ಹೆಬ್ರಿ ತಾಲೂಕು ಆಡಳಿತ ವತಿಯಿಂದ ಚಾರ ಗ್ರಾಪಂನಲ್ಲಿ ನಡೆದ ಪ್ರಜಾಸೇವೆ ಆಂದೋಲನ ಸಭೆಯಲ್ಲಿ ಸಾರ್ವಜನಿಕರು ಅಹವಾಲು ಸಲ್ಲಿಸಿದರು. 
ಉಡುಪಿ

ಮಾನವೀಯತೆಗೆ ಕೊಡಿ ಮೊದಲ ಪ್ರಾಶಸ್ತ್ಯ

ಚಾರ ಗ್ರಾಮ ಪಂಚಾಯಿತಿಯಲ್ಲಿ ಪ್ರಜಾಸೇವೆ ಆಂದೋಲನ ಸಭೆ

ಹೆಬ್ರಿ: ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಿ ವಿವಿಧ ಇಲಾಖೆಗಳ ನಡುವೆ ಸಮನ್ವಯತೆ ಕಾಯ್ದುಕೊಂಡು ಜನರ ಸಮಸ್ಯೆಗೆ ಪರಿಹಾರ ಕಲ್ಪಿಸಲು ಪ್ರಜಾಸೇವೆ ಉತ್ತಮ ವೇದಿಕೆ. ಅಧಿಕಾರಿಗಳು ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡಿ ಮಾನವೀಯತೆಗೆ ಮೊದಲ ಪ್ರಾಶಸ್ತ್ಯ ಕೊಡಬೇಕು ಎಂದು ನಾರಾಯಣ ಗುರು ಅಭಿವೃದ್ಧಿ ನಿಗಮ ಅಧ್ಯಕ್ಷ ಮುದ್ರಾಡಿ ಮಂಜುನಾಥ್ ಪೂಜಾರಿ ಹೇಳಿದರು.

ಹೆಬ್ರಿ ತಾಲೂಕು ಆಡಳಿತ ವತಿಯಿಂದ ಚಾರ ಗ್ರಾಮ ಪಂಚಾಯಿತಿಯಲ್ಲಿ ಶನಿವಾರ ನಡೆದ ಪ್ರಜಾಸೇವೆ ಆಂದೋಲನ ಸಭೆಯಲ್ಲಿ ಮಾತನಾಡಿದರು.

ವಾರಾಹಿ ಪೈಪ್‌ಲೈನ್ ಕಾಮಗಾರಿಗೆ ಅರಣ್ಯ ಇಲಾಖೆ ಅಡ್ಡಿ ಇರುವುದರಿಂದ ಶೀಘ್ರದಲ್ಲಿ ಅಧಿಕಾರಿಗಳು ಸಭೆ ನಡೆಸಿ ಕ್ರಮ ಕೈಗೊಳ್ಳಬೇಕು. ಎರಡು ಕೋಟಿ ರೂ. ಅನುದಾನದಲ್ಲಿ ಹೆಬ್ರಿಯಲ್ಲಿ ನಿರ್ಮಾಣವಾಗುವ ಅಗ್ನಿಶಾಮಕ ಠಾಣೆ ಸ್ಥಳವನ್ನು ಶೀಘ್ರ ನಿಗದಿಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಹೆಬ್ರಿ ತಾಲೂಕು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಂಕರ್ ಸೇರಿಗಾರ್ ಮಾತನಾಡಿ, ಕಾರ್ಯಕ್ರಮವನ್ನು ತರಾತುರಿಯಲ್ಲಿ ಮಾಡಲಾಗಿದೆ. ಸರ್ಕಾರದ ಕಾರ್ಯಕ್ರಮಗಳನ್ನು ಕಾಟಚಾರಕ್ಕೆ ಮಾಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಚಾರ ಮಂಡಾಡಿಜೆಡ್ಡು ಹಾಗೂ ಮಣಿಬಚ್ಚಲು ಸಂಪರ್ಕಿಸುವ ರಸ್ತೆ ಸಂಪೂರ್ಣ ಹಾಳಾಗಿದ್ದು, ಈ ರಸ್ತೆಯಲ್ಲೇ ಶಾಲಾ ಮಕ್ಕಳು, ಸ್ಥಳೀಯರು ಸಂಚರಿಸುತ್ತಿದ್ದಾರೆ. ರಸ್ತೆ ಹದಿಗೆಟ್ಟಿದ್ದರಿಂದ ವಾಹನಗಳು ಶಾಲಾ ಮೈದಾನದಲ್ಲಿ ಚಲಿಸುತ್ತಿದ್ದು, ರಸ್ತೆ ದುರಸ್ತಿ ಮಾಡಿಕೊಡಿ ಎಂದು ಚಾರ ಗ್ರಾಪಂ ಮಾಜಿ ಸದಸ್ಯ ವಾದಿರಾಜ ಶೆಟ್ಟಿ ಮನವಿ ಮಾಡಿದರು.

ತಹಸೀಲ್ದಾರ್ ರಾಕೇಶ್ ಫ್ರಾನ್ಸಿಸ್ ಬ್ರಿಟ್ಟೊ, ಇಒ ಪ್ರಶಾಂತ್, ಪೊಲೀಸ್ ಇನ್‌ಸ್ಪೆಕ್ಟರ್ ರಾಘವೇಂದ್ರ, ತಾಲೂಕುಮಟ್ಟದ ಅಧಿಕಾರಿಗಳು ಇದ್ದರು.

ಜನರಿಲ್ಲದ ಪ್ರಜಾ ಸೇವೆ ಆಂದೋಲನ

ಸಭಾಭವನದಲ್ಲಿ ಅಧಿಕಾರಿಗಳು ತುಂಬಿದ್ದರು. ಶಾಸಕರು, ಎಸಿ ಗೈರು ಹಾಜರಾಗಿದ್ದರು. ತರಾತುರಿಯಲ್ಲಿ ಯಾವುದೇ ಸಮರ್ಪಕ ಪ್ರಚಾರವಿಲ್ಲದೆ, ಹಕ್ಕುಪತ್ರಗಳನ್ನು ನೀಡದೆ, ಕಾಟಚಾರಕ್ಕೆ ಬೆರಳೆಣಿಕೆಯ ಜನರನ್ನು ಸೇರಿಸಿಕೊಂಡು ಕಾರ್ಯಕ್ರಮ ಮಾಡುತ್ತಿರುವುದಕ್ಕೆ ಚಾರ ಗ್ರಾಪಂ ಮಾಜಿ ಅಧ್ಯಕ್ಷ ದಿನೇಶ್ ಕುಮಾರ್ ಶೆಟ್ಟಿ ಬೇಸರ ವ್ಯಕ್ತಪಡಿಸಿದರು.