ಉಡುಪಿಯ ಬಡಗಬೆಟ್ಟು ಸೊಸೈಟಿಯಲ್ಲಿ ಆಯೋಜಿಸಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಜಾರ್ಜ್ ಸ್ಯಾಮ್ಯುಯೆಲ್ ಭಾವಚಿತ್ರಕ್ಕೆ ಬಿ.ಜಯಕರ್ ಶೆಟ್ಟಿ ಇಂದ್ರಾಳಿ ಪುಷ್ಮ ನಮನ ಸಲ್ಲಿಸಿದರು. ಸದಾಶಿವ್ ನಾಯ್ಕ್, ಪುರುಷೋತ್ತಮ್ ಶೆಟ್ಟಿ, ಮನೋಹರ್ ಎಸ್. ಶೆಟ್ಟಿ, ರಂಜನ್ ಮನೋಹರ್ ಇತರರಿದ್ದರು.
* ಅಧ್ಯಕ್ಷ ಬಿ.ಜಯಕರ್ ಶೆಟ್ಟಿ ಇಂದ್ರಾಳಿ ಅನಿಸಿಕೆ
* ಬಡಗಬೆಟ್ಟು ಸೊಸೈಟಿಯಲ್ಲಿ ನುಡಿನಮನ
ಉಡುಪಿ: ಉಡುಪಿಯ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಪ್ರಗತಿಯಲ್ಲಿ ಸದಾ ಮುಂಚೂಣಿಯಲ್ಲಿದ್ದು ತಮ್ಮ ಅಪಾರ ಅನುಭವ, ಸರಳತೆ ಮತ್ತು ಸಮಾಜಮುಖಿ ಸೇವೆಯಿಂದ ನಮಗೆಲ್ಲ ಮಾರ್ಗದರ್ಶಕರಾಗಿದ್ದ ಲಯನ್ ಜಾರ್ಜ್ ಸ್ಯಾಮ್ಯುಯೆಲ್ ನಿಧನವು ಸಹಕಾರ ಕ್ಷೇತ್ರ ಹಾಗೂ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಬಿ.ಜಯಕರ್ ಶೆಟ್ಟಿ ಇಂದ್ರಾಳಿ ತಿಳಿಸಿದರು.
ಉಡುಪಿಯ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ವತಿಯಿಂದ ಜಗನ್ನಾಥ ಸಭಾಭವನದಲ್ಲಿ ಆಯೋಜಿಸಿದ್ದ ಸಂಸ್ಥೆಯ ಉಪಾಧ್ಯಕ್ಷ, ಹಿರಿಯ ಲಯನ್ಸ್ ಮುಖಂಡರೂ ಆಗಿದ್ದ ಲಯನ್ ಜಾರ್ಜ್ ಸ್ಯಾಮ್ಯುಯೆಲ್ ಅವರ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸ್ಮರಣೀಯ ಸೇವೆ
ಅಂಚೆ ಇಲಾಖೆಯಲ್ಲಿ ಉನ್ನತ ಹುದ್ದೆಯಲ್ಲಿದ್ದ ಅವರು ನಿವೃತ್ತಿಯ ನಂತರವೂ ಲಯನ್ಸ್ ಸಂಸ್ಥೆ, ಪ್ರೊಟೆಸ್ಟಂಟ್ ಕ್ರಿಶ್ಚಿಯನ್ ಸಮುದಾಯ ಹಾಗೂ ಸೌಹಾರ್ದ ಸಮಿತಿಗಳ ಮೂಲಕ ಹಲವು ಜನಪರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ನಮ್ಮ ಸೊಸೈಟಿಯ ನಿರ್ದೇಶಕರಾಗಿ ಹಾಗೂ ಉಪಾಧ್ಯಕ್ಷರಾಗಿ ಆಡಳಿತಾತ್ಮಕವಾಗಿ ನೀಡಿದ್ದ ಸಲಹೆ-ಮಾರ್ಗದರ್ಶನ ಸ್ಮರಣೀಯ ಎಂದರು.
ನುಡಿನಮನ ಸಭೆಯಲ್ಲಿ ಸೊಸೈಟಿಯ ನಿರ್ದೇಶಕರು, ಜಾರ್ಜ್ ಪುತ್ರ ರಂಜನ್ ಮನೋಹರ್, ಉದ್ಯಮಿಗಳಾದ ಪುರುಷೋತ್ತಮ್ ಶೆಟ್ಟಿ, ಮನೋಹರ್ ಎಸ್. ಶೆಟ್ಟಿ, ಬ್ಯಾಂಕ್ನ ಪ್ರಧಾನ ವ್ಯವಸ್ಥಾಪಕ ರಾಜೇಶ್ ವಿ. ಶೇರಿಗಾರ್, ಸಹಾಯಕ ಪ್ರಧಾನ ವ್ಯವಸ್ಥಾಪಕ ಪ್ರವಿಣಕುಮಾರ್, ಲೆಕ್ಕಿಗರಾದ ಅಶ್ವಿನಿಕುಮಾರ್ ಎಂ. ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ಅಂಚೆ ಇಲಾಖೆಯಿಂದ ನಿವೃತ್ತರಾದ ಬಳಿಕವೂ ಜಾರ್ಜ್ ಸ್ಯಾಮ್ಯುಯೆಲ್ ಅವರು ಅಖಿಲ ಭಾರತ ಅಂಚೆ ಮತ್ತು ಆರ್ಎಂಎಸ್ ಪಿಂಚಣಿದಾರರ ಸಂಘದ ಮೂಲಕ ಪಿಂಚಣಿದಾರರಿಗಿರುವ ಸಮಸ್ಯೆಗಳ ಪರಿಹಾರ ಹಾಗೂ ಅವರ ಹಕ್ಕುಗಳ ರಕ್ಷಣೆಗೆ ಸಕ್ರಿಯವಾಗಿ ಶ್ರಮಿಸಿದ್ದರು. ಅನೇಕ ಜನರಿಗೆ ನೆರವು ಒದಗಿಸಿದ್ದರು. ಅವರ ಸಮಾಜಮುಖಿ ಚಟುವಟಿಕೆ, ಮಾರ್ಗದರ್ಶನ ಮತ್ತು ಸೇವಾ ಮನೋಭಾವ ಎಲ್ಲರಿಗೂ ಆದರ್ಶ-ಮಾದರಿಯಾಗಿದೆ.
— ಸದಾಶಿವ್ ನಾಯ್ಕ್. ಬಡಗಬೆಟ್ಟು ಸೊಸೈಟಿಯ ನಿರ್ದೇಶಕ.