ಮುನಿಯಾಲು ಸಂಜೀವಿನಿ ಗೋಧಾಮದಲ್ಲಿ ಕೃಷಿ ಮಂಡಲ- ಕೃಷಿ ವಿಚಾರ ಗೋಷ್ಠಿಯನ್ನು ಪದ್ಮಶ್ರೀ ಸತ್ಯನಾರಾಯಣ ಬೆಳೇರಿ ಉದ್ಘಾಟಿಸಿದರು. ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಕೃಷಿ ವಿಜ್ಞಾನಿ ಡಾ.ಧನಂಜಯ್, ಮುನಿಯಾಲು ಸಂಜೀವಿನಿ ಗೋಧಾಮದ ಸಂಸ್ಥಾಪಕ ಡಾ.ಜಿ.ರಾಮಕೃಷ್ಣ ಆಚಾರ್, ನಿವೃತ್ತ ಪ್ರಾಂಶುಪಾಲ ಬಾಲಕೃಷ್ಣ ಶೆಟ್ಟಿ, ಶ್ರೀಮನ್ನಾಗಮಂಡಲ ಸೇವಾ ಸಮಿತಿ ಅಧ್ಯಕ್ಷ ದೇವಿಪ್ರಸಾದ ಶೆಟ್ಟಿ ಸಾಣೂರುಗುತ್ತು ಮತ್ತಿತರರಿದ್ದರು.
ವಿಜಯವಾಣಿ ಸುದ್ದಿಜಾಲ ಹೆಬ್ರಿ
ಕೃಷಿ ಬಿಟ್ಟರೆ ಜೀವನವೇ ಇಲ್ಲ. ಯುವ ಸಮುದಾಯವನ್ನು ಕೃಷಿಯತ್ತ ಆಕರ್ಷಿಸಲು ಸರ್ಕಾರ ಹೊಸ ಸಿಲೇಬಸ್ ಮಾಡಿ ಪ್ರೋತ್ಸಾಹಿಸಲಿ. ಕೃಷಿಗೆ ಗಮನ ನೀಡುವುದು ಮುಂದಿನ ಅಗತ್ಯ. ಕೃಷಿ ಜತೆಗೆ ರೈತರನ್ನು ಪ್ರೋತ್ಸಾಹಿಸುವ ರಾಮಕೃಷ್ಣ ಆಚಾರ್ಯರ ಕಾರ್ಯ ಮಹತ್ವದ್ದು ಎಂದು ಪದ್ಮಶ್ರೀ ಸತ್ಯನಾರಾಯಣ ಬೆಳೇರಿ ಹೇಳಿದರು.
ಮುನಿಯಾಲು ಸಂಜೀವಿನಿ ಗೋಧಾಮದಲ್ಲಿ ಫೆ.21ರ ತನಕ ಪಾರಂಪರಿಕ ಸಂಪ್ರದಾಯದಂತೆ ದೊಂದಿ ಬೆಳಕಿನಲ್ಲಿ ನಡೆಯುವ ಏಕಪವಿತ್ರ ಶ್ರೀಮನ್ನಾಗಮಂಡಲದಲ್ಲಿ ಶುಕ್ರವಾರ ಕೃಷಿ ಮಂಡಲ-ಕೃಷಿ ವಿಚಾರಗೋಷ್ಠಿ ಉದ್ಘಾಟಿಸಿ ಮಾತನಾಡಿದರು.
ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಕೃಷಿ ವಿಜ್ಞಾನಿ ಡಾ.ಧನಂಜಯ್ ಅಧ್ಯಕ್ಷತೆ ವಹಿಸಿದ್ದರು. ಮುನಿಯಾಲು ಸಂಜೀವಿನಿ ಗೋಧಾಮದ ಸಂಸ್ಥಾಪಕ ಡಾ.ಜಿ.ರಾಮಕೃಷ್ಣ ಆಚಾರ್, ನಿವೃತ್ತ ಪ್ರಾಂಶುಪಾಲ ಬಾಲಕೃಷ್ಣ ಶೆಟ್ಟಿ, ಶ್ರೀಮನ್ನಾಗಮಂಡಲ ಸೇವಾ ಸಮಿತಿ ಅಧ್ಯಕ್ಷ ದೇವಿಪ್ರಸಾದ ಶೆಟ್ಟಿ ಸಾಣೂರುಗುತ್ತು, ಪ್ರಧಾನ ಕಾರ್ಯದರ್ಶಿಗಳಾದ ಶ್ರೀಕಾಂತ ಶೆಟ್ಟಿ ಕಾರ್ಕಳ, ದಾಮೋದರ ಶರ್ಮ ಬಾರ್ಕೂರು, ಅರವಿಂದ ಆಚಾರ್ಯ ಬೆಳುವಾಯಿ, ಪ್ರಭಾಕರ ಆಚಾರ್ಯ ಗುಡ್ಡೆಯಂಗಡಿ, ಮಾರ್ಗದರ್ಶಕರಾದ ಸುಕೇಶ ಹೆಗ್ಡೆ ಕಡ್ತಲ, ಮುನಿಯಾಲು ದಿನೇಶ ಪೈ, ಸಂತೋಷ ಅಮೀನ್, ಜ್ಯೋತಿ ಹರೀಶ್, ಗೋಪಿನಾಥ ಭಟ್ ಮುನಿಯಾಲು ಮತ್ತಿತರರಿದ್ದರು. ಶ್ರೀಕಾಂತ ಶೆಟ್ಟಿ ಕಾರ್ಕಳ ಪ್ರಾಸ್ತಾವಿಕ ಮಾತನಾಡಿದರು. ಪ್ರಣೂತ್ ಆರ್.ಗಾಣಿಗ ನಿರೂಪಿಸಿದರು.
