ಉಡುಪಿಯಲ್ಲಿ ಆಯೋಜಿಸಿದ್ದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯನ್ನು ಅಬೀದ್​ ಗದ್ಯಾಳ ಉದ್ಘಾಟಿಸಿದರು. ಡಾ. ಬಸವರಾಜ ಜಿ. ಹುಬ್ಬಳ್ಳಿ, ಡಾ. ವಾಸುದೇವ ಉಪಾಧ್ಯಾಯ, ಡಾ. ಚಿದಾನಂದ ಸಂಜು, ಡಾ. ಲತಾ ನಾಯಕ ಇತರರಿದ್ದರು. 
ಉಡುಪಿ

ತೋರಿಕೆಗಿಂತ ನೈಜ ಜೀವನಕ್ಕೆ ನೀಡಿ ಆದ್ಯತೆ

* ಉಡುಪಿ ಅಪರ ಜಿಲ್ಲಾಧಿಕಾರಿ ಅಬೀದ್​ ಗದ್ಯಾಳ ಸಲಹೆ

* ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಉದ್ಘಾಟನೆ

ಉಡುಪಿ: ಇತ್ತೀಚೆಗೆ ಜೀವನದಲ್ಲಿ ರಿಯಲ್​ ಲೈಫ್ ಮತ್ತು ರೀಲ್​ ಲೈಫ್ ಎಂಬ ಎರಡು ವಿಧಾನ ಕಂಡುಬರುತ್ತದೆ. ಇನ್ನೊಬ್ಬರು ಬದುಕುತ್ತಿರುವ ರೀತಿ ನೋಡಿ ಕೀಳರಿಮೆಗೆ ಅಥವಾ ಮಾನಸಿಕ ವ್ಯಥೆಗೆ ಒಳಗಾಗುತ್ತೇವೆ. ಹೀಗಾಗಿ ನೈಜ ಜೀವನಕ್ಕೆ ಆದ್ಯತೆ ನೀಡಬೇಕಿದೆ. ಇದಕ್ಕೆ ಕುಟುಂಬದ ಪ್ರೋತ್ಸಾಹವೂ ಸಹ ಅತ್ಯಗತ್ಯ ಎಂದು ಅಪರ ಜಿಲ್ಲಾಧಿಕಾರಿ ಅಬೀದ್​ ಗದ್ಯಾಳ ಹೇಳಿದರು.

ಉಡುಪಿಯ ಅಜ್ಜರಕಾಡನಲ್ಲಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಕಚೇರಿಯ ಶ್ರೀಕೃಷ್ಣ ಸಭಾಂಗಣದಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಉಡುಪಿ ಜಿಲ್ಲೆ ಆಶ್ರಯದಲ್ಲಿ ಆಯೋಜಿಸಿದ್ದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಆಪ್ತ ಸಮಾಲೋಚನೆ

ತಂಡಿ, ನೆಗಡಿ, ಕ, ಜ್ವರ ಹೀಗೆ ಇನ್ನಿತರ ಕಾಯಿಲೆಗಳು ಇರುವಂತೆ ಮಾನಸಿಕ ಕಾಯಿಲೆಯೂ ಸಹ ಸಹಜ ಪ್ರಕ್ರಿಯೆಯಾಗಿದೆ. ವಾಟ್ಸಾಪ್​, ಫೇಸ್​ಬುಕ್​ಗಳಲ್ಲಿ ಸಾವಿರಾರು ಫ್ರೆಂಡ್ಸ್​ ಇದ್ದರೂ ಅವರ್ಯಾರೂ ಪ್ರಯೋಜನಕ್ಕೆ ಸಿಗಲಾರರು. ನಾಲ್ಕೇ ಮಂದಿ ಉತ್ತಮ ಗೆಳೆಯರಿದ್ದರೂ ಸಹ ಜೀವನ ಚೆನ್ನಾಗಿರುತ್ತದೆ. ನಮ್ಮೆಲ್ಲ ದು:ಖ, ದುಗುಡಗಳನ್ನು ಅವರಲ್ಲಿ ಹೇಳಿಕೊಂಡು ಮಾನಸಿಕ ವೇದನೆಯಿಂದ ಹೊರಬರಬಹುದಾಗಿದೆ. ಯಾರಾದರೂ ಖಿನ್ನತೆಗೆ ಒಳಗಾಗಿದ್ದರೆ ಟೋಲ್​ ಫ್ರೀ ನಂಬರ್​ 14416ಕ್ಕೆ ಕರೆ ಮಾಡಿದರೆ ಆಪ್ತಸಮಾಲೋಚನೆ ಮೂಲಕ ಮಾನಸಿಕ ಕಾಯಿಲೆಯಿಂದ ದೂರವಾಗಬಹುದು ಎಂದು ತಿಳಿಸಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ. ಬಸವರಾಜ ಜಿ. ಹುಬ್ಬಳ್ಳಿ ಅಧ್ಯಕ್ಷತೆ ವಹಿಸಿದ್ದರು.

ಉಡುಪಿ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ. ಲತಾ ನಾಯಕ ಮಾತನಾಡಿ, ಟೆಲಿ ಮನಸ್​, ಇಸಿಆರ್​ಸಿ ಹಾಗೂ ಯೋಜನೆಯಡಿ ಕೈಗೊಂಡ ಇನ್ನಿತರ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು.

ರೋಗವಾಹಕ ಆಶ್ರಿತ ರೋಗಗಳ ಜಿಲ್ಲಾ ನಿಯಂತ್ರಣಾಧಿಕಾರಿ ಡಾ. ವಾಸುದೇವ ಉಪಾಧ್ಯಾಯ, ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ. ಚಿದಾನಂದ ಸಂಜು, ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳು, ಆರೋಗ್ಯ ಇಲಾಖೆ ಸಿಬ್ಬಂದಿ, ಪ್ರಾಥಮಿಕ ಆರೋಗ್ಯ ಸುರಕ್ಷಣಾ ಅಧಿಕಾರಿಗಳು ಉಪಸ್ಥಿತರಿದ್ದರು.