ಉಪ್ಪಿನಂಗಡಿಯಲ್ಲಿ ಪೂಜಿಸಲಾದ ಗಣಪತಿ.
ಉಪ್ಪಿನಂಗಡಿ: ಇಲ್ಲಿನ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಸೇವಾ ಟ್ರಸ್ಟ್ ವತಿಯಿಂದ ಸುವರ್ಣ ಮಹೋತ್ಸವದ ಅಂಗವಾಗಿ ಐದು ದಿನಗಳ ಕಾಲ ಪೂಜಿಸಲಾದ ಗಣೇಶ ವಿಗ್ರಹದ ವಿಸರ್ಜನಾ ಶೋಭಾಯಾತ್ರೆ ಶುಕ್ರವಾರ ರಾತ್ರಿ ವಿಜೃಂಭಣೆಯಿಂದ ನಡೆಯಿತು.
ಮಹಾಪೂಜೆಯ ಬಳಿಕ ಶ್ರೀ ಲಕ್ಷ್ಮೀವೆಂಕಟರಮಣ ಕಲ್ಯಾಣ ಮಂಟಪದ ಎದುರಿನಲ್ಲಿ ಶೋಭಾಯಾತ್ರೆಗೆ ಚಾಲನೆ ನೀಡಲಾಯಿತು. ದಿಗ್ವಿಜಯ ಮತ್ತು ಭಜನಾ ಶೋಭಾಯಾತ್ರೆಗೆ ಉದ್ಯಮಿ ಮೋಹನ್ ಕುಮಾರ್, ಹಿಂದೂ ಪರ ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ ಚಾಲನೆ ನೀಡಿದರು.
ವಿದ್ಯುತ್ ದೀಪಗಳಿಂದ ಅಲಂಕಾರಗೊಂಡಿದ್ದ ರಥಬೀದಿಯಲ್ಲಿ ಸಾಗಿದ ಶೋಭಾಯಾತ್ರೆಯು ಪೇಟೆಯೊಳಗಿನಿಂದ ಬ್ಯಾಂಕ್ ರಸ್ತೆಯಾಗಿ ಗಾಂಧಿ ಪಾರ್ಕ್ ಮೂಲಕ ಆದಿತ್ಯ ಹೋಟೆಲ್ ತನಕ ಸಾಗಿ ಅಲ್ಲಿಂದ ಮತ್ತೆ ಗಾಂಧಿಪಾರ್ಕ್ ಮೂಲಕ ಪೇಟೆ ಪ್ರವೇಶಿಸಿ ಶ್ರೀ ಸಹಸ್ರಲಿಂಗೇಶ್ವರ-ಮಹಾಕಾಳಿ ದೇವಾಲಯದ ವಠಾರಕ್ಕೆ ಆಗಮಿಸಿತು. ಅಲ್ಲಿ ಗಣಪತಿ ವಿಗ್ರಹಕ್ಕೆ ಪೂಜೆ ಸಲ್ಲಿಸಿ ನೇತ್ರಾವತಿ- ಕುಮಾರಧಾರಾ ನದಿಗಳ ಸಂಗಮ ಸ್ಥಳದಲ್ಲಿ ವಿಸರ್ಜಿಸಲಾಯಿತು. ಭಜೋರೆ ಮಾರುತಿ ಕುಣಿತ ಭಜನಾ ತರಬೇತುದಾರರ ತಂಡ ಹಾಗೂ ವಿವಿಧ ಕುಣಿತ ಭಜನಾ ತಂಡದವರು ಶೋಭಾಯಾತ್ರೆಯುದ್ದಕ್ಕೂ ಲಯಬದ್ಧವಾಗಿ ಹೆಜ್ಜೆ ಹಾಕಿದರು. ಶ್ರೀ ಆಂಜನೇಯ ಹವ್ಯಾಸಿ ವ್ಯಾಯಾಮ ಸಂಘದಿಂದ ವಿವಿಧ ಕಸರತ್ತು ನಡೆಯಿತು.
ಕಾರ್ಯಕ್ರಮದಲ್ಲಿ ಗಣೇಶೋತ್ಸವ ಸಮಿತಿ ಸೇವಾ ಟ್ರಸ್ಟ್ ಅಧ್ಯಕ್ಷ ಕೆ.ಸುಧಾಕರ ಶೆಟ್ಟಿ ಗಾಂಧಿಪಾರ್ಕ್, ಕಾರ್ಯದರ್ಶಿ ಜಯಪ್ರಕಾಶ್ ಶೆಟ್ಟಿ ಶ್ರೀನಿಧಿ, ಕೋಶಾಧಿಕಾರಿ ಚಂದ್ರಹಾಸ ಹೆಗ್ಡೆ, ಉಪಾಧ್ಯಕ್ಷ ಯು.ಯತೀಶ್ ಶೆಟ್ಟಿ, ಜತೆ ಕಾರ್ಯದರ್ಶಿಗಳಾದ ಶರತ್ ಕೋಟೆ, ಕೀರ್ತನ್ ಕುಮಾರ್ ಶೆಟ್ಟಿ, ಮಹಿಳಾ ವಿಭಾಗದ ಅಧ್ಯಕ್ಷೆ ಅನುರಾಧಾ ಆರ್.ಶೆಟ್ಟಿ, ಪ್ರಮುಖರಾದ ಸಂತೋಷ್ ಕುಮಾರ್, ಉದ್ಯಮಿ ಶಶಿಧರ ನಟ್ಟಿಬೈಲ್, ಕೆ.ರಾಧಾಕೃಷ್ಣ ನಾಕ್, ಸುರೇಶ್ ಅತ್ರೆಮಜಲು, ಯು.ಜಿ.ರಾಧಾ, ಸುನೀಲ್ ಕುಮಾರ್ ದಡ್ಡು ಮೊದಲಾದವರು ಇದ್ದರು.