ವಿಜಯವಾಣಿ ಸುದ್ದಿಜಾಲ ಬೈಂದೂರು
ಪಾಶ್ಚಿಮಾತ್ಯ ರಾಷ್ಟ್ರಗಳ ಯುದ್ಧದ ಬಿಸಿ ಗ್ರಾಮೀಣ ಭಾಗಗಳಲ್ಲಿ ತಟ್ಟಲು ಆರಂಭಿಸಿದೆ. ಕಳೆದೆರಡು ತಿಂಗಳಿಂದ ಹತ್ತಾರು ಹಳ್ಳಿಗಳಿಗೆ ಸಮರ್ಪಕ ಅಡುಗೆ ಅನಿಲ ಪೂರೈಕೆಯಾಗದೆ ಮಲೆನಾಡು ಪ್ರದೇಶದ ಜನರು ಕಂಗಾಲಾಗುವಂತಾಗಿದೆ. ಕೇಂದ್ರ ಸರ್ಕಾರದ ಎಲ್‌ಪಿಜಿ ವಿತರಣಾ ಕೋಡ್ ಸಮಸ್ಯೆ ಹಳ್ಳಿ ಜನರಿಗೆ ಸಿಲಿಂಡರ್ ದೊರೆಯದಂತೆ ಮಾಡಿದೆ.
ಬೈಂದೂರು ಸೇರಿದಂತೆ ಹೆಬ್ರಿ, ಕಾರ್ಕಳ ಹಾಗೂ ಇತರ ಕೆಲವು ಗ್ರಾಮೀಣ ಪ್ರದೇಶಗಳು ಮೂಕಾಂಬಿಕಾ ಅಭಯಾರಣ್ಯ ವ್ಯಾಪ್ತಿಯ ಪ್ರದೇಶಗಳಲ್ಲಿವೆ. ಇಲ್ಲಿ ಇದುವರೆಗೆ ಮೊಬೈಲ್ ಸಂಪರ್ಕ ವ್ಯವಸ್ಥೆ ಕಲ್ಪಿಸಿಲ್ಲ. ಒಂದೆರಡು ಕಡೆ ಟವರ್ ನಿರ್ಮಾಣವಾದರೂ ನೆಟ್‌ವರ್ಕ್ ಮಾತ್ರ ದೊರಕುತ್ತಿಲ್ಲ. ಸಂಸದರು, ಶಾಸಕರು ಹಾಗೂ ಅಧಿಕಾರಿಗಳು ಹತ್ತಾರು ಸಭೆ ನಡೆಸಿ ಅಹವಾಲು ಸ್ವೀಕರಿಸಿದ್ದರೂ ಟವರ್ ಸಮಸ್ಯೆ ಪರಿಹಾರ ಕಂಡಿಲ್ಲ. ಹೀಗಾಗಿ ಇರುವ ಒಂದೆರಡು ಟವರ್‌ಗಳ ಅಡಿಯಲ್ಲೇ ನೆಟ್‌ವರ್ಕ್ ಸಿಗದ ಪರಿಸ್ಥಿತಿ ಇದೆ.
ಒಟಿಪಿ ತೊಂದರೆ
ಕೇಂದ್ರ ಸರ್ಕಾರ ಗಲ್ಫ್ ರಾಷ್ಟ್ರಗಳ ಯುದ್ಧದ ಪರಿಣಾಮ ಅಡುಗೆ ಅನಿಲ ವಿತರಣೆಯಲ್ಲಿ ಕಟ್ಟುನಿಟ್ಟಿನ ಕ್ರಮ ಜಾರಿಗೆ ತಂದಿದೆ. ಹೀಗಾಗಿ ತಿಂಗಳಿಗೆ ಒಂದು ಸಿಲಿಂಡರ್ ಮಾತ್ರ ಪಡೆಯಬಹುದು. ಸಿಲಿಂಡರ್ ಬುಕ್ ಮಾಡಿದ ಬಳಿಕ ವಿತರಣೆ ಮಾಡುವಾಗ ಆ ಗ್ರಾಹಕನ ಮೊಬೈಲ್‌ಗೆ ಒಟಿಪಿ ವಿತರಣಾ ಕೋಡ್‌ಗಳು ಬರುತ್ತವೆ. ಅದನ್ನು ಅಪ್‌ಡೇಟ್ ಮಾಡಿದ ಬಳಿಕ ಸಿಲಿಂಡರ್ ನೀಡಬಹುದು. ಆದರೆ ಗ್ರಾಮೀಣ ಭಾಗದ ನೂರಾರು ಮನೆಗಳಿಗೆ ಗ್ಯಾಸ್ ಬುಕ್ ಮಾಡಿ ಸಿಲಿಂಡರ್ ವಾಹನ ಮನೆಗೆ ಬಂದರೆ ಒಟಿಪಿ ಪಡೆಯಲು ನೆಟ್‌ವರ್ಕ್ ಇಲ್ಲದ ಕಾರಣ ಸಿಲಿಂಡರ್ ವಾಪಸ್ ಹೋಗುವಂಥ ಪರಿಸ್ಥಿತಿ ಇದೆ. ಪ್ರತಿದಿನ ಇಪ್ಪತ್ತಕ್ಕೂ ಹೆಚ್ಚು ಕುಟುಂಬಗಳು ಸಿಲಿಂಡರ್ ಬುಕ್ ಮಾಡಿದರೂ ಕೊಡಲಾಗುತ್ತಿಲ್ಲ.