ಕೃಷಿ ವಿಚಾರ ಗೋಷ್ಠಿ
ಮೊದಲ ಗೋಷ್ಠಿಯಲ್ಲಿ ಕೃಷಿ ಲೇಖಕ ಡಾ.ನರೇಂದ್ರ ರೈ ದೇರ್ಲ ಮಾತನಾಡಿ, ನಾಗಮಂಡಲದಲ್ಲಿ ಪ್ರಥಮವಾಗಿ ಕೃಷಿ ವಿಚಾರ-ಕೃಷಿ ಮಂಡಲವನ್ನು ಮಾಡಿಸಿದ ಕೀರ್ತಿ ರಾಮಕೃಷ್ಣ ಆಚಾರ್ಯರಿಗೆ ಸಲ್ಲುತ್ತದೆ. ಈ ನೆಲದ ಎಲ್ಲ ಸಂಸ್ಕೃತಿಗೂ ಕೃಷಿಯೇ ಮೂಲ ಸಂಸ್ಕೃತಿ ಆಗಿದೆ. ಯುವಸಮುದಾಯ ಮುಂದೆ ಕೃಷಿಯನ್ನು ಲಾಭದಾಯಕವಾಗಿ ಮಾಡಿ ಉಳಿಸಿ ಬೆಳೆಸುವ ಅನಿವಾರ್ಯತೆ ಎದುರಾಗಿದೆ ಎಂದರು. ದ್ವಿತೀಯ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಗತಿಪರ ಕೃಷಿಕ ಗುಣಪಾಲ ಕಡಂಬ, ರೈತರನ್ನು ಸರ್ಕಾರಗಳು ಸೇರಿ ಎಲ್ಲರೂ ಕಡೆಗಣಿಸುತ್ತಿದ್ದಾರೆ. ಆದರೆ ಎಲ್ಲರೂ ಸೇರಿ ಗೌರವಿಸುವ ದಿನಗಳು ಹತ್ತಿರದಲ್ಲಿದೆ ಎಂದರು. ತೃತೀಯ ಗೋಷ್ಠಿಯಲ್ಲಿ ಹೊಸ ತಲೆಮಾರಿನ ಕೃಷಿ ಮತ್ತು ಹಳ್ಳಿ ವಾಪಸಾತಿಯ ಅನುಭವದ ಬಗೆಗೆ ಪ್ರಯೋಗಶೀಲ ಕೃಷಿಕ ಮೈರುಗ ಕುರುಡಪದವಿನ ಪ್ರವೀಣ್ ಕೇಶವ್ ಮಾತನಾಡಿದರು. ಯುವಜನತೆ ಮತ್ತು ಭವಿಷ್ಯದಲ್ಲಿ ಕೃಷಿ ಸಾಧ್ಯತೆಗಳ ಬಗ್ಗೆ ಪುತ್ತೂರು ಗ್ರಾಮಜನ್ಯದ ನಿರಂಜನ ಪೊಳ್ಯ ಮಾತನಾಡಿದರು.
ಮೃತ್ಯುಂಜಯ ಹೋಮ, ಯಾಗ
ಏಕಪವಿತ್ರ ಶ್ರೀಮನ್ನಾಗಮಂಡಲದ 2ನೇ ದಿನ ಶುಕ್ರವಾರ ಮೃತ್ಯುಂಜಯ ಹೋಮ, ಕೂಷ್ಮಾಂಡ ಯಾಗ, ಭೂತನಾಥ ಪ್ರೀತಿಕರ ಪ್ರತ್ಯಕ್ಷ ಅಶ್ವಪೂಜಾ, ಪ್ರಸನ್ನ ಪೂಜೆ ಸಹಿತ ವಿವಿಧ ಧಾರ್ಮಿಕ ಕಾರ್ಯಗಳು ವಿದ್ವಾನ್ ಕೊರಂಗ್ರಪಾಡಿ ಕೆ.ಪಿ.ಕುಮಾರಗುರು ತಂತ್ರಿ ಮಾರ್ಗದರ್ಶನದಲ್ಲಿ ಎಳ್ಳಾರೆ ವಾಸುದೇವ ಭಟ್ ಸಹಯೋಗದಲ್ಲಿ ನಡೆಯಿತು. ಸಂಜೀವಿನಿ ಗೋಧಾಮದ ಸಂಸ್ಥಾಪಕ ಡಾ.ಜಿ.ರಾಮಕೃಷ್ಣ ಆಚಾರ್, ಸವಿತಾ ಆರ್.ಆಚಾರ್ ಮತ್ತು ಕುಟುಂಬಸ್ಥರು ಉಪಸ್ಥಿತರಿದ್ದರು.