ಉಡುಪಿ: ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆ ಫಲಾನುಭವಿಗಳ ದಾಖಲೆಗಳ ಮರುಪರಿಶೀಲನಾ ಅವಧಿಯನ್ನು ಅ. 31 ರ ವರೆಗೆ ವಿಸ್ತರಿಸಲಾಗಿದೆ ಎಂದು ಉಡುಪಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್ ಹೇಳಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮೆಸ್ಕಾಂ ಸಿಬ್ಬಂದಿ ಮೂರು ಬಾರಿ ಮನೆ ಭೇಟಿ ನೀಡಿದಾಗಲು ಫಲಾನುಭವಿಗಳು ಲಭ್ಯವಿಲ್ಲದಿದ್ದಲ್ಲಿ, ಫಲಾನುಭವಿಗಳು ಸಂಬಂಧಪಟ್ಟ ಮೆಸ್ಕಾಂ ಕಚೇರಿಗೆ ತೆರಳಿ ಮಾಹಿತಿಯನ್ನು ನೀಡಬಹುದಾಗಿದೆ ಎಂದರು.
ಗೃಹಲಕ್ಷ್ಮೀ ಯೋಜನೆಯಡಿ ಮಹಿಳೆಯರ ಬ್ಯಾಂಕ್ ಖಾತೆಗೆ ಜಮೆ ಆಗುವ ಮಾಸಿಕ ಸಹಾಯಧನದ ಹಣವನ್ನು ಹಿಂದಿನ ಸಾಲದ ಕಂತು ಅಥವಾ ಬಡ್ಡಿಯ ನೆಪದಲ್ಲಿ ಬ್ಯಾಂಕುಗಳು ನೇರವಾಗಿ ಕಡಿತಗೊಳಿಸುವಂತಿಲ್ಲ. ಈ ಬಗ್ಗೆ ಸರ್ಕಾರ ಆದೇಶ ಹೊರಡಿಸಿದೆ. 2000 ರೂ. ಆರ್ಥಿಕ ಸಹಾಯಧನ ಐದು- ಆರು ತಿಂಗಳಿನಿಂದ ಪಾವತಿಯಾಗುತ್ತಿಲ್ಲ ಎಂಬುದಾಗಿ ಫಲಾನುಭವಿ ಮಹಿಳೆಯರಿಂದ ದೂರುಗಳು ಕೇಳಿ ಬರುತ್ತಿವೆ. ಹಣ ಜಮೆಯಾದ ಬಗ್ಗೆ ಬ್ಯಾಂಕುಗಳಿಂದ ಸಂದೇಶ ಬಾರದ ಹಿನ್ನೆಲೆ, ಈ ರೀತಿಯ ಗೊಂದಲಗಳು ಉಂಟಾಗುತ್ತಿವೆ. ಫಲಾನುಭವಿಗಳು ಆಗಿಂದಾಗ್ಗೆ ತಮ್ಮ ಬ್ಯಾಂಕ್ ಪಾಸ್ ಪುಸ್ತಕಗಳನ್ನು ಪರಿಶೀಲಿಸಿ, ಹಣ ಪಾವತಿ ಆಗಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಅರ್ಹ ಫಲಾನುಭವಿಗಳ ಖಾತೆಗೆ ಯೋಜನೆಯ ಹಣ ಜಮೆಯಾಗುವ ಸಂದರ್ಭದಲ್ಲಿ ಮೊಬೈಲ್ಗಳಿಗೆ ಸಂದೇಶ ರವಾನಿಸುವ ಬಗ್ಗೆ ಜಿಲ್ಲಾ ಲೀಡ್ ಬ್ಯಾಂಕ್ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದರು.
900 ಮೃತ ಫಲಾನುಭವಿಗಳು
ತಾಲೂಕಿನಲ್ಲಿ 900 ಮಂದಿ ಮೃತ ಫಲಾನುಭವಿಗಳ ಖಾತೆಗೆ ಹಣ ಜಮೆಯಾಗಿದೆ. ಕುಟುಂಬಸ್ಥರು ಎಟಿಎಂ ಮೂಲಕ ಹಣ ಪಡೆದಿದ್ದಾರೆ. ಈ ಬಗ್ಗೆ ಪರಿಶೀಲನಾ ಕಾರ್ಯ ಮಾತ್ರ ನಡೆಯುತ್ತಿದ್ದು, ಇದಕ್ಕೆ ಕುಟುಂಬಸ್ಥರು ಅಗತ್ಯ ಸಹಕಾರ ನೀಡಬೇಕು ಎಂದರು.
