ಉಡುಪಿ ಮಣಿಪಾಲದ ಕಸ್ತೂರ್ಬಾ ಮೆಡಿಕಲ್ ಕಾಲೇಜ್ನ ಕಟ್ಟಡಕ್ಕೆ ಸುವರ್ಣ ದೀಪಾಲಂಕಾರದ ಮೂಲಕ ಮಕ್ಕಳ ಕ್ಯಾನ್ಸರ್ ನಿಯಂತ್ರಣದ ಜಾಗೃತಿ ಮೂಡಿಸಲಾಯಿತು. ಡಾ. ವಾಸುದೇವ ಭಟ್, ಆಕ್ಸೆಸ್ ಲೈಫ್ ಸಂಸ್ಥೆಯ ಪ್ರತಿನಿಧಿಗಳು, ಕಾಯಿಲೆ ಪೀಡಿತ ಮಕ್ಕಳು, ಆಸ್ಪತ್ರೆಯ ಸಿಬ್ಬಂದಿ, ಪಾಲಕರು ಇದ್ದರು.
* ಡಾ. ವಾಸುದೇವ ಭಟ್ ಕೆ. ಮಾಹಿತಿ
* ಮಣಿಪಾಲ ಕೆಎಂಸಿಯಲ್ಲಿ ಜಾಗೃತಿ ಅಭಿಯಾನ
ಉಡುಪಿ: ದೊಡ್ಡವರಲ್ಲಿ ಕಾಣಿಸಿಕೊಳ್ಳುವ ಕ್ಯಾನ್ಸರ್ಗೆ ಹೋಲಿಸಿದರೆ ಮಕ್ಕಳಲ್ಲಿ ಕಂಡುಬರುವ ಕ್ಯಾನ್ಸರ್ಗಳನ್ನು ಕೇವಲ ತಪಾಸಣೆ (ಸ್ಕ್ರೀನಿಂಗ್) ಮೂಲಕ ಪತ್ತೆಹಚ್ಚಲು ಸಾಧ್ಯವಿಲ್ಲ. ಸಕಾಲದಲ್ಲಿ ರೋಗನಿರ್ಣಯ ಮತ್ತು ಸೂಕ್ತ ಚಿಕಿತ್ಸೆಯೇ ಪ್ರಮುಖವಾದ ವೈದ್ಯಕೀಯ ಕ್ರಮವಾಗಿದೆ. ಆರಂಭದಲ್ಲೇ ಕಾಯಿಲೆ ಗುರುತಿಸಿ ಸೂಕ್ತ ಚಿಕಿತ್ಸಾ ವಿಧಾನ ಅನುಸರಿಸಿದರೆ ಶೇ.80ಕ್ಕಿಂತ ಹೆಚ್ಚು ಮಕ್ಕಳನ್ನು ಸಂಪೂರ್ಣವಾಗಿ ಗುಣಪಡಿಸಿ, ಅವರೂ ಆರೋಗ್ಯಕರ ಜೀವನ ನಡೆಸುವಂತೆ ಮಾಡಬಹುದು ಎಂದು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಪೀಡಿಯಾಟ್ರಿಕ್ ಆಂಕೊಲಾಜಿ (ಮಕ್ಕಳ ಕ್ಯಾನ್ಸರ್ ಚಿಕಿತ್ಸಾ ವಿಭಾಗ) ಮುಖ್ಯಸ್ಥ ಡಾ. ವಾಸುದೇವ ಭಟ್ ಕೆ. ತಿಳಿಸಿದರು.
ಮಣಿಪಾಲದ ಕಸ್ತೂರ್ಬಾ ಮೆಡಿಕಲ್ ಕಾಲೇಜ್ (ಕೆಎಂಸಿ)ನಲ್ಲಿ ಆಕ್ಸೆಸ್ ಲೈಫ್ ಅಸಿಸ್ಟೆನ್ಸ್ ಫೌಂಡೇಷ್ನ್ ಸಹಭಾಗಿತ್ವದಲ್ಲಿ ಅಂತಾರಾಷ್ಟ್ರೀಯ ಮಕ್ಕಳ ಕ್ಯಾನ್ಸರ್ ನಿಯಂತ್ರಣ ಜಾಗೃತಿ ಮಾಸದ ನಿಮಿತ್ತ ಟೈಗರ್ ಸರ್ಕಲ್ ಬಳಿಯ ಪ್ರವೇಶ ದ್ವಾರದಲ್ಲಿ ಶನಿವಾರ (ಸೆ.12) ರಾತ್ರಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಭಾಗದ ಕಟ್ಟಡಕ್ಕೆ ಸುವರ್ಣ (ಚಿನ್ನದ) ಬಣ್ಣದ ದೀಪಾಲಂಕಾರಕ್ಕೆ ಚಾಲನೆ ನೀಡಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ವೈದ್ಯರು, ಆಕ್ಸೆಸ್ ಲೈಫ್ ಸಂಸ್ಥೆಯ ಪ್ರತಿನಿಧಿಗಳು, ಆರೋಗ್ಯ ಕಾರ್ಯಕರ್ತರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಪಾಲ್ಗೊಂಡು ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ಪುಟಾಣಿ ಮಕ್ಕಳಿಗೆ ಬೆಂಬಲ ಸೂಚಿಸಿದರು. ಎಲ್ಲರೂ 'ಗೋಲ್ಡ್ ರಿಬ್ಬನ್' ಧರಿಸುವ ಮೂಲಕ ಮಕ್ಕಳ ಕ್ಯಾನ್ಸರ್ ಮುಕ್ತ ಸಮಾಜ ನಿರ್ಮಾಣಕ್ಕೆ ಕೈಜೋಡಿಸುವುದಾಗಿ ಪ್ರತಿಜ್ಞೆ ಮಾಡಿದರು.
