ಆನೆಕೆರೆ. 
ಉಡುಪಿ

ಐತಿಹಾಸಿಕ ಆನೆಕೆರೆಗೆ ಮೆರುಗು

ಹರಿಪ್ರಸಾದ್ ನಂದಳಿಕೆ ಕಾರ್ಕಳ
ಜೈನ ಕಾಶಿ ಎಂದೇ ಪ್ರಸಿದ್ಧಿಯಾದ ಕಾರ್ಕಳದ ಪ್ರವಾಸಿ ಭೂಪಟಕ್ಕೆ ಈಗ ಮತ್ತೊಂದು ಆಕರ್ಷಣೆ ಸೇರ್ಪಡೆಯಾಗುತ್ತಿದೆ. ನಗರದ ಹೃದಯಭಾಗದಲ್ಲಿರುವ ಐತಿಹಾಸಿಕ ಆನೆಕೆರೆಯಲ್ಲಿ ಅದ್ಭುತವಾದ ನೃತ್ಯ ಕಾರಂಜಿ ನಿರ್ಮಾಣವಾಗಲಿದ್ದು, ಮತ್ತಷ್ಟು ಪ್ರವಾಸಿಗರನ್ನು ಸೆಳೆಯಲು ಸಜ್ಜಾಗುತ್ತಿದೆ.
ಬಾಹುಬಲಿ ಮಹಾಮಸ್ತಕಾಭಿಷೇಕ ಹೊಸ್ತಿಲಲ್ಲಿ ಆನೆಕೆರೆಯನ್ನು ಆಕರ್ಷಕಗೊಳಿಸಿ ದೊಡ್ಡ ಪ್ರಮಾಣದಲ್ಲಿ ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ 1.5 ಕೋಟಿ ರೂ. ವೆಚ್ಚದಲ್ಲಿ ನೃತ್ಯ ಕಾರಂಜಿ ನಿರ್ಮಾಣವಾಗಲಿದೆ. ಈ ಮೂಲಕ ಆನೆಕೆರೆಯಲ್ಲಿ ಹೊಸ ಕಳೆ ಮೂಡಲಿದ್ದು, ಧಾರ್ಮಿಕ ಕೇಂದ್ರದೊಂದಿಗೆ ಪ್ರವಾಸಿ ತಾಣವಾಗಿಯೂ ಪ್ರಸಿದ್ಧಿ ಪಡೆಯಲಿದೆ.

ಕೆರೆಯ ಸುತ್ತ ವಾಕಿಂಗ್ ಪಾತ್

ಸ್ಥಳೀಯ ಶಾಸಕರು ಮತ್ತು ಪ್ರವಾಸೋದ್ಯಮ ಇಲಾಖೆ ವಿಶೇಷ ಆಸಕ್ತಿಯೊಂದಿಗೆ ಈ ಯೋಜನೆ ಹಮ್ಮಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಕೆರೆಯ ಸುಂದರೀಕರಣ ಭಾಗವಾಗಿ ಸಂಗೀತದ ತಾಳಕ್ಕೆ ತಕ್ಕಂತೆ ಜಿಗಿಯುವ ಬಣ್ಣಬಣ್ಣದ ನೀರಿನ ಕಾರಂಜಿಗಳು ನೋಡುಗರನ್ನು ಮಂತ್ರಮುಗ್ಧಗೊಳಿಸಲಿವೆ. ಕೆರೆಯ ಸುತ್ತಲೂ ವಾಕಿಂಗ್ ಪಾತ್(ನಡಿಗೆ ಪಥ), ಹಸಿರು ಉದ್ಯಾನವನ ಮತ್ತು ಆಕರ್ಷಕ ದೀಪಾಲಂಕಾರ ಪ್ರವಾಸಿಗರ ಕಣ್ಮನ ತಣಿಸಲಿದೆ.
ಶಾಸಕರ ಮುತುವರ್ಜಿ: 2027ರ ಮಹಾಮಸ್ತಕಾಭಿಷೇಕ ಹಿನ್ನೆಲೆಯಲ್ಲಿ ಹತ್ತಾರು ಯೋಜನೆ ರೂಪಿಸಲಾಗಿದ್ದು, ಮೈಸೂರು ಕೆಆರ್‌ಎಸ್‌ನಂತೆಯೇ ಸಂಗೀತ ಕಾರಂಜಿ ನಿರ್ಮಾಣವಾಗಲಿದೆ. ಮುಂದಿನ ದಿನಗಳಲ್ಲಿ ಬಸದಿಗೆ ದೀಪಾಲಂಕಾರ, ವಾಕಿಂಗ್ ಟ್ರಾೃಕ್‌ಗೆ ದೀಪ ಅಳವಡಿಕೆ ಕಾರ್ಯ ಕೈಗೆತ್ತಿಕೊಳ್ಳಲಾಗುವುದು. ಕೇಂದ್ರ, ರಾಜ್ಯ ಸರ್ಕಾರದ ಅನುದಾನ ಬಳಸಿಕೊಂಡು ಕಾರ್ಕಳವನ್ನು ಪ್ರವಾಸಿ ಕೇಂದ್ರವಾಗಿಸುವ ನಿಟ್ಟಿನಲ್ಲಿ ಸರ್ವ ಪ್ರಯತ್ನ ಕಾರ್ಕಳ ಶಾಸಕ ವಿ.ಸುನೀಲ್ ಕುಮಾರ್ ಮುತುವರ್ಜಿಯಲ್ಲಿ ನಡೆಯುತ್ತಿದೆ.

