ಧನ್ಯೋಸ್ಮಿ ಕಾರ್ಯಕ್ರಮದಲ್ಲಿ ಪಾಕತಜ್ಞ ದಂಪತಿಯನ್ನು ಗೌರವಿಸಲಾಯಿತು. ಪ್ರಮುಖರಾದ ಪ್ರತಾಪಸಿಂಹ ನಾಯಕ್, ಹರೀಶ್ ಪೂಂಜ, ಶರತ್ ಕೃಷ್ಣ ಪಡುವೆಟ್ನಾಯ ಮತ್ತಿತರರಿದ್ದರು.
ಬೆಳ್ತಂಗಡಿ: ಉಜಿರೆ ಬ್ರಹ್ಮಕಲಶದಲ್ಲಿ ಊರಿಗೆ ಊರೇ ಸೇರಿ ಜನಾರ್ದನ ಸ್ವಾಮಿಯ ಸೇವೆಯೆಂದು ಭಾಗವಹಿಸಿ ಯಶಸ್ವಿಗೊಳಿಸಿದ್ದಾರೆ. ಪ್ರತಿಯೊಬ್ಬರೂ ಮಾಡಿದ ಸೇವೆಯನ್ನು ಸ್ವಾಮಿ ಗುರುತಿಸಿ ಅವರಿಗೆ ಉತ್ತರೋತ್ತರ ಶ್ರೇಯಸ್ಸು ಕರುಣಿಸುತ್ತಾನೆ. ಬ್ರಹ್ಮಕಲಶದ ಯಶಸ್ಸಿನ ಸತ್ಪಲ ಊರಿನ ಭಕ್ತರಿಗೆ ಲಭಿಸುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಹೇಳಿದರು.
ಉಜಿರೆ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ಶ್ರೀ ಜನಾರ್ದನ ದೇವಳದ ಬ್ರಹ್ಮಕಲಶ, ವಿಜಯಗೋಪುರ ಲೋಕಾರ್ಪಣೆ, ನೂತನ ಬ್ರಹ್ಮರಥ ಹಾಗೂ ಪುಷ್ಪರಥ ಸಮರ್ಪಣೆ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನಗೊಂಡ ಹಿನ್ನೆಲೆ ವಿಜಯಗೋಪುರ ನಿರ್ಮಾಣ ಸಮಿತಿ ಹಾಗೂ ಬ್ರಹ್ಮಕಲಶ ಸಮಿತಿ ವಿವಿಧ ಸಂಚಾಲಕರು, ಸಹಸಂಚಾಲಕರು ಹಾಗೂ ಸದಸ್ಯರು ಮತ್ತು ಶ್ರಮಸೇವೆಯಲ್ಲಿ ಭಾಗವಹಿಸಿದ ಭಕ್ತರಿಗೆ ಕೃತಜ್ಞತೆ ಸಲ್ಲಿಸುವ ಧನ್ಯೋಸ್ಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬ್ರಹ್ಮಕಲಶ ಕಾರ್ಯಾಧ್ಯಕ್ಷ ಶಶಿಧರ ಶೆಟ್ಟಿ ನವಶಕ್ತಿ ಮಾತನಾಡಿ, ಭಕ್ತರ ಶ್ರಮದಾನದಿಂದ ತೊಡಗಿ ವಸ್ತ್ರದಾನದವರೆಗೆ ಎಲ್ಲ ಜಾತಿಯವರು ಸೇರಿ ಮಾಡಿದ ಶ್ರಮದಾನ, ಹೊರೆಕಾಣಿಕೆ, ಮುಸ್ಲಿಮರ ಅನ್ನಸಂತರ್ಪಣೆ ಸೇವೆ ಎಲ್ಲವೂ ಅಚ್ಚುಕಟ್ಟಾಗಿ ನಡೆದಿದೆ ಎಂದರು.
ಶಾಸಕ ಹರೀಶ್ ಪೂಂಜ, ಪ್ರಧಾನ ಸಂಚಾಲಕ ಕೆ.ಮೋಹನ್ ಕುಮಾರ್ ಮಾತನಾಡಿದರು. ಸುರುಚಿ ಪಾಕಶಾಲೆಯಲ್ಲಿ ಅಡುಗೆ ಸಿದ್ಧಪಡಿಸಿದ ಪಾಕತಜ್ಞ ರವಿ ಭಟ್ ಕುಂಟಿನಿ ದಂಪತಿ, ಜನಾರ್ದನ ಸ್ವಾಮಿಯ ಭಾವಚಿತ್ರ ಸಮರ್ಪಿಸಿದ ಕಲಾವಿದ ಯಾದವ ಅವರನ್ನು ಗೌರವಿಸಲಾಯಿತು.
ಸುಪ್ರಸಾದ ಅನ್ನಛತ್ರದ ಸಂಚಾಲಕ ಅರುಣಕುಮಾರ್, ಸಮಿತಿ ಕೋಶಾಧಿಕಾರಿಗಳಾದ ಲಕ್ಷ್ಮಣ ಸಫಲ್ಯ ಮತ್ತು ರಾಜೇಶ್ ಪೈ, ಕಾರ್ಯದರ್ಶಿ ಭರತ್ ಕುಮಾರ್, ಎಸ್‌ಡಿಎಂ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್., ಮಾತೃಶಕ್ತಿ ಶಿಲಾ ಸಂಚಯನ ಸಮಿತಿ ಅಧ್ಯಕ್ಷೆ ವನಿತಾ ವಿ.ಶೆಟ್ಟಿ ಉಪಸ್ಥಿತರಿದ್ದರು.
ಎಸ್‌ಡಿಎಂ ಕಾಲೇಜಿನ ಸಂಸ್ಕೃತ ಉಪನ್ಯಾಸಕ ಡಾ.ಶ್ರೀಧರ ಭಟ್ ನಿರೂಪಿಸಿ. ಸಮಿತಿ ಕಾರ್ಯದರ್ಶಿ ರವೀಂದ್ರ ಶೆಟ್ಟಿ, ಸುರಭಿ ಸ್ವಾಗತಿಸಿ, ಸಹ ಕೋಶಾಧಿಕಾರಿ ಸಂಜೀವ ಶೆಟ್ಟಿ ಕುಂಟಿನಿ ವಂದಿಸಿದರು.
ಕೃತಜ್ಞತೆ ಸಲ್ಲಿಕೆ
ಶ್ರೀ ಜನಾರ್ದನ ದೇವಳದ ಆನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ ಪ್ರಸ್ತಾವಿಸಿ, ಬ್ರಹ್ಮಕಲಶದ ಯಶಸ್ಸಿನ ನಂತರ ತಿರುಗಿ ನೋಡಿದರೆ ಊರಿನ ಭಕ್ತ ಜನರ ಭಕ್ತಿ, ಶ್ರಮ, ಭಾವನೆ ವ್ಯಕ್ತವಾಗಿ ಇಡೀ ರಾಜ್ಯ ತಿರುಗಿ ನೋಡುವಂತೆ ಮಾಡಿದೆ. ಊರಿನ ಭಕ್ತರು ಶ್ರಮದಿಂದ ತನು-ಮನ-ಧನಗಳಿಂದ ಸರ್ವಸ್ವವನ್ನೂ ಧಾರೆಯೆರೆದು ಯಶಸ್ವಿಗೊಳಿಸಿದ್ದಾರೆ ಎಂದರು.