ಆಕರ್ಷಿಸಿದ ಸುವರ್ಣ ದೀಪಾಲಂಕಾರ
ಪ್ರತಿಷ್ಠಿತ ಕಟ್ಟಡಕ್ಕೆ ಸುವರ್ಣ ದೀಪಾಲಂಕಾರ ಮಾಡಿರುವುದರ ಹಿಂದೆ ಮಹತ್ವದ ಉದ್ದೇಶವೂ ಇದೆ. ಚಿನ್ನವು ಮಕ್ಕಳ ಕ್ಯಾನ್ಸರ್ ಕುರಿತಾದ ಜಾಗೃತಿ ಸೂಚಿಸುವ ಸಾರ್ವತ್ರಿಕವಾಗಿ ಅಂಗೀಕರಿಸಲ್ಪಟ್ಟ ಬಣ್ಣವಾಗಿದೆ. ಚಿನ್ನವು ಅತ್ಯಮೂಲ್ಯವಾದ ಲೋಹವಾಗಿದ್ದು, ಅವು ಮಕ್ಕಳ ಮೌಲ್ಯಕ್ಕೆ ಸಮಾನವಾಗಿದೆ. ಹಿರಿಯರಲ್ಲಿ ಬರುವ ಕ್ಯಾನ್ಸರ್ನಂತೆ ಮಕ್ಕಳ ಕ್ಯಾನ್ಸರ್ಅನ್ನು ಜೀವನಶೈಲಿಯಿಂದ ಬದಲಾವಣೆಯಿಂದ ತಡೆಯಲು ಸಾಧ್ಯವಿಲ್ಲ. ಸಾರ್ವಜನಿಕರಲ್ಲಿ ಈ ಕುರಿತು ಅರಿವು ಮೂಡಿಸುವುದೇ ಸುವರ್ಣ ದೀಪಾಲಂಕಾರದ ವಿಶೇಷತೆಯಾಗಿದೆ. ಪಾಲಕರೂ ಸಹ ಮಕ್ಕಳಲ್ಲಿ ಕಂಡುಬರುವ ಆರಂಭಿಕ ರೋಗಲಕ್ಷಣ ನಿರ್ಲಕ್ಷಿಸದೆ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು, ಮಕ್ಕಳ ಜೀವ ಉಳಿಸಬೇಕು ಎನ್ನುವುದೇ ದೀಪಾಲಂಕಾರದ ಸಂದೇಶವಾಗಿದೆ ಎಂದು ಆಕ್ಸೆಸ್ ಲೈಫ್ ಸಂಸ್ಥೆಯ ಪ್ರತಿನಿಧಿಗಳು ತಿಳಿಸಿದರು.
ಆರ್ಥಿಕ ಅಥವಾ ಭೌಗೋಳಿಕ ಅಡೆ-ತಡೆಗಳಿಂದಾಗಿ ಯಾವುದೇ ಮಗು ಕ್ಯಾನ್ಸರ್ ಚಿಕಿತ್ಸೆಯಿಂದ ವಂಚಿತವಾಗಬಾರದು ಎನ್ನುವುದು ಈ ಜಾಗೃತಿಯ ಉದ್ದೇಶ. ಬಾಲ್ಯದ ಕ್ಯಾನ್ಸರ್ಅನ್ನು ಪರಿಣಾಮಕಾರಿ ಚಿಕಿತ್ಸೆಯಿಂದ ಗುಣಪಡಿಸಬಹುದು. ದೂರದ ಊರುಗಳಿಂದ ಬರುವ ಬಡ ಕುಟುಂಬಗಳಿಗೆ ವೈದ್ಯಕೀಯ ಚಿಕಿತ್ಸೆಯ ಜೊತೆಗೆ ಶುಚಿಯಾದ ವಸತಿ, ಪೌಷ್ಟಿಕ ಆಹಾರ ಮತ್ತು ಮಾನಸಿಕ ಸ್ಥೈರ್ಯ ಒದಗಿಸುವುದು ನಮ್ಮ ಬದ್ಧತೆಯಾಗಿದೆ.