ಜನರಿಂದ ಆಕ್ರೋಶ
ಸರ್ಕಾರ ಹಾಗೂ ಇಲಾಖೆ ಹೊಸ ಕಾನೂನು ಅಥವಾ ವ್ಯವಸ್ಥೆ ತರಬೇಕಾದರೆ ವಾಸ್ತವ ಅರಿತುಕೊಳ್ಳಬೇಕಾಗುತ್ತದೆ. ಪಟ್ಟಣ ಪ್ರದೇಶಗಳಾದರೆ ನೆಟ್‌ವರ್ಕ್ ಸಮಸ್ಯೆಗಳಿಲ್ಲ. ಆದರೆ ಹಳ್ಳಿಗಳಲ್ಲಿ ನೆಟ್‌ವರ್ಕ್ ಇಲ್ಲದೆ ಒಟಿಪಿ ಪಡೆಯುವುದಾದರೂ ಹೇಗೆ? ಇದರಿಂದಾಗಿ ಹಳ್ಳಿ ಜನರನ್ನು ಸಿಲಿಂಡರ್‌ನಿಂದ ವಂಚಿಸುವಂತಾಗಿದೆ. ಹೀಗಾಗಿ ಮೊದಲು ನೆಟ್‌ವರ್ಕ್ ನೀಡಿ ಆಮೇಲೆ ಒಟಿಪಿ ಕಳುಹಿಸಿ ಎನ್ನುವುದು ಗ್ರಾಮೀಣ ಭಾಗದ ಜನರು ಆಗ್ರಹಿಸಿದ್ದಾರೆ.
20 ಕಿ.ಮೀ ಹೋಗಬೇಕಿದೆ!:
ನೆಟ್‌ವರ್ಕ್ ಸಮಸ್ಯೆ ಒಂದೆಡೆಯಾದರೆ ಕೆಲವು ಹಳ್ಳಿಗಳಲ್ಲಿ ಒಂದೆರಡು ಕಡೆ ಅಪರೂಪಕ್ಕೊಮ್ಮೆ ಗುಡ್ಡದ ಮೇಲೋ, ಕಟ್ಟಡದ ಮೇಲೋ ನಿಂತುಕೊಂಡರೆ ನೆಟ್‌ವರ್ಕ್ ದೊರೆಯುತ್ತದೆ. ಬುಕ್ ಮಾಡಿದವರು ನಮ್ಮದು ಒಟಿಪಿ ಬಂದಿದೆ, ಸಿಲಿಂಡರ್ ನೀಡಿ ಎಂದು ಏಜೆಂಟ್‌ರನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. ಹೀಗಾಗಿ ಹಳ್ಳಿ ಪ್ರದೇದಲ್ಲಿ ಒಂದು ಸಿಲಿಂಡರ್ ನೀಡಲು 20 ಕಿ.ಮೀ. ವಾಹನ ಸಾಗಬೇಕಿದೆ. ಇದರ ಜತೆಗೆ ಇಲಾಖೆ ನಿಯಮ ಕಠಿಣಗೊಳಿಸಿದ ಕಾರಣ ಸಂಜೆ ಏಳು ಗಂಟೆಯಾದರೂ ಆನ್‌ಲೈನ್ ಕೆಲಸ ಮುಗಿಯುವುದಿಲ್ಲ. ಹೀಗಾಗಿ ಗ್ಯಾಸ್ ವಿತರಣೆಯ ಹುಡುಗರು ಕೂಡ ಕೆಲಸಕ್ಕೆ ಗುಡ್‌ಬೈ ಹೇಳುವಂತಹ ಪರಿಸ್ಥಿತಿ ಬಂದಿದೆ.
