ಬೆಳಪುವಿನಲ್ಲಿ ಹಮ್ಮಿಕೊಂಡ ಹಸಿರೀಕರಣ ಯೋಜನೆಗೆ ದೇವಿಪ್ರಸಾದ್ ಶೆಟ್ಟಿ ಗಿಡ ನೆಟ್ಟು ಚಾಲನೆ ನೀಡಿದರು. ಪ್ರಮುಖರಾದ ರವೀಂದ್ರಕುಮಾರ್, ಅನುಷಾ ಭಟ್, ನಾಗೇಶ್ ಬಿಲ್ಲವ, ಪ್ರವೀಣ್ ಡಿಸೋಜ ಮತ್ತಿತರರಿದ್ದರು.
ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಶೈಕ್ಷಣಿಕ, ಔದ್ಯೋಗಿಕವಾಗಿ ಬೆಳೆಯುತ್ತಿರುವ ಬೆಳಪು ಗ್ರಾಮದಲ್ಲಿ ಹಸಿರುವನ ನಿರ್ಮಾಣಕ್ಕೂ ವಿಶೇಷ ಆದ್ಯತೆ ನೀಡಲಾಗುತ್ತಿದೆ. ಲಕ್ಷ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು, ಮನೆಗೊಂದು ಮಗು- ಮಗುವಿಗೊಂದು ಗಿಡ ಕಾರ್ಯಕ್ರಮದಡಿ ಮನೆ ಮನೆಗೆ ಸಸಿ ಕೊಟ್ಟು ಅದನ್ನು ಬೆಳೆಸಲು ಆದ್ಯತೆ ನೀಡಲಾಗಿದೆ ಎಂದು ಬೆಳಪು ಗ್ರಾಪಂ ಮಾಜಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಹೇಳಿದರು.
ಸಾಮಾಜಿಕ ಅರಣ್ಯ ವಿಭಾಗ ಉಡುಪಿ ವಲಯ, ಉಪ ವಲಯ ಅರಣ್ಯಾಧಿಕಾರಿಗಳ ಸಂಘ ಉಡುಪಿ ಜಿಲ್ಲೆ, ಬೆಳಪು ಗ್ರಾಮ ಪಂಚಾಯಿತಿ ಮತ್ತು ಬೆಳಪು ಸರ್ಕಾರಿ ಸಂಯುಕ್ತ ಪ್ರೌಢಶಾಲೆ ಸಹಯೋಗದಲ್ಲಿ ಬೆಳಪು ಪಿಜಿ ಸೆಂಟರ್-ಅತ್ಯಾಧುನಿಕ ವಿಜ್ಞಾನ ಸಂಶೋಧನಾ ಕೇಂದ್ರದ ಸುತ್ತಲಿನ ಪ್ರದೇಶದಲ್ಲಿ ಗಿಡ ನೆಟ್ಟು ಮರ ಬೆಳೆಸುವ ಹಸಿರೀಕರಣ ಯೋಜನೆಗೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.
ಸಾಮಾಜಿಕ ಅರಣ್ಯ ಯೋಜನೆಯಡಿ ಒಂದೂವರೆ ಸಾವಿರ ಗಿಡ ನೆಟ್ಟು ಪೋಷಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಿದ್ದು, ಪ್ರಕೃತಿ ಬೆಳೆಸಲು ಒತ್ತು ನೀಡಲಾಗುತ್ತಿದೆ ಎಂದರು.
ಸಾಮಾಜಿಕ ಅರಣ್ಯ ವಿಭಾಗದ ಉಡುಪಿ ಉಪ ಅರಣ್ಯ ಸಂರಕ್ಷಾಧಿಕಾರಿ ರವೀಂದ್ರ ಕುಮಾರ್ ಡಿ.ಎನ್. ಮಾತನಾಡಿದರು. ಸಾಮಾಜಿಕ ಅರಣ್ಯ ವಿಭಾಗದ ವಲಯ ಅರಣ್ಯಾಧಿಕಾರಿ ಅನುಷಾ ಭಟ್, ಉಪ ವಲಯ ಅರಣ್ಯಾಧಿಕಾರಿಗಳ ಸಂಘದ ಅಧ್ಯಕ್ಷ ನಾಗೇಶ್ ಬಿಲ್ಲವ, ಉಪ ವಲಯ ಅರಣ್ಯಾಧಿಕಾರಿಗಳಾದ ರವಿ, ನಾಗರಾಜ್, ಸುರೇಶ್ ಗಾಣಿಗ, ಜಿ.ಕೃಷ್ಣಪ್ಪ, ಬೆಳಪು ಪಿಡಿಒ ಪ್ರವೀಣ್ ಡಿಸೋಜ, ಕಾರ್ಯದರ್ಶಿ ಚಂದ್ರಕಲಾ ಆಚಾರ್ಯ, ಬೆಳಪು ಸರ್ಕಾರಿ ಸಂಯುಕ್ತ ಪ್ರೌಢಶಾಲೆ ಮುಖ್ಯಶಿಕ್ಷಕಿ ಆಶಾ ಕೆ., ಬೆಳಪು ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಶಹನವಾಜ್, ಪ್ರಮುಖರಾದ ಮುಷ್ತಾಕ್ ಸಾಹೇಬ್, ಸುಲೇಮಾನ್ ಉಪಸ್ಥಿತರಿದ್ದರು.
ಈ ಯೋಜನೆಯಡಿ ಉಡುಪಿ ವಿಭಾಗದಲ್ಲಿ 8 ಸಾವಿರ ಗಿಡಗಳನ್ನು ನೆಡಲಾಗುತ್ತಿದ್ದು, ಬೆಳಪು ಗ್ರಾಮವೊಂದರಲ್ಲೇ ಒಂದೂವರೆ ಸಾವಿರ ಗಿಡಗಳನ್ನು ನೆಡಲಾಗುತ್ತಿದೆ. ನೆಟ್ಟ ಗಿಡಗಳನ್ನು ಮೂರು ವರ್ಷಗಳ ಕಾಲ ಪೋಷಿಸಿ, ಸಮೃದ್ಧಗೊಳಿಸಲಾಗುವುದು.
— ರವೀಂದ್ರ ಕುಮಾರ್ ಡಿ.ಎನ್. ಸಾಮಾಜಿಕ ಅರಣ್ಯ ವಿಭಾಗದ ಉಡುಪಿ ಉಪ ಅರಣ್ಯ ಸಂರಕ್ಷಾಧಿಕಾರಿ