ಜಾನಪದ ಅಕಾಡೆಮಿ ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾದ ಉಡುಪಿ ಬೈಲೂರಿನ ಗೋವಿಂದರಾಜ ಶೆಟ್ಟಿ. 
ಉಡುಪಿ

ಗೋವಿಂದರಾಜ ಶೆಟ್ಟಿಗೆ ಜಾನಪದ ಅಕಾಡೆಮಿ ಪ್ರಶಸ್ತಿ

* ಮಂಡ್ಯದಲ್ಲಿ ಅ.24ರಂದು ಪುರಸ್ಕಾರ

ಉಡುಪಿ: ಭಜನಾ ಕ್ಷೇತ್ರಕ್ಕೆ ನೀಡಿದ ಅನುಪಮ ಸೇವೆ ಪರಿಗಣಿಸಿ ಉಡುಪಿ ತಾಲೂಕು ಬೈಲೂರಿನ ಗೋವಿಂದರಾಜ ಶೆಟ್ಟಿ 2026ನೇ ಸಾಲಿನ ಕರ್ನಾಟಕ ಜಾನಪದ ಅಕಾಡೆಮಿ ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಪ್ರಶಸ್ತಿ ಪ್ರದಾನ ಸಮಾರಂಭವು ಮಂಡ್ಯದ ಸುಭಾಶ ನಗರದ ಡಾ. ಬಿ.ಆರ್​. ಅಂಬೇಡ್ಕರ್​ ಭವನದಲ್ಲಿ ಅ.24ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿದೆ ಎಂದು ಕರ್ನಾಟಕ ಜಾನಪದ ಪರಿಷತ್​ನ ಉಡುಪಿ ಜಿಲ್ಲಾಧ್ಯಕ್ಷ ಹಾಗೂ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ತಿಳಿಸಿದ್ದಾರೆ.

ಸಮಾಜಮುಖಿ ಮತ್ತು ಧಾರ್ಮಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿರುವ ಅವರು ತಮ್ಮ ಆರಂಭಿಕ ವೃತ್ತಿ ಜೀವನವನ್ನು ದರ್ಜಿ (ಟೈಲರ್​)ಯಾಗಿ ಆರಂಭಿಸಿದ್ದು, ಇದಕ್ಕಾಗಿ ಮುಂಬೈಗೆ ತೆರಳಿ ವಿಶೇಷ ತರಬೇತಿ ಪಡೆದಿದ್ದರು. ಬಳಿಕ ಉಡುಪಿ ನಗರದ ಹೃದಯಭಾಗದಲ್ಲೇ ಸ್ವಂತ ಟೈಲರಿಂಗ್​ ಶಾಪ್​ ಆರಂಭಿಸಿ ಸತತ ಪರಿಶ್ರಮ, ಕೌಶಲ ಮತ್ತು ಪ್ರಾಮಾಣಿಕ ಸೇವೆಯಿಂದ ಜನರ ವಿಶ್ವಾಸ ಗಳಿಸಿದರು. ಭಜನಾ ಕ್ಷೇತ್ರಕ್ಕೂ ಅನುಪಮ ಕೊಡುಗೆ ನೀಡಿದ್ದು, 50ಕ್ಕೂ ಹೆಚ್ಚು ವರ್ಷದಿಂದ ಭಜನಾ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾದ್ಯಂತ ಸಾವಿರಕ್ಕೂ ಅಧಿಕ ಭಜನಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ.

ಬೈಲೂರು ಮಹಿಷಮರ್ಧಿನಿ ಭಜನಾ ಮಂದಿರದ ಸಕ್ರಿಯ ಸದಸ್ಯರಾಗಿ ಹಲವು ಜವಾಬ್ದಾರಿ ಸಮರ್ಥವಾಗಿ ನಿರ್ವಹಿಸಿ, ಅಧ್ಯಕ್ಷರಾಗಿಯೂ ಸಹ ಸೇವೆ ಸಲ್ಲಿಸಿದ್ದಾರೆ. ಭಜನೆಯ ಮೂಲಕ ಭಕ್ತಿ, ಸಂಸ್ಕೃತಿ ಮತ್ತು ಸಮುದಾಯದ ಒಗ್ಗಟ್ಟು ಬೆಳೆಸಲು ನಿಸ್ವಾರ್ಥ ಸೇವೆ ಸಲ್ಲಿಸಿದ್ದು, ಅನೇಕರಿಗೆ ಪ್ರೇರಣೆಯೂ ಆಗಿದ್ದಾರೆ.

ಹಿಂದೂ ಸಂಪ್ರದಾಯ, ಧಾರ್ಮಿಕ ವಿಧಿ-ವಿಧಾನ ಹಾಗೂ ಮದುವೆ ಸೇರಿದಂತೆ ಕುಟುಂಬಗಳಲ್ಲಿ ನಡೆಯುವ ಶುಭಕಾರ್ಯಗಳ ಆಚರಣೆಯ ಕುರಿತು ಗೋವಿಂದರಾಜ ಅವರು ಅಪಾರ ಜ್ಞಾನ ಹೊಂದಿದ್ದಾರೆ.