ಗೋಹತ್ಯಾ ನಿಷೇಧ ಕಾಯಿದೆ ಜಾರಿ ಮಾಡುವಂತೆ ಆಗ್ರಹಿಸಿ 'ಗೋಮಾತೆಯ ಗೌರವ ಅಭಿಯಾನ'ದ ಉಡುಪಿ ಪದಾಧಿಕಾರಿಗಳು ಎಡಿಸಿ ಅಬೀದ್​ ಗದ್ಯಾಳ ಅವರಿಗೆ ಮನವಿ ಸಲ್ಲಿಸಿದರು. ವಿಜಯ್​ ಕೊಡವೂರು, ಗೀತಾಂಜಲಿ ಸುವರ್ಣ, ರಾಘವೇಂದ್ರ ಪ್ರಭು ಕರ್ವಾಲು, ವೀಣಾ ಶೆಟ್ಟಿ, ರಮಿತಾ ಸೂರ್ಯವಂಶಿ, ಸಂತೋಷ್​, ರಂಜಿತ್​ ಇದ್ದರು. 
ಉಡುಪಿ

ಗೋವಿಗೆ 'ರಾಷ್ಟ್ರಮಾತೆ' ಸ್ಥಾನ-ಮಾನ ನೀಡಿ

* ಉಡುಪಿಯ ಸಂಚಾಲಕ ವಿಜಯ್​ ಕೊಡವೂರು ಆಗ್ರಹ 

* ಸರ್ಕಾರಕ್ಕೆ 'ಗೋಮಾತೆಯ ಗೌರವದ ಅಭಿಯಾನ'ದ ಮನವಿ

ಉಡುಪಿ: ಭಾರತದಲ್ಲಿ ಗೋ ಹತ್ಯೆ ನಿಷೇಧ ಕಾನೂನು ಸಂಪೂರ್ಣ ಜಾರಿಯಾಗಬೇಕು. ಗೋವಿಗೆ ರಾಷ್ಟ್ರಮಾತೆ ಅಥವಾ ರಾಷ್ಟ್ರೀಯ ಪ್ರತಿಷ್ಠಾನದ ಗೌರವಾನ್ವಿತ ಸ್ಥಾನ-ಮಾನ ನೀಡಬೇಕು. ಗೋ ಸೇವೆಗಾಗಿಯೇ ಪ್ರತ್ಯೇಕ ಕೇಂದ್ರೀಯ ಕಾನೂನು ಜಾರಿಗೆ ತರಬೇಕು ಎಂದು 'ಗೋಮಾತೆಯ ಗೌರವ ಅಭಿಯಾನ'ದ ಉಡುಪಿ ತಾಲೂಕು ಸಂಚಾಲಕ ವಿಜಯ್​ ಕೊಡವೂರು ಆಗ್ರಹಿಸಿದರು.
ದೇಶಾದ್ಯಂತ ನಡೆಯುತ್ತಿರುವ 'ಗೋಮಾತೆಯ ಗೌರವದ ಅಭಿಯಾನ'ದ ನಿಮಿತ್ತ ಜು.27ರಂದು ದೇಶದ ಎಲ್ಲ ಜಿಲ್ಲೆಗಳಲ್ಲಿ ಗೋವಿಗೆ ಸಂಬಂಧಿಸಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಆಯಾ ರಾಜ್ಯದ ಮುಖ್ಯಮಂತ್ರಿ ಹಾಗೂ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುತ್ತಿದ್ದು, ಉಡುಪಿಯಲ್ಲೂ ಜಿಲ್ಲಾಧಿಕಾರಿಯ ಮೂಲಕ ಸರ್ಕಾರಕ್ಕೆ ಹಾಗೂ ರಾಜ್ಯಪಾಲರಿಗೆ ಮನವಿ ಸಲ್ಲಿಸಿ ಮಾತನಾಡಿದರು.

ವಿವಿಧ ಬೇಡಿಕೆ

ಗೋವುಗಳಿಗೆ ಕೇಂದ್ರೀಯ ಸಚಿವಾಲಯ ಸ್ಥಾಪನೆ, ಮೇವು ಭದ್ರತಾ ನೀತಿ ಅಂತಿಮಗೊಳಿಸುವಿಕೆ, ವೇದ ಲಕ್ಷಣ ಗೋ ವಂಶದ ಜಾನುವಾರುಗಳಿಂದ ಪಂಚಗವ್ಯ ಉತ್ಪನ್ನಗಳ ಉತ್ಪಾದನೆ ಮತ್ತು ಮಾರುಕಟ್ಟೆ ವ್ಯವಸ್ಥೆ ಹೆಚ್ಚಳ ಎಂಬಿತ್ಯಾದಿ ಬೇಡಿಕೆ ಈಡೇರಿಸುವಂತೆ ಮನವಿ ನೀಡಲಾಯಿತು. ಅಪರ ಜಿಲ್ಲಾಧಿಕಾರಿ ಅಬೀದ್​ ಗದ್ಯಾಳ ಮನವಿ ಸ್ವೀಕರಿಸಿದರು. 
ಅಭಿಯಾನದ ಪ್ರಮುಖರಾದ ಜಿಪಂ ಮಾಜಿ ಸದಸ್ಯೆ ಗೀತಾಂಜಲಿ ಸುವರ್ಣ, ಬ್ರಹ್ಮಾವರ ತಾಲೂಕು ಪ್ರಮುಖರಾದ ರಾಘವೇಂದ್ರ ಪ್ರಭು ಕರ್ವಾಲು, ವೀಣಾ ಶೆಟ್ಟಿ, ರಮಿತಾ ಸೂರ್ಯವಂಶಿ, ಸಂತೋಷ್​, ಎಬಿವಿಪಿ ಪ್ರಮುಖರಾದ ರಂಜಿತ್​ ಇನ್ನಿತರರು ಉಪಸ್ಥಿತರಿದ್ದರು.
"

ಗೋಹತ್ಯಾ ನಿಷೇಧ ಕಾಯಿದೆ ಜಾರಿಗಾಗಿ ದೇಶಾದ್ಯಂತ 4 ಹಂತದಲ್ಲಿ 'ಗೋಮಾತೆಯ ಗೌರವ ಅಭಿಯಾನ' ಆರಂಭಗೊಂಡಿದೆ. ತಾಲೂಕು ಮಟ್ಟದಲ್ಲಿ ಈಗಾಗಲೇ ಸಹಿ ಸಂಗ್ರಹ ಅಭಿಯಾನ ಮುಗಿದಿದ್ದು, ಜು.27ರಂದು ಜಿಲ್ಲಾ ಮಟ್ಟದಲ್ಲಿ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸುವುದಾಗಿದೆ. 2027ರ ಫೆ.27ರ ಒಳಗಾಗಿ ಕೇಂದ್ರ ಸರ್ಕಾರ ಕಾಯಿದೆ ಜಾರಿ ಮಾಡದಿದ್ದಲ್ಲಿ ದೆಹಲಿಯಲ್ಲಿ 108 ಸಾಧು-ಸಂತರು ಆಮರಣ ಉಪವಾಸ ನಡೆಸಲಿದ್ದಾರೆ.

— ಶ್ರೀಸಾಯಿ ಈಶ್ವರ ಗುರೂಜಿ. ದ್ವಾರಕಾಮಾಯಿ ಮಠ, ಶ್ರೀಕ್ಷೇತ್ರ ಶಂಕರಪುರ.