ಪಪಂ ಸಾಮಾನ್ಯ ಸಭೆಯಲ್ಲಿ ಫಲಾನುಭವಿಗೆ ಪೋಷಣಾ ಭತ್ಯೆಯ ಚೆಕ್ ವಿತರಿಸಲಾಯಿತು. ಅಧ್ಯಕ್ಷೆ ದಿವ್ಯಾ ಶೆಟ್ಟಿ, ಉಪಾಧ್ಯಕ್ಷ ಪ್ರವೀಣ್ ಬಗಂಬಿಲ, ಸ್ಥಾಯಿ ಸಮಿತಿ ಅಧ್ಯಕ್ಷ ಧೀರಜ್ ಕೊಂಡಾಣ, ಮುಖ್ಯಾಧಿಕಾರಿ ಮಾಲಿನಿ ಉಪಸ್ಥಿತರಿದ್ದರು. 
ಉಡುಪಿ

ಸರ್ಕಾರಿ ಜಾಗ ಗಡಿ ಗುರುತು

ಇಂದಿರಾ ಎನ್ ಕೆ
ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಕೋಟೆಕಾರ್ ಪಟ್ಟಣ ಪಂಚಾಯಿತಿಯ ಸಾಮಾನ್ಯ ಸಭೆ ಮಂಗಳವಾರ ಅಧ್ಯಕ್ಷೆ ದಿವ್ಯಾ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯಿತು. ಸರ್ಕಾರಿ ಜಾಗ ಗಡಿ ಗುರುತು ಬಗ್ಗೆ ಸಭೆಯಲ್ಲಿ ವಿಷಯ ಪ್ರಸ್ತಾಪಿಸುವ ಮೂಲಕ ಬಿಜೆಪಿಯ ಉಚ್ಚಾಟಿತ ಪಪಂ ಸದಸ್ಯ ಸುಜಿತ್ ಮಾಡೂರು ಪಕ್ಷದಲ್ಲಿದ್ದಾಗ ನಡೆಸುತ್ತಿದ್ದ ಹೋರಾಟ ಮುಂದುವರಿಸಿದ್ದಾರೆ.
ಆಡಳಿತ ವ್ಯವಸ್ಥೆಯಲ್ಲಿ ಮುಖ್ಯಾಧಿಕಾರಿಯ ಪಾತ್ರ ಏನು? ಸಭೆಯಲ್ಲಾದ ನಿರ್ಣಯಗಳ ಫಾಲೋಅಪ್ ಮಾಡುವವರು ಯಾರು? ಜಾಗದ ವಿಚಾರವಾಗಿ ತಹಸೀಲ್ದಾರ್ ಬಳಿ ನಾವು ಹೋದಾಗ ನೀವೇಕೆ ಬಂದಿಲ್ಲ? ನಿಮಗೆ ಯಾವುದೇ ಜವಾಬ್ದಾರಿ ಇಲ್ಲವೇ? ಖಾಸಗಿ ಜಾಗದ ಗಡಿ ಗುರುತು ತಕ್ಷಣ ಆಗುವುದಾದರೆ ಒಂದೂವರೆ ವರ್ಷಗಳ ಹಿಂದೆ ಕೈಗೊಂಡ ಸರ್ಕಾರಿ ಜಾಗದ ಗಡಿ ಗುರುತು ನಿರ್ಣಯ ಇದುವರೆಗೆ ಪಾಲನೆ ಆಗದಿರಲು ಕಾರಣ ಏನು? ಗುಡ್ಡ ಪ್ರದೇಶದಲ್ಲಿರುವ ಜಾಗ ಹೊಳೆ ಪರಂಬೋಕು ಎಂದು ತಹಸೀಲ್ದಾರ್ ಹೇಳಿದ್ದೇಗೆ ಎಂದು ಸುಜಿತ್ ಪ್ರಶ್ನೆಗಳ ಸುರಿಮಳೆಗೈದರು.
ಸ.ನಂ.222ರಲ್ಲಿ 9.94ಎಕರೆಯಲ್ಲಿ 1.42 ಎಕರೆ ಜಮೀನು 2019ರಲ್ಲಿ ಉಳ್ಳಾಲ ಕಡಲ್ಕೊರೆತ ನಿರಾಶ್ರಿತರಿಗೆ ಮೀಸಲಿಡಲಾಗಿದೆ. 94 ಮನೆ ನಿವೇಶನ ಪೈಕಿ 92 ಅಲ್ಪಸಂಖ್ಯಾತರಿಗೆ ನೀಡಲಾಗಿದೆ ಎಂದು ಜಾಲತಾಣದಲ್ಲಿ ಪ್ರಚಾರ ಆಗುತ್ತಿದೆ. ವಾಸ್ತವವಾಗಿ 2022ರಲ್ಲೇ ಸರ್ಕಾರ ನಿವೇಶನ ಹಿಂದಕ್ಕೆ ಪಡೆದಿದ್ದರೂ ಪಟ್ಟಣ ಪಂಚಾಯಿತಿಯಿಂದ ಸುಳ್ಳು ದಾಖಲೆ ಕೊಡುವ ಉದ್ದೇಶವೇನೆಂದು ಪ್ರಶ್ನಿಸಿದರು.ಪಕ್ಷೇತರ ಸದಸ್ಯ ಹರೀಶ್ ರಾವ್ ಧ್ವನಿಗೂಡಿಸಿ, ಇದೊಂದು ಗಂಭೀರ ವಿಚಾರ. ಸಂತ್ರಸ್ತರಿಗೆ ಮೀಸಲಿಟ್ಟ ಜಾಗದಲ್ಲಿ ನಿವೇಶನ ನೀಡಲಾಗಿದೆಯೇ ಎಂದು ಪ್ರಶ್ನಿಸಿದರು. ಈ ವಿಚಾರದಲ್ಲಿ ಒಂದಷ್ಟು ಹೊತ್ತು ಚರ್ಚೆ ನಡೆಯಿತು.
ಸರ್ಕಾರಿ ಜಾಗ ಗಡಿಗುರುತು ಬಗ್ಗೆ ನಾವು ತಹಸೀಲ್ದಾರ್‌ಗೆ ಪತ್ರ ಬರೆದಿದ್ದೇವೆ. ಎಷ್ಟು ದಿನಗಳಲ್ಲಿ ಕೆಲಸ ಆಗುತ್ತದೆ ಎನ್ನುವುದು ತಹಸೀಲ್ದಾರ್ ಅವರಿಗೆ ಬಿಟ್ಟ ವಿಚಾರ. ಅಧ್ಯಕ್ಷ, ಸದಸ್ಯರನ್ನು ತಹಸೀಲ್ದಾರ್ ಬಳಿ ನಾನು ಕಳಿಸಿಲ್ಲ. ಸಂತ್ರಸ್ತರ ನಿವೇಶನದ ಬಗ್ಗೆ ಪಂಚಾಯಿತಿಯಿಂದ ಮಾಹಿತಿ ನೀಡಿಲ್ಲ ಎಂದು ಮುಖ್ಯಾಧಿಕಾರಿ ಮಾಲಿನಿ ಉತ್ತರಿಸಿದರು.

