ಅದ್ಯಪಾಡಿ ದೈವಂಗಳಗುಡ್ಡೆ ಶ್ರೀ ನೀಲಕಂಠ ಉಮಾಮಹೇಶ್ವರ ದೇವಸ್ಥಾನದಲ್ಲಿ ಧಾರ್ಮಿಕ ಸಭೆ ನಡೆಯಿತು. ಸುಬ್ರಹ್ಮಣ್ಯ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಶ್ರೀ ಕ್ಷೇತ್ರ ಕಟೀಲಿನ ಆನುವಂಶಿಕ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ, ವಿಹಿಂಪ ಕರ್ನಾಟಕ ದಕ್ಷಿಣ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್ವೆಲ್ ಮೊದಲಾದವರಿದ್ದರು.
ವಿಜಯವಾಣಿ ಸುದ್ದಿಜಾಲ ಗುರುಪುರ
ಅದ್ಯಪಾಡಿ ದೈವಂಗಳಗುಡ್ಡೆ ಶ್ರೀ ನೀಲಕಂಠ ಉಮಾಮಹೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಅಷ್ಟಬಂಧ ಬ್ರಹ್ಮಕಲಶಾಭಿಷೇಕದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ವಿದೇಶಗಳಲ್ಲಿ ಯುದ್ಧ ನಡೆಯುತ್ತಿದ್ದರೂ ಅದರ ಬಿಸಿ ಭಾರತಕ್ಕೆ ತಟ್ಟಿದೆ. ಜನಾಂಗೀಯ ಸಂಘರ್ಷ ಜಗತ್ತನ್ನೇ ಸುಡುತ್ತದೆ. ಮನುಷ್ಯರನ್ನು ದ್ವೇಷಿಸುವವರು ದೇವರನ್ನು ಪ್ರೀತಿಸುವುದಿಲ್ಲ ಎಂದರು.
ವಿಹಿಂಪ ಕರ್ನಾಟಕ ದಕ್ಷಿಣ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಮಾತನಾಡಿ, ಇಂತಹ ವೇದಿಕೆಗಳಲ್ಲಿ ಹಿಂದುಗಳಿಗೆ ಬುದ್ಧಿಮಾತು ಹೇಳುವ ಬದಲು, ಯುದ್ಧಕ್ಕೆ ಕಾರಣೀಭೂತರಾದವರಿಗೆ ಬುದ್ಧಿಮಾತು ಹೇಳಿದರೆ ಉತ್ತಮ. ಹಿಂದು ಧರ್ಮ ಜಗತ್ತಿಗೆ ಒಳ್ಳೆಯದನ್ನೇ ಬಯಸುತ್ತದೆ. ಅನ್ಯ ದೇಶಗಳ ಸಂಸ್ಕೃತಿ ನಾಶ ಮಾಡಿದ ಪರಂಪರೆ ಸನಾತನ ಹಿಂದು ಧರ್ಮದಲ್ಲಿಲ್ಲ ಎಂದು ಹೇಳಿದರು.
ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್, ಶ್ರೀ ಕ್ಷೇತ್ರ ಕಟೀಲಿನ ಆನುವಂಶಿಕ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ, ವಿಹಿಂಪ ಮಂಗಳೂರು ಜಿಲ್ಲೆ ಅಧ್ಯಕ್ಷ ಎಚ್.ಕೆ.ಪುರುಷೋತ್ತಮ, ಮೂಡುಂಬೈಲು ರವಿ ಶೆಟ್ಟಿ ಮಾತನಾಡಿದರು.
ದೇವಸ್ಥಾನದ ಆಡಳಿತ ಮೊಕ್ತೇಸರ ಮುಂಜುನಾಥ ಭಂಡಾರಿ ಹಾಗೂ ಅವರ ಪತ್ನಿ ಅನಸೂಯ ಎಂ. ಭಂಡಾರಿ, ಹರೀಶ್ ಶೆಟ್ಟಿ ಏತಮೊಗರು ದೊಡ್ಡಮನೆ ಬೈಲುಮೂಡುಕರೆ, ಸಂತೋಷ್ ಶೆಟ್ಟಿ ಶೆಡ್ಡೆ ಹೊಸಲಕ್ಕೆ ಅವರನ್ನು ಸನ್ಮಾನಿಸಲಾಯಿತು.
ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ ಸ್ವಾಗತಿಸಿದರು. ಶಾರದಾ ವಿದ್ಯಾ ಸಂಸ್ಥೆಯ ಅಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್ ಅಧ್ಯಕ್ಷತೆ ವಹಿಸಿದ್ದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಗುಡ್ಡೆಗುತ್ತು ಭುಜಂಗ ಶೆಟ್ಟಿ, ಮೂಡುಬಿದಿರೆ ಅರಮನೆ ಕುಲದೀಪ ಚೌಟ, ಅದಾನಿ ಗ್ರೂಪ್ ದಕ್ಷಿಣ ಭಾರತ ಸಿಇಒ ಕಿಶೋರ್ ಆಳ್ವ, ದೇವದಾಸ ನಾಯಕ್ ಮೂಡುಕರೆ ಯಜಮಾನ, ಉದಯಚಂದ್ರ ಭಂಡಾರಿ, ಶಿವರಾಮ ಮಲ್ಲಿ, ಶ್ರೀಪತಿ ಉಡುಪ ಚೆನ್ನೈ ಮತ್ತಿತರರು ಉಪಸ್ಥಿತರಿದ್ದರು. ಪುರುಷೋತ್ತಮ ಭಂಡಾರಿ ಅಡ್ಯಾರು ಮತ್ತು ನವನೀತ ಶೆಟ್ಟಿ ನಿರೂಪಿಸಿದರು. ತೇಜಸ್ವಿ ಎಸ್.ರೈ ಮಲ್ಲೂರುಪರಾರಿ ವಂದಿಸಿದರು
ಹಿರಿಯರು ಮಾಡುವ ಕೆಲಸಗಳು ಸಮಾಜಕ್ಕೆ, ಯುವ ಜನಾಂಗಕ್ಕೆ ಪ್ರೇರಣೆಯಾಗಬೇಕು. ದೇಶದಲ್ಲಿ ಪಾಶ್ಚಾತ್ಯ ಸಂಸ್ಕೃತಿ ಎಷ್ಟೇ ಬಂದರೂ ನಮ್ಮ ತುಳುನಾಡಿನ ಸಂಸ್ಕೃತಿ ಮೆಟ್ಟಿ ನಿಲ್ಲುವ ಮತ್ತೊಂದು ಸಂಸ್ಕೃತಿ ಬರಲು ಸಾಧ್ಯವಿಲ್ಲ. ಧಾರ್ಮಿಕ ಶ್ರದ್ಧಾ ಕೇಂದ್ರಗಳು ಅಭಿವೃದ್ಧಿ ಹೊಂದಿದರೆ ಊರಿಗೆ ಸುಭಿಕ್ಷೆ ಎಂಬುದು ನೂರಕ್ಕೆ ನೂರು ಸತ್ಯ. ಪ್ರತಿಯೊಂದು ಧರ್ಮದಲ್ಲೂ ವ್ಯಕ್ತಿಯ ಕಷ್ಟ, ನೋವು ಗುಣಪಡಿಸುವ ಸಂದೇಶವಿದೆ.