ಉಡುಪಿ: ಒಳಕಾಡು ಶಾರದಾಂಬಾ ದೇವಸ್ಥಾನ ಗೋಪುರದ ಬಳಿ ಮನೆಯಲ್ಲಿ ಸುಮಾರು 548 ಗ್ರಾಂ ಚಿನ್ನಾಭರಣ ಹಾಗೂ ಮೊಬೈಲ್ ಫೋನ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಕುಕ್ಕೆಹಳ್ಳಿ ಗ್ರಾಮದ ಸುಕೇಶ ನಾಯ್ಕ (37 ) ಬಂಧಿತ ಆರೋಪಿ. ಈತನನ್ನು ಕಿನಿಮೂಲ್ಕಿ ಹಿರೇನ್ ಬಾರ್ ಬಳಿ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದ್ದು, ಈ ವೇಳದೆ ಕಳ್ಳತನ ಮಾಡಿದ ಸೊತ್ತುಗಳನ್ನು ಅಜ್ಜರಕಾಡು ಮನೆಯೊಂದರಲ್ಲಿ ಇಟ್ಟಿರುವುದಾಗಿ ತಿಳಿಸಿದ್ದಾನೆ. ಅದರಂತೆ 548.31 ಮಿಲಿ ಗ್ರಾಂ ತೂಕದ 65,79,720 ರೂ. ಮೌಲ್ಯದ ಸೊತ್ತುಗಳನ್ನು ಸ್ವಾಧಿನಪಡಿಸಿಕೊಳ್ಳಲಾಗಿದೆ.
ಆರೋಪಿತನ ವಿರುದ್ದ ಈಗಾಗಲೇ ಉಡುಪಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 11 ಮನೆಕಳ್ಳತನ ಪ್ರಕರಣಗಳು ದಾಖಲಾಗಿದೆ. ನಗರ ಠಾಣೆಯಲ್ಲಿ 5 ಪ್ರಕರಣ ದಾಖಲಾಗಿದ್ದು, 4 ಕೇಸ್ಗಳಲ್ಲಿ ಶಿಕ್ಷೆಯಾಗಿದೆ. ಹಿರಿಯಡ್ಕ ಠಾಣೆಯಲ್ಲಿ 3 ಪ್ರಕರಣ ದಾಖಲಾಗಿದ್ದು, 1 ಪ್ರಕರಣದಲ್ಲಿ ಶಿಕ್ಷೆಯಾಗಿದೆ. ಬ್ರಹ್ಮಾವರ ಠಾಣೆಯಲ್ಲಿ 2 ಪ್ರಕರಣ ಹಾಗೂ ಮಣಿಪಾಲ್ ಠಾಣೆಯಲ್ಲಿ 1 ಪ್ರಕರಣ ನ್ಯಾಯಲಯದ ವಿಚಾರಣೆಯಲ್ಲಿದೆ.