ಗುರುಪುರ: ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಪೊರ್ಕೋಡಿ ಎಂಬಲ್ಲಿ ಗುರುವಾರ ರಾತ್ರಿ ಮನೆಗೆ ನುಗ್ಗಿದ ಕಳ್ಳರು 20 ಗ್ರಾಂ ಚಿನ್ನ, ಅಂದಾಜು 20,000 ರೂ. ನಗದು ಕಳ್ಳತನ ಮಾಡಿದ್ದಾರೆ.
ಪೊರ್ಕೋಡಿ ಮಸೀದಿ ಬಳಿ ನಿವಾಸಿ, ಸಮೋಸ ವ್ಯಾಪಾರ ಮಾಡುವ ಸೈಫುಲ್ಲ ಎಂಬುವರು ಗುರುವಾರ ಮನೆಗೆ ಬೀಗ ಹಾಕಿ ಕುಟುಂಬ ಸಮೇತ ಸಂಬಂಧಿಕರ ಮನೆಗೆ ಹೋಗಿದ್ದರು. ಶುಕ್ರವಾರ ಮನೆಗೆ ಮರಳಿದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.
ಮನೆಯ ಹಿಂಬಾಗಿಲು ಮುರಿದು ಒಳಪ್ರವೇಶಿಸಿದ ಕಳ್ಳರು ಕಪಾಟಿನಲ್ಲಿದ್ದ ಚಿನ್ನ, ನಗದು ಅಪಹರಿಸಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿ ಕಳ್ಳರು ಮನೆಯೊಳಗೆ ಪ್ರವೇಶಿಸಿರಬೇಕು. ಕಳ್ಳರ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಬಜ್ಪೆ ಪೊಲೀಸ್ ವೃತ್ತ ನಿರೀಕ್ಷಕರು ಹೇಳಿದ್ದಾರೆ.