ಉಜಿರೆ ಪ್ರಾ.ಕೃ.ಪ.ಸ.ಸಂಘದ ವಾರ್ಷಿಕ ಮಹಾಸಭೆಯಲ್ಲಿ ಸಂಘದ ಅಧ್ಯಕ್ಷ ಬಾಲಕೃಷ್ಣ ಗೌಡ ಮಾತನಾಡಿದರು. ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಶರತ್‌ಕೃಷ್ಣ ಪಡ್ವೆಟ್ಣಾಯ, ಸಂಘದ ನಿರ್ದೇಶಕರಾದ ಅರುಣ್ ಕುಮಾರ್, ಗುರುರಾಜ್ ಅಂತರ ಮೊದಲಾದವರಿದ್ದರು. 
ಉಡುಪಿ

ವರ್ಷದಿಂದ ವರ್ಷಕ್ಕೆ ಉತ್ತಮ ಪ್ರಗತಿ

ಇಂದಿರಾ ಎನ್ ಕೆ
ಬೆಳ್ತಂಗಡಿ: ಉಜಿರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸೇವಾ ಸಂಘ ವರ್ಷದಿಂದ ವರ್ಷಕ್ಕೆ ಉತ್ತಮ ಪ್ರಗತಿ ಸಾಧಿಸುತ್ತಿದೆ. ವರದಿ ವರ್ಷಾಂತ್ಯದಲ್ಲಿ ಸಂಘ 3145 ಸದಸ್ಯರಿಂದ ವಾರ್ಷಿಕ 435 ಕೋಟಿ ರೂ. ವ್ಯವಹಾರ ನಡೆಸಿ 55.40 ಲಕ್ಷ ರೂ. ಲಾಭ ಗಳಿಸಿದೆ. ಸದಸ್ಯರಿಗೆ ಶೇ.12 ಡಿವಿಡೆಂಡ್ ಘೋಷಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಬಾಲಕೃಷ್ಣ ಗೌಡ ಕೇರಿಮಾರು ಹೇಳಿದರು.
ಶನಿವಾರ ಸಂಘದ ಸಭಾಂಗಣದಲ್ಲಿ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಕಳೆದ ಮಾರ್ಚ್ ವಷಾರ್ಂತ್ಯಕ್ಕೆ 29,79,53,540 ರೂ. ಠೇವಣಿ, 1,55,28,171 ರೂ. ಪಾಲು ಬಂಡವಾಳ ಹೊಂದಿ, ಸದಸ್ಯರಿಗೆ 50,13,50,565 ರೂ. ಸಾಲ ವಿತರಿಸಿದೆ. ಆಡಿಟ್ ವರ್ಗೀಕರಣದಲ್ಲಿ ಎ ಶ್ರೇಣಿ ಹೊಂದಿದೆ. ಸಾಲ ಪಡೆಯುವುದು ಸದಸ್ಯರ ಹಕ್ಕಾಗಿದ್ದು, ಮರುಪಾವತಿ ಕರ್ತವ್ಯವಾಗಿದೆ. ಮರುಪಾವತಿ ಮಾಡದ ಸದಸ್ಯರ ಮೇಲೆ ಕ್ರಮ ತೆಗೆದುಕೊಳ್ಳುವುದು ಅನಿರ್ವಾರ್ಯ ಎಂದರು.
ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಶರತ್‌ಕೃಷ್ಣ ಪಡ್ವೆಟ್ಣಾಯ ಮಾತನಾಡಿ, ರೈತರಿಗೆ ಆರ್ಥಿಕ ಶಕ್ತಿ ತುಂಬುವ ಕೆಲಸ ಉಜಿರೆ ಸಹಕಾರಿ ಸೇವಾ ಸಂಘ ಮಾಡುತ್ತಿದೆ. ಗ್ರಾಹಕರೇ ದೇವರು ಎಂದು ಭಾವಿಸಿ ಉತ್ತಮ ರೀತಿಯಲ್ಲಿ ಸಂಘ ಸೇವೆ ನೀಡುತ್ತಿದ್ದು ಪ್ರತಿಷ್ಠಿತ ಸಂಘವಾಗಿ ಸಹಕಾರ ತತ್ವದಲ್ಲಿ ರಾಜ್ಯದಲ್ಲೇ ಮುಂಚೂಣಿಯಲ್ಲಿದೆ ಎಂದರು.
ಡಾಕ್ಟರೇಟ್ ಪದವಿ ಪಡೆದ ರಾಜ್ಯ ಸಹಕಾರಿ ಮಹಾ ಮಂಡಳಿ ನಿರ್ದೇಶಕಿ ಡಾ.ಸಾವಿತ್ರಿ ರೈ ಅವರನ್ನು ಸನ್ಮಾನಿಸಲಾಯಿತು. ಜಯಂತ ಶೆಟ್ಟಿ ಕುಂಟಿನಿ ಅಭಿಪ್ರಾಯ ಮಂಡಿಸಿದರು.
ಸಂಘದ ನಿರ್ದೇಶಕರಾದ ಅರುಣ್ ಕುಮಾರ್, ಗುರುರಾಜ್ ಅಂತರ, ಅರವಿಂದ ಕಾರಂತ, ಅನಿಲ್ ಪ್ರಕಾಶ್ ಡಿಸೋಜ, ಪುಷ್ಪಾವತಿ ಆರ್.ಶೆಟ್ಟಿ, ವಾರಿಜಾ ಎಸ್.ಗೌಡ, ಅಣ್ಣು ನಾಯ್ಕ, ಸಾದು, ವಲಯ ಮೇಲ್ವಿಚಾರಕ ಸುದರ್ಶನ್ ಉಪಸ್ಥಿತರಿದ್ದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸರಸ್ವತಿ ಸಿ.ರೈ ವಾರ್ಷಿಕ ವರದಿ ಮಂಡಿಸಿದರು. ಲೋಲಾಕ್ಷಿ ಪ್ರಾರ್ಥಿಸಿ, ಉಪಾಧ್ಯಕ್ಷ ಸದಾಶಿವ (ಶ್ರೀಧರ) ಪೂಜಾರಿ ಸ್ವಾಗತಿಸಿ, ನಿರ್ದೇಶಕ ರಜತ್ ಗೌಡ ವಂದಿಸಿ, ಸಿಬ್ಬಂದಿ ಮೋಹನ್ ಗೌಡ ನಿರೂಪಿಸಿದರು.

ರೈತರಿಗೆ ಆರ್ಥಿಕ ಶಕ್ತಿ ತುಂಬುವ ಕೆಲಸ ಉಜಿರೆ ಸಹಕಾರಿ ಸೇವಾ ಸಂಘ ಮಾಡುತ್ತಿದೆ. ಗ್ರಾಹಕರೇ ದೇವರು ಎಂದು ಭಾವಿಸಿ ಉತ್ತಮ ರೀತಿಯಲ್ಲಿ ಸಂಘ ಸೇವೆ ನೀಡುತ್ತಿದ್ದು ಪ್ರತಿಷ್ಠಿತ ಸಂಘವಾಗಿ ಸಹಕಾರ ತತ್ವದಲ್ಲಿ ರಾಜ್ಯದಲ್ಲೇ ಮುಂಚೂಣಿಯಲ್ಲಿದೆ.

— ಶರತ್‌ಕೃಷ್ಣ ಪಡ್ವೆಟ್ಣಾಯ, ಶ್ರೀ ಜನಾರ್ದನ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