ಸಾಂದರ್ಭಿಕ ಚಿತ್ರ 
ಉಡುಪಿ

ಅನುದಾನವಿಲ್ಲದೆ ಗ್ರಾಪಂ ಅಸಹಾಯಕ

ನೆರವಿಗೆ ರಾಜ್ಯ ಸರ್ಕಾರಕ್ಕೆ ಮೊರೆ

ವಿಜಯವಾಣಿ ಸುದ್ದಿಜಾಲ ಕುಂದಾಪುರ

ಗ್ರಾಮ ಪಂಚಾಯಿತಿಗಳಿಗೆ ನೆರವಾಗಿದ್ದ ಕೇಂದ್ರ ಸರ್ಕಾರದ 15ನೇ ಹಣಕಾಸು ಆಯೋಗದ ಅನುದಾನ ಎರಡು ವರ್ಷಗಳಿಂದ ಬಾರದ ಕಾರಣ ಜಿಲ್ಲೆಯ ಗ್ರಾಪಂಗಳ ಆರ್ಥಿಕ ಸ್ಥಿತಿ ಉಸಿರುಗಟ್ಟಿದಂತಾಗಿದೆ. ಗ್ರಾಮೀಣ ಜನರಿಗೆ ಮೂಲಸೌಕರ್ಯ ಕಲ್ಪಿಸಲು ಪಿಡಿಒಗಳು ಮತ್ತು ಅಧಿಕಾರಿಗಳು ಹೆಣಗಾಡಬೇಕಾದ ಪರಿಸ್ಥಿತಿ ಎದುರಾಗಿದೆ.

ಜನಸಂಖ್ಯೆಗೆ ಅನುಗುಣವಾಗಿ ಗ್ರಾಪಂಗಳಿಗೆ 20ರಿಂದ 40 ಲಕ್ಷದವರೆಗೆ ಹಾಗೂ ಅದಕ್ಕೂ ಹೆಚ್ಚಿಗೆ ಬರುತ್ತಿದ್ದ 15ನೇ ಹಣಕಾಸು ಆಯೋಗದ ಅನುದಾನ ಇನ್ನೂ ಬಂದಿಲ್ಲ. ಜಿಲ್ಲೆಯಲ್ಲಿ 155 ಗ್ರಾಪಂಗಳಿವೆ. ಆಯಾ ಗ್ರಾಪಂ ವ್ಯಾಪ್ತಿಯಲ್ಲಿ ಸ್ಥಳೀಯವಾಗಿ ಸಂಗ್ರಹವಾಗುವ ತೆರಿಗೆ ಹಣದಿಂದಲೇ ಗ್ರಾಮೀಣ ಜನರಿಗೆ ಮೂಲಸೌಕರ್ಯ ಒದಗಿಸುವ ಕೆಲಸ ನಡೆಯುತ್ತಿದೆ. ಆದರೂ, ಇದು ಸಾಲುತ್ತಿಲ್ಲ ಎಂದು ಪಿಡಿಒಗಳು ಹೇಳುತ್ತಿದ್ದಾರೆ.

ವಿದ್ಯುತ್ ಸಂಪರ್ಕ ಕಡಿತ ಭೀತಿ

ಈ ಬಾರಿ ಭೀಕರ ಬರಗಾಲ ಎದುರಾಗಿದ್ದು, ಹಲವೆಡೆ ಕುಡಿಯುವ ನೀರಿನ ಸಮಸ್ಯೆ ತಲೆದೋರುತ್ತಿದೆ. ಚರಂಡಿ ಸ್ವಚ್ಛತೆ, ಬೀದಿದೀಪ ಅಳವಡಿಕೆ, ಪಂಪ್ ದುರಸ್ತಿ, ಪಂಪ್ ಇಲೆಕ್ಟ್ರಾನಿಕ್ ಮೆಟಿರಿಯಲ್ ಬಿಲ್ ಸೇರಿ ಮೂಲಸೌಕರ್ಯಗಳಿಗಾಗಿ ಗ್ರಾಪಂನಲ್ಲಿ ಹಣವಿಲ್ಲದಂತಾಗಿದೆ. ಮೆಸ್ಕಾಂಗೆ ವಿದ್ಯುತ್ ಬಿಲ್ ಪಾವತಿ ಮಾಡಲು ಹಣ ಇಲ್ಲದೆ ವಿದ್ಯುತ್ ಸಂಪರ್ಕ ಕಡಿತಗೊಳ್ಳುವ ಭೀತಿಯನ್ನು ಹಲವಾರು ಪಂಚಾಯಿತಿಗಳು ಎದುರಿಸುತ್ತಿವೆ.

ನೀರು ಸರಬರಾಜಿನ ಮೋಟಾರ್ ಪಂಪ್, ಪೈಪ್‌ಲೈನ್ ದುರಸ್ತಿ ಮಾಡುವವರು ಪದೇ ಪದೆ ಬಿಲ್ ಕೇಳುತ್ತಿದ್ದಾರೆ. ಆದರೂ, ನಾವು ಅಸಹಾಯಕರಾಗಿದ್ದೇವೆ ಎಂದು ಪಿಡಿಒ ಒಬ್ಬರು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಕೇಂದ್ರದ 15ನೇ ಹಣಕಾಸು ಆಯೋಗದ ಅನುದಾನ ಬಾರದ ಕಾರಣ ರಾಜ್ಯ ಸರ್ಕಾರವೇ ಪ್ರತಿ ಗ್ರಾಪಂಗೆ ಕನಿಷ್ಠ 10 ಲಕ್ಷ ರೂ. ಅನುದಾನ ನೀಡಿದರೆ ಅನುಕೂಲವಾಗುತ್ತದೆ. ಜನರಿಗೆ ತುರ್ತು ಸೇವೆ ಒದಗಿಸಲು ನೆರವಾಗುತ್ತದೆ ಎಂದು ಅಧಿಕಾರಿಗಳು ಒತ್ತಾಯಿಸುತ್ತಿದ್ದಾರೆ. ಕೇಂದ್ರದ ಅನುದಾನ ಬರುವವರೆಗೆ ರಾಜ್ಯ ಸರ್ಕಾರವೇ ಗ್ರಾಪಂಗಳ ನೆರವಿಗೆ ಬರಬೇಕು ಎನ್ನುವುದು ಅಧಿಕಾರಿಗಳ ಆಶಯವಾಗಿದೆ.

ಇಕ್ಕಟ್ಟಿನಲ್ಲಿ ಆಡಳಿತಾಧಿಕಾರಿಗಳು

ಅನುದಾನವಿಲ್ಲದೆ ಜನರಿಗೆ ಅಧಿಕಾರಿಗಳು ಸೇವೆ ಒದಗಿಸಲಾಗದೆ, ಜನರ ಪ್ರಶ್ನೆಗೆ ಉತ್ತರಿಸಲಾಗದೆ ಪಿಡಿಒಗಳು, ಆಡಳಿತಾಧಿಕಾರಿಗಳು ಇಕ್ಕಟ್ಟಿನಲ್ಲಿ ಸಿಲುಕಿದಂತಾಗಿದೆ. 15ನೇ ಹಣಕಾಸು ಅನುದಾನ ಬಂದಿದ್ದರೆ ಅದರಲ್ಲಿ ಕುಡಿಯುವ ನೀರು, ವಿದ್ಯುತ್ ದೀಪಗಳ ನಿರ್ವಹಣೆ, ರಸ್ತೆ, ಚರಂಡಿ ಸ್ವಚ್ಛತೆ, ಹಸಿಕಸ, ಒಣಕಸ ನಿರ್ವಹಣೆ, ಶೇ.5ರಷ್ಟು ಅಂಗವಿಕಲರು, ಶೇ.25ರಷ್ಟು ಎಸ್‌ಸಿ, ಎಸ್‌ಟಿ ನಿಧಿ, ಶೇ.5ರಷ್ಟು ಮಹಿಳೆಯರ ಕಲ್ಯಾಣ ಕಾರ್ಯ, ಶಾಲೆಗಳ ದುರಸ್ತಿ, ಕಾಂಪೌಂಡ್ ಹಾಗೂ ಶೌಚಗೃಹಗಳ ನಿರ್ಮಾಣ ಸೇರಿ ಇತರ ಕೆಲಸಗಳಿಗೆ ಬಳಸಲಾಗುತ್ತಿತ್ತು. ಆದರೆ ಎರಡು ವರ್ಷಗಳಿಂದ 15ನೇ ಹಣಕಾಸು ಆಯೋಗದ ಅನುದಾನ ಗ್ರಾಪಂಗಳಿಗೆ ಬಾರದಿರುವುದು ಗ್ರಾಪಂಗಳು ಆರ್ಥಿಕ ಪರಿಸ್ಥಿತಿ ಉಸಿರುಗಟ್ಟಿದಂತಾಗಿದ್ದು ಗ್ರಾಮೀಣ ಜನರಿಗೆ ಮೂಲಸೌಕರ್ಯ ಒದಗಿಸಲು ಪಿಡಿಒ, ಅಧಿಕಾರಿಗಳ ಪರದಾಡುವ ಪರಿಸ್ಥಿತಿ ತಲೆದೋರಿದೆ.

15ನೇ ಹಣಕಾಸು ಆಯೋಗದ ಅನುದಾನ ಗ್ರಾಪಂಗಳಿಗೆ ಬಾರದಿರುವುದರಿಂದ ಗ್ರಾಪಂಗಳಿಗೆ ಸಮಸ್ಯೆಯಾಗಿದೆ. ಚುನಾವಣೆ ಆಗಿ ಹೊಸ ಆಡಳಿತ ಮಂಡಳಿ ಬಂದ ಬಳಿಕ ಅನುದಾನ ಬಿಡುಗಡೆಯಾಗುವ ಸಾಧ್ಯತೆ ಇದೆ. ವಿದ್ಯುತ್ ಬಿಲ್ ಪಾವತಿಸಲು ಎಸ್ರೋ ಖಾತೆಯಿಂದ ಅನುದಾನ ನೀಡಲು ಗ್ರಾಪಂಗಳಿಂದ ಅನುದಾನದ ಬೇಡಿಕೆ ಕೇಳಲಾಗಿದೆ.
ಮಹೇಶ್ ಕೆ.ಜಿ. ಕಾರ್ಯನಿರ್ವಾಹಕ ಅಧಿಕಾರಿ, ತಾಪಂ ಕುಂದಾಪುರ