scam 
ಉಡುಪಿ

ಡಾಕ್ಟರ್ ಹೆಸರಿನಲ್ಲಿ ಗೂಗಲ್ ಪೇ ವಂಚನೆ ಜಾಲ

ಮೂಡುಬಿದಿರೆ: ಸ್ಥಳೀಯ ವ್ಯಾಪಾರಿಗಳು, ಗ್ರಾಹಕರನ್ನು ಗುರಿಯಾಗಿಸಿಕೊಂಡು ಆನ್‌ಲೈನ್ ವಂಚಕರು ಹೊಸ ತಂತ್ರದ ಮೂಲಕ ಹಣ ವಂಚಿಸುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಎಚ್ಚರಿಕೆ ಸಂದೇಶ ಹರಿದಾಡುತ್ತಿದೆ.
ವಂಚಕರು ತಾವು ಪ್ರತಿಷ್ಠಿತ ಆಸ್ಪತ್ರೆ ವೈದ್ಯರು ಎಂದು ಪರಿಚಯಿಸಿಕೊಂಡು ಅಂಗಡಿಗಳಿಗೆ ಕರೆ ಮಾಡಿ ವಿವಿಧ ವಸ್ತುಗಳಿಗೆ ಆರ್ಡರ್ ನೀಡುತ್ತಾರೆ. ಬಳಿಕ ಬಿಲ್ ಮೊತ್ತವನ್ನು ಗೂಗಲ್ ಪೇ ಮೂಲಕ ಪಾವತಿಸುವುದಾಗಿ ನಂಬಿಸಿ ಸ್ವಲ್ಪ ಸಮಯದ ನಂತರ ಬಿಲ್ ಮೊತ್ತಕ್ಕಿಂತ ಹೆಚ್ಚಿನ ಹಣ ಪಾವತಿಸಿರುವಂತೆ ನಕಲಿ ಸಂದೇಶ ಕಳುಹಿಸುತ್ತಾರೆ. ಹೆಚ್ಚುವರಿ ಹಣ ತಪ್ಪಾಗಿ ಪಾವತಿಯಾಗಿದ್ದು, ಅದನ್ನು ಮತ್ತೊಂದು ಮೊಬೈಲ್ ಸಂಖ್ಯೆಗೆ ಮರಳಿ ಕಳುಹಿಸುವಂತೆ ಒತ್ತಾಯಿಸುತ್ತಾರೆ.
ವಂಚಕರ ಮಾತು ನಂಬಿ ಹಣ ವರ್ಗಾವಣೆ ಮಾಡಿದರೆ ನಷ್ಟವಾಗುವ ಸಾಧ್ಯತೆ ಇದೆ. ಆದ್ದರಿಂದ ಬ್ಯಾಂಕ್ ಖಾತೆಗೆ ಹಣ ನಿಜವಾಗಿ ಜಮೆಯಾಗಿದೆಯೇ ಎಂಬುದನ್ನು ಬ್ಯಾಂಕ್ ಅಥವಾ ಅಧಿಕೃತ ಪಾವತಿ ಆ್ಯಪ್‌ನಲ್ಲಿ ಪರಿಶೀಲಿಸದೆ ಯಾವುದೇ ಹಣವನ್ನು ಮರಳಿ ಕಳುಹಿಸಬಾರದು ಎಂದು ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ.