ಕಾಸರಗೋಡು ಸರ್ಕಾರಿ ಕಾಲೇಜಿನಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಸಾಹಿತಿ ಕಾ.ತ.ಚಿಕ್ಕಣ್ಣ ಉದ್ಘಾಟಿಸಿದರು. ಪ್ರಾಂಶುಪಾಲ ಡಾ.ವಿ.ಎಸ್.ಅನಿಲ್ ಕುಮಾರ್, ಕನ್ನಡ ವಿಭಾಗದ ಮುಖ್ಯಸ್ಥೆ ಸುಜಾತಾ ಎಸ್. ಉಪಸ್ಥಿತರಿದ್ದರು. 
ಉಡುಪಿ

ಸಾಮಾಜಿಕ ಅಸಮಾನತೆ ವಿರೋಧಿಸಿದ ಮಹಾನ್ ದಾರ್ಶನಿಕರು

ಕಾಸರಗೋಡು: ಬಸವಣ್ಣ ಮತ್ತು ಕನಕದಾಸರು ಜಾತಿ ತಾರತಮ್ಯ, ಸಾಮಾಜಿಕ ಅಸಮಾನತೆ, ಮೂಢನಂಬಿಕೆ, ಕಂದಾಚಾರಗಳನ್ನು ವಿರೋಧಿಸಿದ ಕನ್ನಡ ಕಾವ್ಯ ಪರಂಪರೆಯ ಮಹಾನ್ ದಾರ್ಶನಿಕರಾಗಿದ್ದಾರೆ ಎಂದು ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷ ಕಾ.ತ.ಚಿಕ್ಕಣ್ಣ ಹೇಳಿದರು.

ಕಾಸರಗೋಡು ಸರ್ಕಾರಿ ಕಾಲೇಜಿನ ಸಭಾಂಗಣದಲ್ಲಿ ಬೆಂಗಳೂರು ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ ಹಾಗೂ ಕಾಸರಗೋಡು ಸರ್ಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಸಹಯೋಗದಲ್ಲಿ ‘ಬಸವಣ್ಣ ಮತ್ತು ಕನಕದಾಸರು: ತೌಲನಿಕ ನೋಟ’ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಪ್ರಾಂಶುಪಾಲ ಡಾ.ವಿ.ಎಸ್.ಅನಿಲ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ವಿಚಾರ ಸಂಕಿರಣದ ಶೈಕ್ಷಣಿಕ ಗೋಷ್ಠಿಗಳಲ್ಲಿ, ‘ಬಸವಣ್ಣ ಮತ್ತು ಕನಕದಾಸರು: ಮಾನವ ಸಂಬಂಧಗಳು’ ಕುರಿತು ಮಂಗಳೂರಿನ ಅಲೋಶಿಯಸ್ ವಿವಿ ಪ್ರಾಧ್ಯಾಪಕ ಡಾ.ದಿನೇಶ್ ನಾಯಕ್, ‘ಬಸವಣ್ಣ ಮತ್ತು ಕನಕದಾಸರ ಸಾಹಿತ್ಯದಲ್ಲಿ ದೇಸೀ ಮೀಮಾಂಸೆ’ ಕುರಿತು ಉಜಿರೆ ಎಸ್‌ಡಿಎಂ ಕಾಲೇಜಿನ ಪ್ರಾಧ್ಯಾಪಕಿ ಡಾ.ಬೋಜಮ್ಮ ಕೆ.ಎನ್. ಹಾಗೂ ‘ಬಸವಣ್ಣ-ಕನಕದಾಸರು: ವರ್ತಮಾನದ ನೋಟ’ ಕುರಿತು ಕಾಸರಗೋಡು ಕೇಂದ್ರೀಯ ವಿವಿ ಪ್ರಾಧ್ಯಾಪಕಿ ಡಾ.ಸೌಮ್ಯಾ ವಿಷಯ ಮಂಡಿಸಿದರು.
ವಿಚಾರ ಸಂಕಿರಣದ ಅಂಗವಾಗಿ ಕೀರ್ತನ ಗಾಯನ ನಡೆಯಿತು. ಅಕ್ಷತಾ, ಬಬಿತಾ ಆಚಾರ್ಯ, ಗಣೇಶ, ಮಹಾಲಿಂಗ ಭಟ್, ದಿನೇಶ ಕೆ.ಎಸ್., ಜಗದೀಶ ಉಪ್ಪಳ, ಸ್ವರಾಜ್ ಉಪ್ಪಳ ಕಲಾವಿದರಾಗಿ ಸಹಕರಿಸಿದರು. ಕನ್ನಡ ವಿಭಾಗದ ಮುಖ್ಯಸ್ಥೆ ಸುಜಾತಾ ಎಸ್. ಸ್ವಾಗತಿಸಿದರು. ಡಾ.ಬಾಲಕೃಷ್ಣ ಹೊಸಂಗಡಿ, ಡಾ.ಆಶಾಲತಾ ಸಿ.ಕೆ. ಕಾರ್ಯಕ್ರಮ ನಿರ್ವಹಿಸಿದರು.