ಬೈಲುಪೇಟೆ ಪ್ರದೇಶದಲ್ಲಿ 15 ವರ್ಷದಿಂದ ಎಕ್ರೆಗಟ್ಟಲೆ ಜಮೀನಿನಲ್ಲಿ ತರಕಾರಿ ಕೃಷಿ.
ಕೆಲಸ ಹುಡುಕಿಕೊಂಡು ಬಂದವನು ಇಂದು ಹತ್ತಾರು ಎಕರೆಗೆ ಒಡೆಯನಲ್ಲದಿದ್ದರೂ, ಎಕರೆಗಟ್ಟಲೆ ಭೂಮಿಗೆ ಜೀವ ತುಂಬಿದ ಕೃಷಿ ಯೋಗಿ. ಇದು ಕೋಲ್ಕತ್ತ ಮೂಲದ ಜಾವೇದ್ ಅಲಿ ಅವರ ಯಶೋಗಾಥೆ.
15 ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲೆಯ ಗುರುಪುರ ಬೈಲುಪೇಟೆ ಪರಿಸರದಲ್ಲಿ ಕೃಷಿ ಕಾಯಕ ಮಾಡುತ್ತಿರುವ ಇವರು, ಇದೀಗ ಹಡೀಲು ಬಿದ್ದಿದ್ದ 50 ಎಕರೆ ಗದ್ದೆಗಳಲ್ಲಿ ಭತ್ತದ ಕೃಷಿ ಮಾಡುವ ಮೂಲಕ ಸ್ಥಳೀಯರ ಗಮನ ಸೆಳೆದಿದ್ದಾರೆ.
ಕೂಲಿಯಿಂದ ಕೃಷಿ ಮಾದರಿಯವರೆಗೆ
ಹಲವು ವರ್ಷಗಳ ಹಿಂದೆ ಕೋಲ್ಕತ್ತದಿಂದ ಕೂಲಿ ಕೆಲಸಕ್ಕೆಂದು ಬಂದ ಅಲಿ, ಆರಂಭದಲ್ಲಿ ಸಣ್ಣಪುಟ್ಟ ಕೆಲಸ ಮಾಡುತ್ತಿದ್ದರು. ಬಳಿಕ ಬೈಲುಪೇಟೆ ಭಾಗದ 25-30 ಎಕರೆ ಪಾಳು ಬಿದ್ದಿದ್ದ ಗದ್ದೆಗಳನ್ನು ಗುತ್ತಿಗೆಗೆ ಪಡೆದು ತರಕಾರಿ ಕೃಷಿ ಆರಂಭಿಸಿದರು. ಬದನೆ, ಸೋರೆಕಾಯಿ, ಮೆಣಸು, ಹೂಕೋಸು ಬೆಳೆದು ಜಿಲ್ಲೆಯಲ್ಲೇ ಮಾದರಿ ಕೃಷಿಕ ಎನಿಸಿಕೊಂಡರು. ಕಳೆದ 2-3 ವರ್ಷಗಳಿಂದ ತಮ್ಮ ಮೂಲ ವೃತ್ತಿಯಾದ ಭತ್ತದ ಬೇಸಾಯದತ್ತ ಸಂಪೂರ್ಣವಾಗಿ ವಾಲಿದ್ದಾರೆ.
50 ಎಕರೆಯಲ್ಲಿ ಕಜೆ ಜಯ ಭತ್ತ
ಗುರುಪುರ ಬೈಲುಪೇಟೆ ಹಾಗೂ ಶ್ರೀ ಜಂಗಮ ಸಂಸ್ಥಾನ ಮಠದ ಒಟ್ಟು 50 ಎಕರೆ ಹಡೀಲು ಗದ್ದೆಗಳಲ್ಲಿ ಅಲಿ ಈ ಬಾರಿ ಕಜೆ ಜಯ ಭತ್ತ ಬೆಳೆದಿದ್ದಾರೆ. ವರ್ಷಕ್ಕೆ ಎರಡು ಸೀಸನ್ ಕೃಷಿ. ಮಳೆಗಾಲದಲ್ಲಿ ಮಳೆ ನಂಬಿದರೆ, ಎರಡನೇ ಬೆಳೆಗೆ ಪಂಪ್ ಮೂಲಕ ಫಲ್ಗುಣಿ ನದಿಯ ನೀರು ಆಶ್ರಯ. ಕೃಷಿ ಚಟುವಟಿಕೆಗಳಿಗಾಗಿ ಕೋಲ್ಕತ್ತ, ಬಿಹಾರ, ಜಾಖರ್ಂಡ್ ಹಾಗೂ ಮಧ್ಯಪ್ರದೇಶದಿಂದ ಕಾರ್ಮಿಕರನ್ನು ಕರೆತರುತ್ತಾರೆ.
