ಕಟಪಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಲ್ಟಿಯಾದ ಗ್ಯಾಸ್ ಟ್ಯಾಂಕರ್‌ಗೆ ನೀರು ಹಾಯಿಸುತ್ತಿರುವ ಅಗ್ನಿಶಾಮಕದಳದ ಸಿಬ್ಬಂದಿ.
ಮಂಗಳೂರು- ಉಡುಪಿ ವಾರ್ಗದ ರಾಷ್ಟ್ರೀಯ ಹೆದ್ದಾರಿ ಕಟಪಾಡಿಯಲ್ಲಿ ಸೋಮವಾರ ಬೆಳಗ್ಗೆ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿದ್ದು, ಅನಿಲ ಸೋರಿಕೆಯಾಗಿದೆ.
ಹಿಂದೂಸ್ತಾನ್ ಪೆಟ್ರೋಲಿಯಂ ಕಂಪನಿಗೆ ಸೇರಿದ ಗ್ಯಾಸ್ ಟ್ಯಾಂಕರ್ ಇದಾಗಿದ್ದು, ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ರಸ್ತೆ ಮಧ್ಯದಲ್ಲಿ ಬಿದ್ದಿತ್ತು. ಕೆಲಕಾಲ ಆತಂಕದ ವಾತಾವರಣ ಉಂಟಾಗಿತ್ತು. ಟ್ಯಾಂಕರ್‌ನಿಂದ ಗ್ಯಾಸ್ ಸೋರಿಕೆ ಆಗುತ್ತಿರುವುದರಿಂದ ಈ ವಾರ್ಗದಲ್ಲಿ ರಾತ್ರಿ 8ರವರೆಗೆ ಯಾವುದೇ ವಾಹನ ಸಂಚರಿಸದಂತೆ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಆದೇಶ ಹೊರಡಿಸಿದ್ದರು. ವಾಹನಗಳ ಸುಗಮ ಸಂಚಾರಕ್ಕಾಗಿ ಬದಲಿ ಮಾರ್ಗ ಅಳವಡಿಸಲಾಗಿತ್ತು.
ಸುತ್ತಿ ಬಳಸಿ ಪ್ರಯಾಣ
ಮಂಗಳೂರಿನಿಂದ ಉಡುಪಿಯತ್ತ ಸಾಗುವ ವಾಹನಗಳು ಕಾಪುವಿನಿಂದ ಶಿರ್ವ, ಮೂಡುಬೆಳ್ಳೆ ಮಣಿಪುರ ವಾರ್ಗವಾಗಿ ಮಣಿಪಾಲಕ್ಕೆ ತೆರಳಿ ಅಲ್ಲಿಂದ ಉಡುಪಿಗೆೆ ಅಥವಾ ಪಡುಬಿದ್ರಿ, ಬೆಳ್ಮಣ್, ಶಿರ್ವ ವಾರ್ಗವಾಗಿ ಮಣಿಪಾಲಕ್ಕೆ ತೆರಳಿ ಅಲ್ಲಿಂದ ಉಡುಪಿಗೆ ತೆರಳಿದವು. ಉಡುಪಿಯಿಂದ ಮಂಗಳೂರಿಗೆ ಹೋಗುವ ವಾಹನಗಳು ಮಣಿಪಾಲದಿಂದ ಮಣಿಪುರ, ಮೂಡುಬೆಳ್ಳೆ, ಶಿರ್ವ ವಾರ್ಗವಾಗಿ ಕಾಪು ತಲುಪಿ ಅಲ್ಲಿಂದ ಮಂಗಳೂರಿನತ್ತ ಹಾಗೂ ಮಣಿಪಾಲದಿಂದ ಶಿರ್ವ, ಬೆಳ್ಮಣ್ ವಾರ್ಗವಾಗಿ ಪಡುಬಿದ್ರಿ ತಲುಪಿ ಅಲ್ಲಿಂದ ಮಂಗಳೂರು ಕಡೆಗೆ ವಾಹನಗಳು ಸುತ್ತು ಬಳಸಿ ಸಂಚರಿಸಿದವು.
ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿ ಅನಿಲ ಸೋರಿಕೆಯಾಗುತ್ತಿರುವ ಮಾಹಿತಿ ಲಭಿಸುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಉಡುಪಿ ಅಗ್ನಿಶಾಮಕ ದಳದ ಸಿಬ್ಬಂದಿ ಟ್ಯಾಂಕರ್‌ಗೆ ನಿರಂತರ ಜಲಫಿರಂಗಿ ಮೂಲಕ ಅಗ್ನಿ ಅವಘಡ ಆಗದಂತೆ ಮುನ್ನೆಚ್ಚರಿಕೆ ಕಾರ್ಯಾಚರಣೆ ನಡೆಸಿದರು.