ಅ. 20ರೊಳಗೆ ಇ-ಕೆವೈಸಿ ಮಾಡಿ
ಅನ್ನ ಭಾಗ್ಯ ಯೋಜನೆಯಡಿ ಪ್ರತಿಯೊಬ್ಬ ಪಡಿತರ ಚೀಟಿದಾರರು ಇ-ಕೆವೈಸಿ ಮಾಡಿಸಬೇಕು. ಈಗಾಗಲೇ ಉಡುಪಿ ತಾಲೂಕಿನಲ್ಲಿ ಶೇ. 81ರಷ್ಟು ಇ-ಕೆವೈಸಿ ಕಾರ್ಯ ಪೂರ್ಣಗೊಂಡಿದ್ದು, ಅ. 20ರೊಳಗೆ ಬಾಕಿ ಉಳಿದಿರುವ ಇ-ಕೆವೈಸಿ ಕಾರ್ಯ ಪೂರ್ಣಗೊಳ್ಳಬೇಕು. ನಾಗರಿಕರು ಅನ್ನಸೇವೆ ಆಪ್ ಮೂಲಕವೂ ಸ್ವಯಂ ಇ-ಕೆವೈಸಿ ಮಾಡಿಕೊಳ್ಳಬಹುದು ಎಂದರು.
ಸರ್ಕಾರಿ ಬಸ್ಗೆ ಬೇಡಿಕೆ
ಶಕ್ತಿ ಯೋಜನೆಯಡಿ ಕೊರೋನಾ ನಂತರ ಸ್ಥಗಿತಗೊಂಡಿದ್ದ ಕೆಲವು ರೂಟ್ಗಳ ಬಸ್ಗಳು ಇಂದಿಗೂ ಸಂಚರಿಸುತ್ತಿಲ್ಲ. ಪ್ರತಿ ಸಭೆಗಳಲ್ಲಿಯೂ ಬಡಗುಬೆಟ್ಟುವಿಗೆ ನಿಗಮದ ಬಸ್ನ ಸಂಚಾರ ಕಲ್ಪಿಸುವಂತೆ ಸಮಿತಿಯ ಸದಸ್ಯರು ಒತ್ತಾಯಿಸುತ್ತಿದ್ದರೂ ಸಹ ಇದು ಕಾರ್ಯರೂಪಕ್ಕೆ ಬಂದಿಲ್ಲ. ಆದಷ್ಟು ಶೀಘ್ರವಾಗಿ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ಪದವಿ ಪೂರೈಸಿದ ಯುವಜನರಿಗೆ ಉದ್ಯೋಗ ದೊರಕುವವರೆಗೆ ಆರ್ಥಿಕ ಸಹಾಯಧನ ನೀಡಲು ರೂಪಿಸಿರುವ ಯುವನಿಧಿ ಯೋಜನೆಗಳ ಬಗ್ಗೆ ಅರಿವು ಕಾರ್ಯಕ್ರಮಗಳನ್ನು ಕಾಲೇಜುಗಳಲ್ಲಿ ಏರ್ಪಡಿಸಬೇಕು. ಯೋಜನೆಯಡಿ ನೋಂದಣಿ ಕಾರ್ಯಕ್ರಮಗಳು ನಡೆಯುವ ಬಗ್ಗೆ ಯುವಜನರಲ್ಲಿ ಹೆಚ್ಚಿನ ಪ್ರಚಾರ ಮೂಡಿಸಬೇಕು. ಪ್ರಜಾಸೇವಾ ಆಂದೋಲನ ಸಭೆಗಳಲ್ಲಿ ಈ ಯೋಜನೆಯ ಬಗ್ಗೆ ಸಮಸ್ಯೆಗಳು ಬಂದಾಗ ಆದಷ್ಟು ತಮ್ಮ ಹಂತದಲ್ಲಿಯೇ ಬಗೆಹರಿಸಲು ಮುಂದಾಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಪ್ರತಿ ಪಂಚಾಯಿತಿಯಲ್ಲಿ ಗ್ಯಾರೆಂಟಿ ಸಭೆ
ಸರ್ಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಿ, ಅರ್ಹ ಫಲಾನುಭವಿಗಳು ಯೋಜನೆಗಳಿಂದ ಹೊರಗುಳಿಯದಂತೆದಂತೆ ನೋಡಿಕೊಳ್ಳಬೇಕು. ತಾಲೂಕಿನ 16 ಗ್ರಾಪಂಗಳಲ್ಲಿ ಗ್ಯಾರೆಂಟಿ ಸಮಾವೇಶ ಹಮ್ಮಿಕೊಳ್ಳಲಾಗುವುದು ಎಂದರು.
ಸಭೆಯಲ್ಲಿ ತಾಪಂ ಕಾರ್ಯನಿರ್ವಹಣಾಧಿಕಾರಿ ವಿಜಯಾ, ತಾಪಂ ಸಹಾಯಕ ನಿರ್ದೇಶಕಿ ಫರ್ಜಾನಾ ಎಂ. ಮತ್ತಿತರರು ಉಪಸ್ಥಿತರಿದ್ದರು.