ಸಾಲ ವಿಚಾರ ಪ್ರಸ್ತಾಪ

ಅಭಿವೃದ್ಧಿ ಕಾಮಗಾರಿಗಳಿಗೆ ಆರು ಕೋಟಿಯ ಟೆಂಡರ್ ಕರೆಯಲಾಗಿದ್ದು, ಮೂರೂವರೆ ಕೋಟಿವರೆಗೆ ಆದಾಯ ಬರುತ್ತದೆ ಎಂದು ತಿಳಿಸಲಾಗಿದೆ. ಉಳಿದ ಹಣ ಭರ್ತಿ ಮಾಡುವುದು ಹೇಗೆ? ಇದು ಪಪಂ ಸಾಲದಲ್ಲಿ ಇರುವುದನ್ನು ಸಾಬೀತುಪಡಿಸುತ್ತದೆ ಎಂದು ಸುಜಿತ್ ಕಳವಳ ವ್ಯಕ್ತಪಡಿಸಿದರು. ಇಂತಹ ಮಾತುಗಳಿಂದ ತಪ್ಪು ಸಂದೇಶ ಹೋಗುತ್ತದೆ ಎಂದು ಅಧ್ಯಕ್ಷೆ ಆಕ್ಷೇಪಿಸಿದರು. ಸಾಲ ಇದೆ, ಆದಾಯ ಹೆಚ್ಚಳಕ್ಕೆ ಪ್ರಯತ್ನ ನಡೆಯುತ್ತಿದೆ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಧೀರಜ್ ಕೊಂಡಾಣ ತಿಳಿಸಿದರು.
14ರಿಂದ 15 ವರ್ಷದೊಳಗಿನ ಹೆಣ್ಮಕ್ಕಳಿಗೆ ಸರ್ಕಾರದಿಂದ ನೀಡಲಾಗುವ ವ್ಯಾಕ್ಸಿನ್ ಬಗ್ಗೆ ಜಾಲತಾಣದಲ್ಲಿ ಕೇಳಿ ಬರುತ್ತಿರುವ ಅಪಪ್ರಚಾರಕ್ಕೆ ಸಂಬಂಧಿಸಿ ಕೈಗೊಂಡ ಕ್ರಮ ಏನೆನ್ನುವ ಸುಜಿತ್ ಪ್ರಶ್ನೆಗೆ ಉತ್ತರಿಸಿದ ಆರೋಗ್ಯಾಧಿಕಾರಿ ಡಾ.ಸುನಿತಾ, ಇಲಾಖೆಯಿಂದ ಮೇಲಧಿಕಾರಿಗಳು ಸ್ಪಷ್ಟ ಮಾಹಿತಿ ನೀಡಿದ್ದು ಧರ್ಮಗುರುಗಳ ಮೂಲಕ ಜನರಿಗೆ ಮಾಹಿತಿ ನೀಡುವಂತೆ ಮಾಡಲಾಗಿದೆ ಎಂದು ಸಮಜಾಯಿಷಿ ನೀಡಿದರು.
ಫಲಾನುಭವಿಗಳಿಗೆ ಪೋಷಣಾ ಭತ್ಯೆ, ವೈದ್ಯಕೀಯ ವೆಚ್ಚ ಸಹಾಯಧನದ ಚೆಕ್ ವಿತರಿಸಲಾಯಿತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಶಂಕರಿ ಮಾತನಾಡಿದರು. ಉಪಾಧ್ಯಕ್ಷ ಪ್ರವೀಣ್ ಬಗಂಬಿಲ ಉಪಸ್ಥಿತರಿದ್ದರು.

