ಉಡುಪಿ: ದುರಾಸೆಯಿಂದ ದು:ಖವೇ ಹೆಚ್ಚು. ಭಗವಂತನ ಸರ್ವವ್ಯಾಪಕತೆ ಅರಿತು ಬದುಕಿದಾಗ ಮನಸ್ಸು ನಿರ್ಮಲವಾಗುತ್ತದೆ. ಅದರಿಂದ ಸರಿ-ತಪ್ಪುಗಳ ಅರಿವು ಮೂಡಿ ಕರ್ಮವೂ ಶುದ್ಧವಾಗುತ್ತದೆ. ಇದೇ ಭಗವಂತನನ್ನು ತಿಳಿಯುವ ಮತ್ತು ಪಡೆಯುವ ಏಕೈಕ ಮಾರ್ಗವಾಗಿದೆ ಎಂದು ಸಂತ ರವಿದಾಸರು ತಮ್ಮ ಬದುಕಿನ ಮೂಲಕ ತೋರಿಸಿಕೊಟ್ಟಿದ್ದಾರೆ ಎಂದು ಎನ್ಐಟಿಕೆ ಭಾಷಾ ವಿಭಾಗದ ಮುಖ್ಯಸ್ಥೆ ನಿಖಿತಾ ಹೇಳಿದರು.
ಉಡುಪಿಯ ಪೂರ್ಣಪ್ರಜ್ಞ ಕಾಲೇಜ್ (ಸ್ವಾಯತ್ತ)ನಲ್ಲಿ ಸಂತ ರವಿದಾಸ ಜಯಂತಿ ನಿಮಿತ್ತ ಆಯೋಜಿಸಿದ್ದ 'ಭಾರತೀಯ ಸಂತ ಪರಂಪರೆ' ವಿಶೇಷ ಉಪನ್ಯಾಸ ಮಾಲಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂತ ರವಿದಾಸರ ಚಿಂತನೆ ಕೇವಲ ಆಧ್ಯಾತ್ಮಿಕ ಸಂದೇಶಕ್ಕೆ ಸೀಮಿತವಾಗಿರಲಿಲ್ಲ. ಅದು ಸಮಾನತೆ, ಮಾನವೀಯತೆ, ಪ್ರಾಮಾಣಿಕತೆ ಮತ್ತು ಸತ್ಕರ್ಮದ ಮಹತ್ವ ಸಾರುತ್ತವೆ. ಅವರ ಸಂದೇಶದಂತೆ ಬದುಕಿದಾಗ ಉತ್ತಮ ಮೌಲ್ಯ ಹೊಂದಿದ, ಸಂವೇದನಾಶೀಲ ಹಾಗೂ ಜವಾಬ್ದಾರಿಯುತ ವ್ಯಕ್ತಿಗಳಾಗಿ ರೂಪುಗೊಳ್ಳಲು ಸಾಧ್ಯ ಎಂದರು.
ಎಂಐಟಿಯ ನಿವೃತ್ತ ಪ್ರಾಧ್ಯಪಕ ಡಾ. ನಾರಾಯಣ ಶೆಣೈ, ಪೂರ್ಣಪ್ರಜ್ಞ ಕಾಲೇಜ್ನ ಹಿಂದಿ ವಿಭಾಗದ ಮುಖ್ಯಸ್ಥ ಡಾ. ಆನಂದ್ ರಾಯಮನೆ ಉಪಸ್ಥಿತರಿದ್ದರು. ಕೆಆರ್ಎಂಎಸ್ಎಸ್ ಮಂಗಳೂರು ವಿಭಾಗದ ಉಪಾಧ್ಯಕ್ಷೆ ಡಾ. ನಾಗರತ್ನಾ ಅಧ್ಯಕ್ಷತೆ ವಹಿಸಿದ್ದರು.
ವಿದ್ಯಾರ್ಥಿನಿ ಸನ್ನಿಧಿ ಸ್ವಾಗತಿಸಿದರು. ಪೂರ್ಣಪ್ರಜ್ಞ ಕಾಲೇಜ್ನ ಹಿಂದಿ ಪ್ರಾಧ್ಯಾಪಕಿ ಡಾ. ಭೈರವಿ ಪಂಡ್ಯಾ ಕಾರ್ಯಕ್ರಮ ನಿರೂಪಿಸಿದರು. ದೀಕ್ಷಾ ಭಟ್ ವಂದಿಸಿದರು.