ಉಡುಪಿಯ ಬ್ರಹ್ಮಾವರದಲ್ಲಿ ನಡೆದ ಪ್ರೇರಣಾದಾಯಕ ಕಾರ್ಯಾಗಾರದಲ್ಲಿ ಡಾ. ಸುಧೀರ್ ರಾಜ್ ಕೆ. ಅವರಿಗೆ "ಸೇವಾರತ್ನ' ಪುರಸ್ಕಾರ ನೀಡಲಾಯಿತು. ಅಣ್ಣಯ್ಯ ದಾಸ್, ದಿನಕರ್ ಕೆ. ಅಮೀನ್, ಸುಂದರ್ ಪೂಜಾರಿ, ಮಧುಸೂದನ್ ಹೇರೂರು, ಮಿಲ್ಟನ್ ಒಲಿವೇರಾ, ರಾಘವೇಂದ್ರ ಪ್ರಭು ಕರ್ವಾಲು ಇತರರಿದ್ದರು.
ಡಾ. ಸುಧೀರ್ ರಾಜ್ ಕೆ. ಅಭಿಪ್ರಾಯ
* ಜಯಂಟ್ಸ್ ಗ್ರೂಪ್ಸ್ ಬ್ರಹ್ಮಾವರದ ಪ್ರೇರಣಾ ಕಾರ್ಯಾಗಾರ
ಉಡುಪಿ: ಭಾವನೆಗಳ ಅರ್ಥ ಮಾಡಿಕೊಂಡು ಕಷ್ಟ-ಸುಖ ಸಮಾನವಾಗಿ ಸ್ವೀಕರಿಸಿ ಜೀವನ ಪ್ರೀತಿಸುವ ಗುಣದಿಂದ ಜನ್ಮ ಸಾರ್ಥಕವಾಗುತ್ತದೆ. ವಿಶಾಲ ಮನೋಭಾವ, ವಿಷಯದ ಸಮಗ್ರತೆಯಿದ್ದರೆ ಧನ್ಯತೆ ಲಭಿಸುತ್ತದೆ. ಒಂದು ದೇಶ, ಒಂದು ಕುಟುಂಬ ಮತ್ತು ಒಂದು ಭವಿಷ್ಯ ಈ ನಿಟ್ಟಿನಲ್ಲಿ ಯೋಚಿಸಿ ಸಮಷ್ಟಿ ಭಾವ ಅಳವಡಿಸಿಕೊಂಡರೆ ಬದುಕಿನಲ್ಲಿ ನೆಮ್ಮದಿ ಇರುತ್ತದೆ ಎಂದು ನಿಟ್ಟೆ ಕೆಎಸ್ ಹೆಗಡೆ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ನ ಪ್ರಾಧ್ಯಾಪಕ ಡಾ. ಸುಧೀರ್ ರಾಜ್ ಕೆ. ಅಭಿಪ್ರಾಯಪಟ್ಟರು.
ಬ್ರಹ್ಮಾವರದ ಸಿಟಿ ಸೆಂಟರ್ನಲ್ಲಿ ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ, ಜಯಂಟ್ಸ್ ಕೇರ್ ಫೌಂಡೇಷನ್ ವತಿಯಿಂದ ಆಯೋಜಿಸಿದ್ದ ಮಹಾಸಭೆ ಮತ್ತು ಪ್ರೇರಣಾದಾಯಕ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಜಯಂಟ್ಸ್ ಸೆಂಟ್ರಲ್ ಕಮಿಟಿಯ ಸದಸ್ಯ ದಿನಕರ್ ಕೆ. ಅಮೀನ್ ಶುಭಹಾರೈಸಿದರು. ಜಯಂಟ್ಸ್ ಸದಸ್ಯರು ಮತ್ತು ಘಟಕದ ಇತರ ಪದಾಧಿಕಾರಿಗಳನ್ನು ಗೌರವಿಸಲಾಯಿತು. ಜಯಂಟ್ಸ್ ಗ್ರೂಪ್ ಬ್ರಹ್ಮಾವರದ ಅಧ್ಯಕ್ಷ ಅಣ್ಣಯ್ಯ ದಾಸ್ ಅಧ್ಯಕ್ಷತೆ ವಹಿಸಿದ್ದರು.
ಘಟಕದ ನಿರ್ದೇಶಕ ಸುಂದರ್ ಪೂಜಾರಿ ಮೂಡುಕುಕ್ಕುಡೆ ನೂತನ ಸದಸ್ಯರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಮಾಜಿ ಅಧ್ಯಕ್ಷ ಶಿವರಾಮ್ ಶೆಟ್ಟಿ ಅವರು ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಧನ ಸಹಾಯ ನೀಡಿದರು.
ಕಾರ್ಯದರ್ಶಿ ಮಿಲ್ಟನ್ ಒಲಿವೇರಾ ವರದಿ ವಾಚಿಸಿದರು. ಫೆಡರೇಷನ್ ಮಾಜಿ ಅಧ್ಯಕ್ಷ ಮಧುಸೂದನ್ ಹೇರೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಘವೇಂದ್ರ ಪ್ರಭು ಕರ್ವಾಲು ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕರಾದ ಡೋರಿಸ್ ಡಿಸೋಜ, ವಿವೇಕ ಕಾಮತ್, ಕಿಶೋರಿ ಶೆಟ್ಟಿ ಸಹಕರಿಸಿದರು.
ಸಭೆಗೂ ಮೊದಲು ಕಾರ್ತಿಕ್ ರಾಜ್ ಸಾಸ್ತಾನ ಮತ್ತು ರೊನಾಲ್ಡ್ ಡಯಾಸ್ ಅವರಿಂದ ಸಂಗೀತ ಕಾರ್ಯಕ್ರಮ, ಪ್ರತಿಭಾ ಸುರೇಶ್ ಮತ್ತು ಸುಧಾಕರ್ ನಾಯಕ್ ಅವರಿಂದ ಸದಸ್ಯರಿಗೆ ವಿವಿಧ ಕ್ರೀಡಾ ಚಟುವಟಿಕೆ ನಡೆಯಿತು.