆ ಕಾರ್ಯಕ್ರಮ ನಿರ್ವಹಿಸಿದರು.
"

ಭಾರತದಲ್ಲಿ 250ಕ್ಕೂ ಅಧಿಕ ಕಲಾ ಪ್ರಕಾರಗಳಿದ್ದು ಅವುಗಳಲ್ಲಿ 150ಕ್ಕೂ ಹೆಚ್ಚು ಕಲೆಯನ್ನು ಕಲಿಯಬಹುದಾಗಿದೆ. ದೇಸೀಯ ಕಲೆಗಳಲ್ಲಿರುವ ವಿವಿಧ ಸಾಂಪ್ರದಾಯಿಕ ಶೈಲಿ ಅರಿಯುವುದು, ಅವುಗಳನ್ನು ಉಡುಪಿಗೆ ಮುಖ್ಯವಾಗಿ ಯುವಪೀಳಿಗೆಗೆ ಪರಿಚಯಿಸುವುದು ಈ ಕಾರ್ಯಾಗಾರದ ಉದ್ದೇಶ.