ಮೇಲ್ಛಾವಣಿ ಕೆಲಸದಲ್ಲಿ ರಾಜಕೀಯ!

ಸ್ಥಾಯಿ ಸಮಿತಿ ಅಧ್ಯಕ್ಷ ಧೀರಜ್ ಕೊಂಡಾಣ ಮಾಡೂರು ಕೊರಗಜ್ಜ ಕ್ಷೇತ್ರದ ಮೇಲ್ಛಾವಣಿ ಕೆಲಸದ ವಿಚಾರದಲ್ಲಿ ಸ್ಥಳೀಯ ಕೌನ್ಸಿಲರ್ ಆದ ತನಗೆ ಮಾಹಿತಿ ನೀಡದೆ ರಾಜಕೀಯ ಮಾಡುತ್ತಿದ್ದಾರೆ ಎಂದು ಸುಜಿತ್ ಆಕ್ಷೇಪಿಸಿ, ಇದರಲ್ಲಿ ಮುಖ್ಯಾಧಿಕಾರಿಯ ಲೋಪ ಇದೆ ಎಂದು ವಾದಿಸಿದರು. ಅಧ್ಯಕ್ಷೆ ದಿವ್ಯಾ, ಉಪಾಧ್ಯಕ್ಷ ಪ್ರವೀಣ್ ಬಗಂಬಿಲ ಅವರು ಧೀರಜ್ ಪರನಿಂತ ಪರಿಣಾಮ ನಾಲ್ವರ ನಡುವೆ ಸಾಕಷ್ಟು ಸಮಯ ವಾಗ್ವಾದ ನಡೆಯಿತು. ವಾರ್ಡ್‌ನಲ್ಲಿ ಯಾವುದೇ ಕೆಲಸ ಮಾಡುವ ಸಂದರ್ಭ ಸ್ಥಳೀಯ ಕೌನ್ಸಿಲರ್‌ಗೆ ಮಾಹಿತಿ ನೀಡಬೇಕು. ಆದರೆ ಇಲ್ಲಿ ತಪ್ಪು ಮಾಡಲಾಗಿದೆ. ದೈವಸ್ಥಾನ ವಿಚಾರದಲ್ಲಿ ಹೆಚ್ಚಿನ ಚರ್ಚೆ ಬೇಡ ಎಂದು ಹರೀಶ್ ರಾವ್ ಪ್ರತಿಪಾದಿಸಿದರು.

ಭಾಗ್ಯಲಕ್ಷ್ಮೀ ಯೋಜನೆ ಬಂದ ಬಳಿಕ ಉಳ್ಳಾಲ ತಾಲೂಕಿನಲ್ಲಿ ಪ್ರಥಮ ಬಾರಿಗೆ ತ್ರಿವಳಿ ಶಿಶುಗಳ ಜನನವಾಗಿದ್ದು ಅವರಿಗೆ ಸರ್ಕಾರದಿಂದ ಯೋಜನೆ ಲಭಿಸಿದೆ. ಅಂಗನವಾಡಿ ಸಹಾಯಕಿಯರನ್ನು ಬೇರೆ ಯಾವುದೇ ಕೆಲಸಕ್ಕೆ ಬಳಸಬಾರದೆನ್ನುವ ನಿಯಮ ಇದೆ.