ಜಿಲ್ಲಾಧಿಕಾರಿಗಳ ಸಭೆಯಲ್ಲಿ ನಿರ್ಣಯ
ಈ ಸಮಸ್ಯೆ ಕುರಿತು ಉಡುಪಿ ಜಿಲ್ಲಾಧಿಕಾರಿಗಳ ದಿಶಾ ಸಭೆಯಲ್ಲಿ ಸಂಸದರ ಮೂಲಕ ಚರ್ಚೆಯಾಗಿದೆ ಮತ್ತು ಹಳ್ಳಿ ಭಾಗದ ಜನರ ಸಮಸ್ಯೆ ಸರಿಪಡಿಸಲು ನಿರ್ಣಯ ಕೈಗೊಂಡು ಜಡ್ಕಲ್, ಕೊಲ್ಲೂರು, ಗೋಳಿಹೊಳೆ, ತೂದಳ್ಳಿ, ಹೊಸೂರು, ಯಡ್ತರೆ, ಗಂಗನಾಡು, ನಾಗೂರು, ಯರುಕೋಣೆ, ಕಂಬದಕೋಣೆ ಜನರ ಸಮಸ್ಯೆ ಕುರಿತು ಭಾರತ್ ಪೆಟ್ರೋಲಿಯಂ ಕಾರ್ಪೋರೇಶನ್‌ಗೆ ಪತ್ರ ಬರೆಯಲಾಗಿದೆ. ಈ ವಿಷಯ ದೆಹಲಿ ಮುಖ್ಯ ಕಚೇರಿಗೆ ತಲುಪಿದ್ದು ಗ್ಯಾಸ್ ವಿತರಣೆಯಲ್ಲಿ ದುರುಪಯೋಗ ಆಗುವ ಸಾಧ್ಯತೆ ಇರುವ ಕಾರಣ ಒಟಿಪಿ ವ್ಯವಸ್ಥೆ ಬದಲಿಸಲು ಸಾಧ್ಯವಿಲ್ಲ ಎನ್ನುವ ಉತ್ತರ ಬಂದಿದೆ. ಹೀಗಾಗಿ ಹಳ್ಳಿ ಜನರಿಗೆ ಸಿಲಿಂಡರ್ ಪಡೆಯುವುದೆ ಹರಸಾಹಸವಾಗಿದೆ. ಈ ಸಮಸ್ಯೆ ಕುರಿತು ಕೇಂದ್ರಮಟ್ಟದಲ್ಲಿ ಸರ್ಕಾರದ ಗಮನ ಸೆಳೆಯಬೇಕಿದೆ ಮತ್ತು ಗ್ರಾಮೀಣ ಭಾಗದ ದಿನನಿತ್ಯದ ಗ್ಯಾಸ್ ಬಳಕೆ ವ್ಯವಸ್ಥೆಗೆ ಪರಿಹಾರ ಕಲ್ಪಿಸಬೇಕಾಗಿದೆ.
ಮಳೆಗಾಲ ಆರಂಭವಾಗಿದ್ದು, ಕೃಷಿ ಕೈಂಕರ್ಯದಲ್ಲಿ ನಿರತರಾಗಬೇಕಾಗುತ್ತದೆ. ಇದರ ನಡುವೆ ಒಟಿಪಿಗಾಗಿ ದಿನಗಟ್ಟಲೆ ಕಾಯಲು ಸಾಧ್ಯವಿಲ್ಲ. ಹೀಗಾಗಿ ಇಲಾಖೆ ಗ್ರಾಮೀಣ ಭಾಗದ ಜನರ ಸಮಸ್ಯೆ ಅರ್ಥ ಮಾಡಿಕೊಳ್ಳಬೇಕು. ಶೀಘ್ರ ಬದಲಿ ವ್ಯವಸ್ಥೆ ಮಾಡಿ ರೈತರು, ಕೃಷಿ ಕುಟುಂಬಗಳಿಗೆ ಸಮರ್ಪಕವಾಗಿ ಅಡುಗೆ ಅನಿಲ ಪೂರೈಸಬೇಕು.
— ನಾಗಪ್ಪ ಮರಾಠಿ ಹೊಸೂರು