ಆನೆಕೆರೆ ಇತಿಹಾಸ

5 ಶತಮಾನಗಳಷ್ಟು ಪ್ರಾಚೀನ, ಐವರು ತೀರ್ಥಂಕರರ ದಿವ್ಯ ಬಿಂಬಗಳಿಂದ ಕೂಡಿರುವ ಆನೆಕೆರೆ ಬಸದಿ ಜೀರ್ಣೋದ್ಧಾರಗೊಂಡು 2024 ಜ.18ರಿಂದ ಜ.22ರವರೆಗೆ ಪಂಚಕಲ್ಯಾಣ ಮಹೋತ್ಸವ ವೈಭವದಿಂದ ಜರುಗಿತ್ತು. ಭೈರವ ಅರಸು ವಂಶದ ಪಾಂಡ್ಯಪ್ಪೊಡೆಯ ಕಟ್ಟಿಸಿರುವ ಈ ಬಸದಿ 24.66 ಎಕರೆ ವಿಸ್ತೀರ್ಣದ ಕೆರೆ ಹೊಂದಿದ್ದು, ಕಾರ್ಕಳದ ರಮಣೀಯ ತಾಣಗಳಲ್ಲಿ ಒಂದು. 1545ರಲ್ಲಿ ನಿರ್ಮಿಸಿದ ಆನೆಕೆರೆ ಬಸದಿಯಲ್ಲಿ ಪೂರ್ವಾಭಿಮುಖವಾಗಿ ಭಗವಾನ್ ಶ್ರೀ ಆದಿನಾಥ ಸ್ವಾಮಿ, ಪಶ್ಚಿಮಾಭಿಮುಖವಾಗಿ ಶ್ರೀ ಶಾಂತಿನಾಥ ಸ್ವಾಮಿ, ದಕ್ಷಿಣಾಭಿಮುಖವಾಗಿ ಶ್ರೀ ಚಂದ್ರಪ್ರಭ ಸ್ವಾಮಿ, ಉತ್ತರಾಭಿಮುಖವಾಗಿ ಶ್ರೀ ಮಹಾವೀರ ಸ್ವಾಮಿ ಹಾಗೂ ಮೇಗಿನ ನೆಲೆಯಲ್ಲಿ ಶ್ರೀ ಪಾರ್ಶ್ವನಾಥ ಸ್ವಾಮಿ ಪ್ರತಿಮೆ ಪ್ರತಿಷ್ಠಾಪಿಸಲಾಗಿದ್ದು ನಿತ್ಯ ಪೂಜೆ ನೆರವೇರುತ್ತಿದೆ.

ಆನೆಕೆರೆಯನ್ನು ಮತ್ತಷ್ಟು ಆಕರ್ಷಕಗೊಳಿಸುವ ನಿಟ್ಟಿನಲ್ಲಿ ಮೈಸೂರು ಕೆಆರ್‌ಎಸ್‌ನಂತೆಯೇ ಸಂಗೀತ ಕಾರಂಜಿ ನಿರ್ಮಾಣವಾಗಲಿದೆ. ಇದಕ್ಕಾಗಿ ಸರ್ಕಾರದಿಂದ 1.5 ಕೋಟಿ ರೂ. ಬಿಡುಗಡೆಗೊಳ್ಳಲಿದೆ. 2027ರ ಮಹಾಮಸ್ತಕಾಭಿಷೇಕ ಹಿನ್ನೆಲೆಯಲ್ಲಿ ಹತ್ತಾರು ಯೋಜನೆ ಈಗಾಗಲೇ ರೂಪಿಸಲಾಗಿದೆ. ಕಾರಂಜಿ ನಿರ್ಮಾಣದಿಂದ ಆನೆಕೆರೆ ಮತ್ತಷ್ಟು ಮೆರುಗು ಪಡೆಯಲಿದೆ.

ಅಂದು ಸಚಿವರಾಗಿದ್ದ ವಿ.ಸುನೀಲ್ ಕುಮಾರ್ ಸರ್ಕಾರದಿಂದ ದೊಡ್ಡ ಮೊತ್ತದ ಅನುದಾನ ಒದಗಿಸಿಕೊಟ್ಟ ಪರಿಣಾಮ 4.90 ಕೋಟಿ ರೂ.ವೆಚ್ಚದಲ್ಲಿ ಆನೆಕೆರೆ ಬಸದಿ ಜೀರ್ಣೋದ್ಧಾರಗೊಂಡಿದೆ. ಆ ವೇಳೆ ಗೋಪುರ, ಸುತ್ತುಪೌಳಿ, ವಿದ್ಯುತ್ ದೀಪಾಲಂಕಾರ, ವಾಕಿಂಗ್ ಟ್ರಾೃಕ್, ಟ್ರಾೃಕ್‌ಗೆ ಲೈಟಿಂಗ್, ಹಾಸು ಕಲ್ಲು, ಗಾರ್ಡನ್ ನಿರ್ಮಾಣ ಮಾಡಲಾಗಿತ್ತು. ಇದೀಗ ಕಾರಂಜಿ ನಿರ್ಮಾಣವಾಗುತ್ತಿರುವುದು ಬಹಳ ಖುಷಿಯ ವಿಚಾರ. ಇನ್ನಷ್ಟು ಪ್ರವಾಸಿಗರನ್ನು ಸೆಳೆಯಲು ಸಾಧ್ಯವಿದೆ.