ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆ. (ಸಾಂದರ್ಭಿಕ ಚಿತ್ರ) 
ಉಡುಪಿ

ಜಿಲ್ಲೆಯ ಸರ್ಕಾರಿ ಆಸ್ಪತ್ರೆ ವೈದ್ಯರಿಂದ ಮುಷ್ಕರ

* ಮಾ.12ರಂದು ಒಪಿಡಿ ಸೇವೆಗಳು ಸಂಪೂರ್ಣ ಸ್ಥಗಿತ

ಉಡುಪಿ: ಸರ್ಕಾರಿ ಆಸ್ಪತ್ರೆಗಳ ವೈದ್ಯರು ವಿವಿಧ ಬೇಡಿಕೆಯನ್ನು ಮುಂದಿಟ್ಟು ರಾಜ್ಯಾದ್ಯಂತ ಇಂದು ಮುಷ್ಕರ ಹಮ್ಮಿಕೊಂಡಿದ್ದು, ಉಡುಪಿ ಜಿಲ್ಲೆಯಲ್ಲೂ ಸಹ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಒಪಿಡಿ ಸೇವೆ ಸಂಪೂರ್ಣ ಸ್ಥಗಿತ ಆಗಲಿದೆ.
ಸಕಾಲಕ್ಕೆ ವೇತನ, ಸಮರ್ಪಕ ಔಷಧ ಪೂರೈಕೆ ಸೇರಿದಂತೆ 15 ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟು ಎಲ್ಲ ವೈದ್ಯರು ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದಾರೆ. ಜ್ವರ, ಕೆಮ್ಮು, ಚರ್ಮ ಸಂಬಂಧಿತ ಸಮಸ್ಯೆ, ಸ್ಕ್ಯಾನಿಂಗ್ ಅಥವಾ ರಕ್ತ ಪರೀಕ್ಷೆ ಸೇರಿದಂತೆ ಸಾಮಾನ್ಯ ಚಿಕಿತ್ಸೆಗೆ ಸರ್ಕಾರಿ ಆಸ್ಪತ್ರೆ ಅವಲಂಬಿತ ಬಡರೋಗಿಗಳಿಗೆ ತೊಂದರೆಯಾಗಲಿದೆ.
4 ವರ್ಷದಿಂದ ವೃಂದ ಮತ್ತು ನೇಮಕಾತಿ ಪ್ರಕ್ರಿಯೆ ನಡೆದಿಲ್ಲ. 13 ವರ್ಷದಿಂದ ವೈದ್ಯರ ಜೇಷ್ಠತಾ ಪಟ್ಟಿ ಪರಿಷ್ಕರಣೆ ಆಗಿಲ್ಲ. ಇದನ್ನೂ ವಿರೋಧಿಸಿ ವೈದ್ಯರು ಮತ್ತು ಸಿಬ್ಬಂದಿ ಕಪ್ಪು ಪಟ್ಟಿ ಧರಿಸಿ ಒಪಿಡಿ ಸೇವೆ ಸ್ಥಗಿತಗೊಳಿಸಲು ತೀಮಾರ್ನಿಸಿದ್ದಾರೆ. ಅಲ್ಲದೆ, ಮಾ.16ರಂದು ಸಾಮೂಹಿಕವಾಗಿ ಕರ್ತವ್ಯಕ್ಕೆ ಗೈರಾಗುವುದಾಗಿ ರಾಜ್ಯ ವೈದ್ಯರ ಸಂಘವು ಸರ್ಕಾರಕ್ಕೆ ಎಚ್ಚರಿಕೆಯನ್ನೂ ನೀಡಿದೆ.
"

ಉಡುಪಿ ಜಿಲ್ಲೆಯಲ್ಲೂ ವೈದ್ಯರು ಮುಷ್ಕರ ನಡೆಸಲಿದ್ದಾರೆ. ಈ ಮುಷ್ಕರವು ಬಡ ರೋಗಿಗಳಿಗೆ ಸಮರ್ಪಕ ಆರೋಗ್ಯ ಸೇವೆ ನೀಡಲೆಂದೇ ಮಾಡಲಾಗುತ್ತಿದೆ. ವೈದ್ಯರು ಆಸ್ಪತ್ರೆಗೆ ಬರಲಿದ್ದು, ಯಾವುದೇ ತಪಾಸಣೆ ಅಥವಾ ನಿಗದಿತ ಶಸ್ತ್ರ ಚಿಕಿತ್ಸೆ ನಡೆಸುವುದಿಲ್ಲ. ಒಪಿಡಿ ಸೇವೆ ಬಂದ್​ ಇರಲಿದೆ. ಆದರೆ, ತುರ್ತು ಪರಿಸ್ಥಿತಿ, ಅಪಘಾತ ಪ್ರಕರಣ, ಜನರ ಜೀವಕ್ಕೆ ಅಪಾಯವಿರುವ ಪ್ರಕರಣಗಳನ್ನು ನಿಭಾಯಿಸಲಿದ್ದಾರೆ.