ಮಣಿಪಾಲದ ಕೆಎಂಸಿಯಲ್ಲಿ ಆಯೋಜಿಸಿದ್ದ ಸಿಪಿಆರ್ ಮತ್ತು ಇಸಿಸಿ ತರಬೇತಿ ಕಾರ್ಯಕ್ರಮವನ್ನು ಡಾ. ಶರತ್ ಕುಮಾರ್ ರಾವ್ ಕೆ. ಉದ್ಘಾಟಿಸಿದರು. ಜಾನ್ ಕಿಮ್, ಡಾ. ಸಚಿನ್ ವಿ. ಮೆನನ್, ಡಾ. ಅನಿಲ್ ಕೆ. ಭಟ್, ಡಾ. ವಿಮಲ್ ಕೃಷ್ಣನ್ ಎಸ್., ಡಾ. ಸುಷ್ಮಾ ಪ್ರಭಾತ್ ಮತ್ತು ಡಾ. ನಿಶಾ ಸಾರಾ ಎಂ.ಜೆ. ಇದ್ದರು.
* ಡಾ. ಶರತ್ ಕುಮಾರ್ ರಾವ್ ಕೆ. ಅಭಿಪ್ರಾಯ
* ಕೆಎಂಸಿಯಲ್ಲಿ ಮಾರ್ಗಸೂಚಿ ಕಾರ್ಯಕ್ರಮ
ಉಡುಪಿ: ಜೀವ ಉಳಿಸುವ ಕೌಶಲ ತಳಮಟ್ಟದವರನ್ನು ತಲುಪಿದಾಗ ಮಾತ್ರ ಅಂತಹ ತರಬೇತಿಗಳ ಪ್ರಯೋಜನ ಲಭಿಸಲು ಸಾಧ್ಯ. ಪೊಲೀಸ್, ಆಶಾ ಕಾರ್ಯಕರ್ತರು, ಆಟೋ ಚಾಲಕರು, ಶಿಕ್ಷಕರು ಮತ್ತು ಇತರರಿಗೆ ಕಾರ್ಡಿಯೋಪಲ್ಮನರಿ ರಿಸಸಿಟೇಶನ್ (ಸಿಪಿಆರ್) ಜ್ಞಾನದ ತರಬೇತಿ ನೀಡಿದರೆ ಹೃದಯಾಘಾತದಿಂದ ಆಸ್ಪತ್ರೆಗೆ ಬರುವ ಮೊದಲೇ ಅನೇಕರ ಜೀವ ಉಳಿಸಬಹುದು. ಸಿಪಿಆರ್ ವೈದ್ಯರಿಗೆ ಮಾತ್ರವಲ್ಲ, ಇದು ಪ್ರತಿ ನಾಗರಿಕನೂ ತಿಳಿದಿರಬೇಕಾದ ಕೌಶಲವಾಗಿದೆ ಎಂದು ಮಾಹೆ ಮಣಿಪಾಲದ ಸಹ ಕುಲಪತಿ (ಆರೋಗ್ಯ ವಿಜ್ಞಾನ) ಡಾ. ಶರತ್ ಕುಮಾರ್ ರಾವ್ ಕೆ. ಅಭಿಪ್ರಾಯಪಟ್ಟರು.
ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜ್ (ಕೆಎಂಸಿ)ನಲ್ಲಿ ಅಮೆರಿಕನ್ ಹಾರ್ಟ್ ಅಸೋಸಿಯೇಷನ್ (ಎಎಚ್ಎ) ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಎಂಎಎಚ್ಇ)ನ ಆಶ್ರಯದಲ್ಲಿ ಆಯೋಜಿಸಿದ್ದ "ಭಾರತದಲ್ಲಿ ಕಾರ್ಡಿಯೋ ಪಲ್ಮನರಿ ರಿಸಸಿಟೇಶನ್ (ಸಿಪಿಆರ್) ಮತ್ತು ತುರ್ತು ಕಾರ್ಡಿಯೋವಾಸ್ಕುಲರ್ ಕೇರ್ (ಇಸಿಸಿ)ನ 2025ನೇ ಸಾಲಿನ ಮಾರ್ಗಸೂಚಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಎಎಚ್ಎಯ ಏಷ್ಯಾ ಪೆಸಿಫಿಕ್ ಉಪಾಧ್ಯಕ್ಷ ಜಾನ್ ಕಿಮ್ ಮಾತನಾಡಿ, ಹೃದಯ ತುರ್ತು ಸಂದರ್ಭಗಳಲ್ಲಿ ಬದುಕುಳಿಯುವ ಫಲಿತಾಂಶ ಸುಧಾರಿಸುವಲ್ಲಿ ಜಾಗತಿಕ ಸಹಯೋಗದ ಮಹತ್ವ ವಿವರಿಸಿದರು. ಎಎಚ್ಎ ಇಂಡಿಯಾ ಕನ್ಸಲ್ಟೆಂಟ್ನ ಪ್ರಾದೇಶಿಕ ನಿರ್ದೇಶಕ ಡಾ. ಸಚಿನ್ ವಿ. ಮೆನನ್ ಮಾತನಾಡಿ, ಪುನರುಜ್ಜೀವನ ತರಬೇತಿ ಬಲಪಡಿಸುವಲ್ಲಿ ಭಾರತೀಯ ಸಂಸ್ಥೆಗಳ ಬೆಂಬಲ ಶ್ಲಾಘಿಸಿದರು.
ಕೆಎಂಸಿಯ ಡೀನ್ ಡಾ. ಅನಿಲ್ ಕೆ. ಭಟ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆಎಂಸಿ ಮಣಿಪಾಲದ ತರಬೇತಿ ಕೇಂದ್ರದ ಸಂಯೋಜಕ ಡಾ. ವಿಮಲ್ ಕೃಷ್ಣನ್ ಎಸ್. ವಂದಿಸಿದರು. ಡಾ. ಸುಷ್ಮಾ ಪ್ರಭಾತ್ ಮತ್ತು ಡಾ. ನಿಶಾ ಸಾರಾ ಮುಂಡಪ್ಪಲ್ಲಿಲ್ ಜಾಕೋಬ್ ಕಾರ್ಯಕ್ರಮ ನಿರೂಪಿಸಿದರು.