ಉಡುಪಿಯ ಜಿಲ್ಲಾ ಪತ್ರಿಕಾ ಭವನದಲ್ಲಿ ಶ್ರೀ ಸಾಯಿ ಈಶ್ವರ ಗುರೂಜಿ ಮಾತನಾಡಿದರು. ವಿಜಯ್ ಕೊಡವೂರು, ಗಜೇಂದ್ರ ಎಸ್. ಬೇಲೆಮನೆ, ನಾಗರಾಜ್ ಬೈಂದೂರು, ರಾಘವೇಂದ್ರ ಪ್ರಭು ಕರ್ವಾಲು ಇದ್ದರು.
* ಶ್ರೀ ಸಾಯಿ ಈಶ್ವರ ಗುರೂಜಿ ಮಾಹಿತಿ
* ದೇಶಾದ್ಯಂತ 4 ಹಂತದಲ್ಲಿ ಮೌನ ಪ್ರತಿಭಟನೆ
ಉಡುಪಿ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗೋಹತ್ಯಾ ನಿಷೇಧ ಕಾಯಿದೆ ಜಾರಿಗೊಳಿಸುವಂತೆ ಆಗ್ರಹಿಸಿ ಏ.27ರಂದು ಗೋಮಾತೆಯ ಗೌರವ ಅಭಿಯಾನ' ಹಮ್ಮಿಕೊಳ್ಳಲಾಗಿದೆ. ಉಡುಪಿಯಲ್ಲಿ ತಹಸೀಲ್ದಾರರಿಗೆ ಮನವಿ ಸಮರ್ಪಣೆ ಮಾಡಲಿದ್ದೇವೆ. ನಾಲ್ಕು ಹಂತದಲ್ಲಿ ಈ ಅಭಿಯಾನ ನಡೆಯಲಿದೆ ಎಂದು ಕಟಪಾಡಿ ಶಂಕರಪುರದ ದ್ವಾರಕಾಮಯಿ ಮಠದ ಶ್ರೀ ಸಾಯಿ ಈಶ್ವರ ಗುರೂಜಿ ಎಚ್ಚರಿಕೆ ನೀಡಿದರು.
ಉಡುಪಿಯ ಜಿಲ್ಲಾ ಪತ್ರಿಕಾ ಭವನದಲ್ಲಿ ಶನಿವಾರ (ಏ.25) ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಅಭಿಯಾನ ದೇಶಾದ್ಯಂತ ನಡೆಯಲಿದೆ. ಭಾರತದಲ್ಲಿ ಸಂಪೂರ್ಣವಾಗಿ ಗೋಹತ್ಯೆ ಕೊನೆಗೊಳ್ಳಬೇಕು ಎನ್ನುವುದು ಈ ಅಭಿಯಾನದ ಉದ್ದೇಶವಾಗಿದೆ ಎಂದರು.
ರಾಷ್ಟ್ರಮಟ್ಟದ ಅಭಿಯಾನ ಇದಾಗಿದ್ದರೂ ಪೋಸ್ಟರ್ನಲ್ಲಿಯೂ ಸಹ ಯಾವುದೇ ನಾಯಕರು, ಸಂತರು, ಮಠಾಧಿಪತಿಗಳ ಭಾವಚಿತ್ರ ಇರುವುದಿಲ್ಲ. ಮುಖ್ಯ ಪೋಷಕರಾದ ಗೋಮಾತಾ (ಸುರಭಿ-ಆದರ್ಶ ತಾಯಿ ಹಸು) ಹಾಗೂ ಅಧ್ಯಕ್ಷತೆ ವಹಿಸಲಿರುವ ನಂದಿ ಬಾಬಾ (ನೀಲ್ಮೋನಿ ವೃಷಭದೇವ) ಅವರ ಚಿತ್ರ ಮಾತ್ರ ಇರಲಿದೆ. ಗೌರವಾನ್ವಿತ ಆಚಾರ್ಯರರು (ಶಿಕ್ಷಕರು), ಸಂತರು, ಗೋವು ಸೇವಾ ಸಂಸ್ಥೆಗಳು, ಗೋಸೇವಕರು, ಗೋಪಾಲಕರು, ಗೋವನ್ನು ಪ್ರೀತಿಸುವವರು ಈ ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಉಡುಪಿ ತಾಲೂಕು ಸಂಚಾಲಕ ವಿಜಯ್ ಕೊಡವೂರು, ಕುಂದಾಪುರದ ಸಂಚಾಲಕ ಗಜೇಂದ್ರ ಎಸ್. ಬೇಲೆಮನೆ, ಬೈಂದೂರು ಸಂಚಾಲಕ ನಾಗರಾಜ್ ಬೈಂದೂರು ಹಾಗೂ ರಾಘವೇಂದ್ರ ಪ್ರಭು ಕರ್ವಾಲು ಇದ್ದರು.
ದೇಹತ್ಯಾಗಕ್ಕೂ ಸಾಧು-ಸಂತರು ಸಿದ್ಧ
ಮುಂದಿನ ಜುಲೈ ತಿಂಗಳಲ್ಲಿ ಜಿಲ್ಲಾ ಮಟ್ಟದಲ್ಲಿ, ಅಕ್ಟೋಬರ್ ತಿಂಗಳಲ್ಲಿ ರಾಜ್ಯ ಮಟ್ಟ ಹಾಗೂ ಡಿಸೆಂಬರ್ನಲ್ಲಿ ರಾಷ್ಟ್ರಮಟ್ಟದಲ್ಲಿ ಅಭಿಯಾನ ನಡೆಯಲಿದೆ. ಈ ಹಂತಗಳಲ್ಲಿ ಜಿಲ್ಲಾಧಿಕಾರಿ, ಮುಖ್ಯಮಂತ್ರಿ ಹಾಗೂ ರಾಜ್ಯಪಾಲ ಮತ್ತು ಪ್ರಧಾನಿ ಹಾಗೂ ರಾಷ್ಟ್ರಪತಿಗೂ ಮನವಿ ಸಲ್ಲಿಸಲಿದ್ದೇವೆ. ಗೋಸೇವೆಯ ಖಚಿತತೆ, ರಕ್ಷಣೆ ಹಾಗೂ ಭದ್ರತೆ, ಗೋಮಾತೆಗೆ ರಾಷ್ಟ್ರೀಯ ತಾಯಿ ಅಥವಾ ರಾಷ್ಟ್ರೀಯ ದೇವತೆ ಎಂದು ಗೌರವ ನೀಡಬೇಕೆನ್ನುವುದು ಈ ಅಭಿಯಾನದ ಮೂಲ ಉದ್ದೇಶವಾಗಿದೆ. ನಮ್ಮ ಬೇಡಿಕೆಗೆ ಸರ್ಕಾರ ಸ್ಪಂದಿಸದಿದ್ದರೆ ಸಾಧು-ಸಂತರುಗಳು ಸೇರಿ ಉಪವಾಸ ಸತ್ಯಾಗ್ರಹದ ಮೂಲಕ ದೇಹತ್ಯಾಗ ಮಾಡಲಿದ್ದೇವೆ ಎಂದು ಗುರೂಜಿ ತಿಳಿಸಿದರು.