ಉಡುಪಿಯಲ್ಲಿ ನಡೆದ ವಿಶ್ವ ಶಾಂತಿ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಐವನ್​ ಡಿಸೋಜ ಅವರಿಗೆ ಸುಗುಣೇಂದ್ರ ಶ್ರೀಗಳು 'ಶ್ರೀಕೃಷ್ಣ ಗೀತಾನುಗ್ರಹ' ಪ್ರಶಸ್ತಿ ನೀಡಿ ಗೌರವಿಸಿದರು. ಸುಶ್ರೀಂದ್ರ ಶ್ರೀ, ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಇದ್ದರು. 
ಉಡುಪಿ

ಗೀತಾ ಪ್ರಸಾರವೇ ಶ್ರೀಕೃಷ್ಣನ ಪೂಜೆ

* ಸುಗುಣೇಂದ್ರ ತೀರ್ಥ ಶ್ರೀ ಅಭಿಮತ

* ವಿಶ್ವ ಶಾಂತಿ ಸಮ್ಮೇಳನ ಸಮಾರೋಪ

ಉಡುಪಿ: ಶ್ರೀಕೃಷ್ಣನ ಆರಾಧಕರಾದ ನಮಗೆ ಆತನ ಗೀತಾ ಸಂದೇಶವನ್ನು ಗರಿಷ್ಠ ಪ್ರಮಾಣದಲ್ಲಿ ಪ್ರಸಾರ ಮಾಡಬೇಕೆಂಬ ಉದ್ದೇಶ ಸಂಕಲ್ಪದೊಂದಿಗೆ ನಮ್ಮ ಚತುರ್ಥ ಪರ್ಯಾಯವನ್ನು 'ವಿಶ್ವ ಗೀತಾ ಪರ್ಯಾಯ' ಎಂದೇ ಆಚರಿಸುತ್ತಿದ್ದೇವೆ. ಕಳೆದ ಎರಡು ವರ್ಷದಿಂದ ನಿರಂತರವಾಗಿ ಗೀತಾಜ್ಞಾನ ಪಸರಿಸುವ ಕಾರ್ಯ ಮಾಡಲಾಗಿದೆ. ಯಾರು ಗೀತೆಯನ್ನು ಪ್ರಚಾರ ಮಾಡುತ್ತಾರೆಯೋ ಅವರೆಲ್ಲ ನನ್ನ ಆತ್ಮೀಯರು ಎಂದು ಭಗವದ್ಗೀತೆಯಲ್ಲಿ ಶ್ರೀಕೃಷ್ಣನೇ ತಿಳಿಸಿದ್ದಾನೆ. ಹೀಗಾಗಿ ಗೀತಾ ಪ್ರಸಾರವೇ ಶ್ರೀಕೃಷ್ಣನ ಪೂಜೆಯಾಗಿದೆ ಎಂದು ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ನುಡಿದರು.
ಉಡುಪಿಯ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಪುತ್ತಿಗೆ ಮಠದ ವತಿಯಿಂದ ಶನಿವಾರ (ಡಿ.13) ಆಯೋಜಿಸಿದ್ದ ವಿಶ್ವ ಶಾಂತಿ ಸಮ್ಮೇಳನ-2025ರ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.