ಮಾರುಕಟ್ಟೆ, ಸಮಾಜ ಸೇವೆ
ಬೆಳೆದ ಭತ್ತವನ್ನು ಮೂಡುಬಿದಿರೆಯ ಮಿಲ್‌ಗೆ ಕಳುಹಿಸಿದರೆ, ಭತ್ತದ ಹುಲ್ಲನ್ನು ಸ್ಥಳೀಯ ಗೋಶಾಲೆಗಳಿಗೆ ಅತ್ಯಂತ ಕಡಿಮೆ ದರದಲ್ಲಿ ನೀಡುವ ಮೂಲಕ ಅಲಿ ಔದಾರ್ಯ ಮೆರೆದಿದ್ದಾರೆ. ದಿನದ 18 ಗಂಟೆಗಳ ಕಾಲ ಪತ್ನಿ ಮತ್ತು ಪುತ್ರ ಬಿಲ್ಲಾಸ್ ಅವರೊಂದಿಗೆ ಗದ್ದೆಯಲ್ಲಿಯೇ ಬೆವರು ಸುರಿಸುವ ಇವರು, ಕೃಷಿ ನಂಬಿದವರಿಗೆ ಕೈ ಬಿಡುವುದಿಲ್ಲ ಎಂಬ ಸಂದೇಶ ನೀಡುತ್ತಿದ್ದಾರೆ.
ಕೋಲ್ಕತ್ತದ ವಿಶೇಷ ಯಂತ್ರದ ಬಳಕೆ
ದಕ್ಷಿಣ ಕನ್ನಡದಲ್ಲಿ ಸಾಮಾನ್ಯವಾಗಿ ಭತ್ತ ಕಟಾವು ಮಾಡುವಾಗಲೇ ಕಾಳು ಬೇರ್ಪಡಿಸುವ ಯಂತ್ರ ಬಳಸುತ್ತಾರೆ. ಆದರೆ ಅಲಿ ಅವರು ಕೋಲ್ಕತ್ತದಿಂದ 40 ಸಾವಿರ ರೂ. ವೆಚ್ಚದಲ್ಲಿ ವಿಶೇಷ ಸಿಡಿ ಇಂಜಿನ್ ಡೀಸೆಲ್ ಮಷಿನ್ ತರಿಸಿಕೊಂಡಿದ್ದಾರೆ. ಈ ಯಂತ್ರ ಗಂಟೆಗೆ 5 ಕ್ವಿಂಟಾಲ್ ಭತ್ತವನ್ನು ಯಾವುದೇ ನಷ್ಟವಿಲ್ಲದೆ ಅತ್ಯಂತ ನಿಖರವಾಗಿ ಬೇರ್ಪಡಿಸುವ ಸಾಮರ್ಥ್ಯ ಹೊಂದಿದೆ.
ನಾನು, ನನ್ನ ಪತ್ನಿ ಮತ್ತು ಮಗ ದಿನದ 18 ತಾಸು ಗದ್ದೆಯಲ್ಲೇ ಕಳೆಯುತ್ತೇವೆ. ಭೂಮಾಲೀಕರು ನಮಗೆ ಪೂರ್ಣ ಸಹಕಾರ ನೀಡುತ್ತಿದ್ದಾರೆ. ನಮ್ಮ ಊರಿನ ಪದ್ಧತಿಯಲ್ಲೇ ನಾವು ಕೃಷಿ ಮಾಡುತ್ತಿದ್ದು, ಇಲ್ಲೇ ಬಿಡಾರ ಹೂಡಿ ವಾಸಿಸುತ್ತಿದ್ದೇವೆ. ಕೃಷಿಯಲ್ಲಿ ಲಾಭ-ನಷ್ಟ ನಮಗೇ ಸೇರಿದ್ದು, ಸರ್ಕಾರ ಸ್ವಲ್ಪ ಪ್ರೋತ್ಸಾಹ ನೀಡಿದರೆ ಇನ್ನಷ್ಟು ಹಡೀಲು ಭೂಮಿಯನ್ನು ಹಸನು ಮಾಡಬಹುದು.