ಉಡುಪಿಯ ಉಚ್ಚಿಲ ಮಹಾಲಕ್ಷ್ಮೀ ದೇಗುಲಕ್ಕೆ ಭೇಟಿ ನೀಡಿದ್ದ ಡಿ.ಕೆ. ಶಿವಕುಮಾರ್​ ಅವರಿಗೆ ಯಶ್​ಪಾಲ್​ ಸುವರ್ಣ ಮನವಿ ಸಲ್ಲಿಸಿದರು. 
ಉಡುಪಿ

ಮೂಲಸೌಕರ್ಯಕ್ಕೆ ನೀಡಿ 50 ಕೋಟಿ ರೂ. ಅನುದಾನ

* ಸಿಎಂ ಡಿ.ಕೆ. ಶಿವಕುಮಾರ್​ಗೆ ಶಾಸಕ ಯಶ್​ಪಾಲ್​ ಮನವಿ

ಉಡುಪಿ: ಉಡುಪಿ ವಿಧಾನಸಭಾ ಕ್ಷೇತ್ರ ಸೇರಿದಂತೆ ಜಿಲ್ಲೆಯ ಸಮಗ್ರ ಅಭಿವೃದ್ಧಿ ಹಾಗೂ ಜನರಿಗಿರುವ ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ 50 ಕೋಟಿ ರೂ. ವಿಶೇಷ ಅನುದಾನ ಬಿಡುಗಡೆ ಮಾಡುವಂತೆ ಶಾಸಕ ಯಶ್​ಪಾಲ್​ ಸುವರ್ಣ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ಇತ್ತೀಚೆಗೆ ಉಚ್ಚಿಲ ಮಹಾಲಕ್ಷ್ಮೀ ದೇಗುಲಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಬೇಡಿಕೆಗಳ ಮನವಿ ಸಲ್ಲಿಸಿದರು.

ಜಿಲ್ಲೆಯಲ್ಲಿರುವ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಅವರ ಸಹಾಯಕಿಯರು, ವಿಶೇಷ ಚೇತನ ಮಕ್ಕಳ ಶಿಕ್ಷಕರು, ದೇವಸ್ಥಾನಗಳ ಅರ್ಚಕರು ಮತ್ತು ಸಿಬ್ಬಂದಿ ಹಾಗೂ ಸರ್ಕಾರಿ ಶಾಲೆಗಳ ಅತಿಥಿ ಶಿಕ್ಷಕರಿಗೆ ಸೇವಾ ಭದ್ರತೆ ಕಲ್ಪಿಸಬೇಕು. ಅವರ ಸೇವೆಗೆ ತಕ್ಕಂತೆ ಸಮರ್ಪಕ ಸೌಲಭ್ಯ ಒದಗಿಸಿ, ಆರ್ಥಿಕ ಸ್ಥಿರತೆ ಮತ್ತು ಉದ್ಯೋಗ ಭದ್ರತೆ ಖಚಿತಪಡಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ರಸ್ತೆ, ಚರಂಡಿ, ಕಾಲುಸಂಕ, ತಡೆಗೋಡೆ ಹಾಗೂ ಬೀದಿದೀಪ ಸೇರಿದಂತೆ ಮೂಲ ಸೌಕರ್ಯಗಳ ಅಭಿವೃದ್ಧಿ ಆಗಬೇಕಿದೆ. ನಾಡದೋಣಿ ಮೀನುಗಾರರು ಸೀಮೆಎಣ್ಣೆ ಬೆಲೆ ಹಾಗೂ ನಿರ್ವಹಣಾ ವೆಚ್ಚದ ಹೆಚ್ಚಳದಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಸೀಮೆಎಣ್ಣೆ ಸಬ್ಸಿಡಿ ಹೆಚ್ಚಿಸಿ ಸಾಂಪ್ರದಾಯಿಕ ಮೀನುಗಾರರ ಜೀವನೋಪಾಯಕ್ಕೆ ನೆರವಾಗಬೇಕು ಎಂದು ಆಗ್ರಹಿಸಿದ್ದಾರೆ.

ಮಲ್ಪೆ ಮೀನುಗಾರಿಕಾ ಬಂದರಿನ ಸಮಗ್ರ ಅಭಿವೃದ್ಧಿಗಾಗಿ ನೂತನ ಜಟ್ಟಿ, ಔಟರ್​ ಹಾರ್ಬರ್​ ನಿರ್ಮಾಣ, ಸಮರ್ಪಕ ಪಾರ್ಕಿಂಗ್​ ಹಾಗೂ ಅಗತ್ಯ ಮೂಲಸೌಕರ್ಯಗಳ ಅಭಿವೃದ್ಧಿಗೆ ತುರ್ತಾಗಿ 50 ಕೋಟಿ ರೂ. ವಿಶೇಷ ಅನುದಾನ ಮಂಜೂರು ಮಾಡುವಂತೆ ಕೋರಿದ್ದಾರೆ.

ಜಿಲ್ಲೆಯಲ್ಲಿ ಜನ ಸಾಮಾನ್ಯರಿಗೆ ಕಟ್ಟಡ ನಿರ್ಮಾಣ ಸಾಮಗ್ರಿ ಲಭ್ಯತೆ ಹಿನ್ನೆಲೆಯಲ್ಲಿ ಕ್ವಾರಿ, ಸ್ಟೋನ್​ ಕ್ರಷರ್​ ಹಾಗೂ ಎಂ-ಸ್ಯಾಂಡ್​ ಉದ್ಯಮ ಎದುರಿಸುತ್ತಿರುವ ಸಮಸ್ಯೆ ತುರ್ತಾಗಿ ಪರಿಹರಿಸಬೇಕು. ನಿರ್ಮಾಣ ಸಾಮಗ್ರಿಗಳ ಪೂರೈಕೆಯಲ್ಲಿನ ಅಡಚಣೆ ನಿವಾರಿಸಿ, ಸಂಬಂಧಪಟ್ಟ ಇಲಾಖೆಗಳ ಸಮನ್ವಯದೊಂದಿಗೆ ಕಾನೂನುಬದ್ಧ ಹಾಗೂ ಕಾರ್ಯಸಾಧ್ಯ ಪರಿಹಾರ ರೂಪಿಸುವಂತೆ ಶಾಸಕ ಯಶ್​ಪಾಲ್​ ಮುಖ್ಯಮಂತ್ರಿ ಶಿವಕುಮಾರ್​ ಅವರಿಗೆ ಮನವಿ ಮಾಡಿದ್ದಾರೆ.