ಭಗವದ್ಗೀತೆ ಶಾಂತಿಯ ಗ್ರಂಥ

ವಿಶ್ವತೋಮುಖವಾಗಿರುವ ಗೀತಾ ಪ್ರಚಾರಕ್ಕಾಗಿ ಕೋಟಿ ಜನರಿಂದ ಗೀತಾ ಲೇಖನ ಯಜ್ಞ, ಅಖಂಡ ಗೀತಾ ಪಾರಾಯಣ, ನಾಡಿನ ಅನೇಕ ವಿದ್ವಾಂಸರಿಂದ ಭಗವದ್ಗೀತೆಯ ನಿರಂತರ ಪ್ರವಚನ, ಗೀತಾ ಸ್ಪರ್ಧೆ, ಜನ್ಮಾಷ್ಟಮಿಗೆ ಮಾಸೋತ್ಸವ, ಗೀತಾ ಜಯಂತಿಗೆ ಬೃಹತ್​ ಗೀತೋತ್ಸವ, ನಾಡಿನ ವಿವಿಧ ಸಂತರಿಂದ ಸಂತ ಸಂದೇಶ ಹೀಗೆ ನಿತ್ಯವೂ ಗೀತಾ ಚಿಂತನಾ ಕಾರ್ಯಕ್ರಮ ನಡೆದಿದೆ. ಸಾಮೂಹಿಕ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ ಅವರೇ ಪಾಲ್ಗೊಂಡು 15ನೇ ಅಧ್ಯಾಯ ಪಠಿಸುವ ಮೂಲಕ ವಿಶ್ವಕ್ಕೆ ಗೀತೆಯ ಮಹತ್ವ ಸಾರಿದ್ದಾರೆ. ಭಗವದ್ಗೀತೆ ಎಂದರೆ ಶಾಂತಿ ಗ್ರಂಥ ಎನ್ನುವುದನ್ನು ವಿಶ್ವಕ್ಕೆ ತಿಳಿಸಲು ಕೃಷ್ಣನ ಸಾನ್ನಿಧ್ಯದಲ್ಲಿ ವಿಶ್ವ ಶಾಂತಿ ಸಮ್ಮೇಳನ ಆಯೋಜಿಸಿದ್ದಾಗಿ ಶ್ರೀಗಳು ತಿಳಿಸಿದರು.

ಪ್ರೀತಿಯೇ ಎಲ್ಲ ಧರ್ಮಗಳ ಸಾರ

ವಿಪ ಸದಸ್ಯ ಐವನ್​ ಡಿಸೋಜಾ ಮಾತನಾಡಿ, ಪ್ರೀತಿ, ವಿಶ್ವಾಸ, ಅನ್ಯೋನ್ಯತೆ ಪುಸ್ತಕಗಳಲ್ಲಿ ಓದಿ ತಿಳಿದುಕೊಂಡರೆ ಸಾಲದು. ಅದು ನಮ್ಮ ಮನಸ್ಸಿನಿಂದ ಬರಬೇಕು. ಆಗ ಸರ್ವಧರ್ಮಗಳಲ್ಲಿ, ದೇಶದಲ್ಲಿ ಹಾಗೂ ಎಲ್ಲರ ಮನೆಯಲ್ಲೂ ಶಾಂತಿ ನೆಲೆಸುತ್ತದೆ. ದೇವಸ್ಥಾನ, ಮಠಗಳು ನಮ್ಮ ಸಮಾಜದ ಆಸ್ತಿ. ಎಲ್ಲ ಧರ್ಮಗಳ ಸಾರವೂ ಸಹ ಎಲ್ಲರನ್ನೂ ಪ್ರೀತಿಸು ಎನ್ನುವುದೇ ಆಗಿದೆ. ಸ್ವಾಮಿಗಳು, ಧರ್ಮಗುರುಗಳು, ಮೌಲಾನಾಗಳು ಸಮಾಜಕ್ಕೆ ಒಳ್ಳೆಯ ಸಂದೇಶ, ಚಿಂತನೆ ನೀಡಲು ಮುಂದೆ ಬರುತ್ತಿದ್ದಾರೆ. ಪ್ರತಿಯೊಬ್ಬರೂ ಸಹ ಅವರ ಧರ್ಮದ ಸಾರ ತಿಳಿದುಕೊಂಡರೆ ಇನ್ನೊಂದು ಧರ್ಮದ ಅವಹೇಳನ ಮಾಡಲಾರರು. ಪ್ರೀತಿಯಿಂದ ಮಾತ್ರ ಜಗತ್ತನ್ನು ಗೆಲ್ಲಬಹುದು ಎಂದರು. 

ಎಲ್ಲರ ಮನಸ್ಸು ಶುದ್ಧಿಯಾಗಲಿ

ಮೂಡಬಿದರಿ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ, ಯಾವ ದೇಶ ಶಾಂತಿ ಬಯಸುತ್ತದೆಯೋ ಅವರು ಸುಗುಣೇಂದ್ರ ಶ್ರೀಗಳಿಂದ ಮಾರ್ಗದರ್ಶನ ಪಡೆಯಬಹುದು. ಸ್ವಾಮೀಜಿಗಳು ರಾಜಕೀಯ ಮಾಡಬಾರದು. ಆದರೆ, ರಾಜಕಾರಣಿಗಳಿಗೆ ಮಾರ್ಗದರ್ಶನ ಮಾಡಬಹುದು. ಶರೀರದ ಹಾಗೂ ಮನಸ್ಸಿನ ಸಮಸ್ಯೆಯಿಂದ ಎಲ್ಲೆಡೆ ಅಶಾಂತಿ ಉಂಟಾಗುತ್ತಿದೆ. ಎಲ್ಲ ಧರ್ಮವೂ ಸಹ ಬದುಕುವ ಆಶಯ ಹೊಂದಿದೆ. ಅದಕ್ಕಾಗಿ ಮಾನವೀಯ ಧರ್ಮ ನೈರ್ಮಲ್ಯೀಕರಣ ಆಗಬೇಕಿದೆ ಎಂದರು.
ಲೋಕಾಯುಕ್ತ ನ್ಯಾಯಮೂರ್ತಿ ಕೇಶವ ಮೂರ್ತಿ ಉಪಸ್ಥಿತರಿದ್ದರು. ಪ್ರೊ.ವಸುಮತಿ ಭಟ್​ ಅವರು ಬೆಳಗ್ಗೆಯಿಂದ ಸಂಜೆವರೆಗೆ ನಡೆದ ಸಮ್ಮೇಳನದ ವಿಷಯ ವಿಶೇಷತೆಯನ್ನು ಮಂಡಿಸಿದರು. ಬೆಳಗ್ಗೆ ಸಂದೇಶ ಗೋಷ್ಠಿ, ಮಧ್ಯಾಹ್ನ ನಡೆದ ಸಂವಾದ ಕಾರ್ಯಕ್ರಮದಲ್ಲಿ 10 ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡು ವಿಶ್ವ ಶಾಂತಿಗಾಗಿ ನಾವೇನು ಮಾಡಲಿದ್ದೇವೆ ಎಂಬ ಕುರಿತು ಮಾತನಾಡಿದರು.
ಸಾಯಂಕಾಲ ನಡೆದ ಮೂರನೇ ಗೋಷ್ಠಿ ಸಮನ್ವಯದಲ್ಲಿ ಸುಗುಣೇಂದ್ರ ಶ್ರೀಗಳು ವಿಶ್ವ ಶಾಂತಿ ಸಮ್ಮೇಳನ ಆಯೋಜಿಸಿರುವ ಉದ್ದೇಶದ ಕುರಿತು ಸಮಗ್ರ ವಿವರ ನೀಡಿದರು. ರೋಹಿತ್​ ಚಕ್ರತಿರ್ಥ ಕಾರ್ಯಕ್ರಮ ನಿರ್ವಹಿಸಿದರು.
"

ಮನುಷ್ಯನಿಗೆ ಆಸೆ ಇರಬೇಕು. ಆದರೆ, ದುರಾಸೆ ಇರಬಾರದು. ತೃಪ್ತಿಯೇ ಸಿರಿತನ. ಅತೃಪ್ತಿಯೇ ಬಡತನ. ವಿಶ್ವದ ಕೆಲವು ಮುಖಂಡರಿಗೆ ಅಧಿಕಾರದ ದಾಹ. ನೀರಿನಿಂದ ತೆಗೆದ ಮೀನಿನಂತೆ ಅವರು ಚಡಪಡಿಸುತ್ತಾರೆ. ಅಧಿಕಾರಕ್ಕಾಗಿ ಯುದ್ಧವನ್ನೂ ಮಾಡಿಸುತ್ತಾರೆ. ದೈವ-ದೇವರು, ಧರ್ಮ, ಪೃಕೃತಿ ಹಾಗೂ ಮನೋಸ್ಥಿತಿ ಸರಿ ಇಲ್ಲದಿದ್ದರೆ ವಿಶ್ವದಲ್ಲಿ ಅಶಾಂತಿ ನೆಲೆಸಲಿದೆ. ಈ ನಾಲ್ಕು ಗುಣಗಳೇ ವಿಶ್ವದ ನಾಶಕ್ಕೂ ಕಾರಣವಾಗಲಿದೆ.