ಉಡುಪಿಯ ಎಂಜಿಎಂ ಕಾಲೇಜ್​ನಲ್ಲಿ ಆಯೋಜಿಸಿದ್ದ ಗಾಂಧಿ&ಶಾಸ್ತ್ರೀ ಜಯಂತಿಯಲ್ಲಿ ಒ.ಆರ್​. ಪ್ರಕಾಶ್​ ಉಪನ್ಯಾಸ ನೀಡಿದರು. ಡಾ. ಗಾಯತ್ರಿ ಜಿ. ಪೈ, ಡಾ. ವಿಶ್ವನಾಥ್​ ಪೈ ಎಂ., ಡಾ. ದೇವಿದಾಸ್​ ಎಸ್​. ನಾಯ್ಕ, ಮಾಲತಿದೇವಿ, ವಿನೀತ್​ ರಾವ್​ ಇದ್ದರು. 
ಉಡುಪಿ

ಗಾಂಧೀಜಿಯ ತತ್ತ್ವ, ಆದರ್ಶ ಸಾರ್ವಕಾಲಿಕ

* ರೀಡರ್​ ಒ.ಆರ್​. ಪ್ರಕಾಶ್​ ಅಭಿಪ್ರಾಯ

* ಉಡುಪಿ ಎಂಜಿಎಂ ಕಾಲೇಜ್​ನಲ್ಲಿ ಉಪನ್ಯಾಸ

ಉಡುಪಿ: ದಕ್ಷಿಣ ಆಫ್ರಿಕಾದಲ್ಲಿ ವಕೀಲಿಕೆ ಕಲಿಯುವಾಗಲೇ ಯುವ ಗಾಂಧಿ ಪ್ರಭುದ್ಧರಾಗಿದ್ದರು. ಅವರ ಕೆಲಸ, ನಡೆ-ನುಡಿಗಳು ಇಂದಿನ ಯುವಕರಿಗೆ ಮಾದರಿಯಾಗಿದೆ. ವಕೀಲಿಕೆ, ಸಮಾಜ, ಸಂಘಟನೆ, ಪತ್ರಿಕೆ-ಪತ್ರಿಕೋದ್ಯಮ, ಚಳವಳಿ ಹಾಗೂ ಮಾನವೀಯತೆ ಹೇಗಿರಬೇಕೆನ್ನುವುದನ್ನು ತೋರಿಸಿದರು. ಸತ್ಯಾಗ್ರಹದ ಹೊಸ ವಿಧಾನ ಹುಟ್ಟುಹಾಕಿದರು. ಗಾಂಧೀಜಿಯ ತತ್ತ್ವ, ಆದರ್ಶಗಳು ಸಾರ್ವಕಾಲಿಕ ಎಂದು ಮಂಗಳೂರಿನ ಸರ್ಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ರೀಡರ್​ ಒ.ಆರ್​. ಪ್ರಕಾಶ್​ ಅಭಿಪ್ರಾಯಪಟ್ಟರು.

ಉಡುಪಿಯ ಎಂಜಿಎಂ ಕಾಲೇಜ್​ನಲ್ಲಿ ಗಾಂಧಿ ಅಧ್ಯಯನ ಕೇಂದ್ರದ ವತಿಯಿಂದ ಆಯೋಜಿಸಿದ್ದ ಗಾಂಧಿ ಹಾಗೂ ಶಾಸ್ತ್ರೀ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

ಉಪಪ್ರಾಂಶುಪಾಲ ಡಾ. ವಿಶ್ವನಾಥ್​ ಪೈ ಎಂ. ಮಾತನಾಡಿ, ಲಾಲ್​ ಬಹಾದೂರ್​ ಶಾಸ್ತ್ರಿ ಅವರ ಜೀವನ, ಆದರ್ಶ ಹಾಗೂ ಪ್ರಾಮಾಣಿಕತನ ಇಂದಿನ ರಾಜಕೀಯವೂ ಸೇರಿದಂತೆ ಎಲ್ಲ ಕ್ಷೇತ್ರಗಳಿಗೂ ಬೆಳಕಾಗಿದೆ ಎಂದರು.

ಎಂಜಿಎಂ ಸಂಧ್ಯಾ ಕಾಲೇಜ್​ನ ಪ್ರಾಂಶುಪಾಲ ಡಾ. ದೇವಿದಾಸ್​ ಎಸ್​. ನಾಯ್ಕ, ಪ.ಪೂ. ಕಾಲೇಜ್​ನ ಪ್ರಾಂಶುಪಾಲೆ ಮಾಲತಿದೇವಿ ಮಾತನಾಡಿದರು. ಕಾಲೇಜ್​ನ ಪ್ರಾಂಶುಪಾಲೆ ಡಾ. ಗಾಯತ್ರಿ ಜಿ. ಪೈ ಅಧ್ಯಕ್ಷತೆ ವಹಿಸಿದ್ದರು.

ಗಾಂಧಿ ಅಧ್ಯಯನ ಕೇಂದ್ರದ ಸಂಯೋಜಕ ವಿನೀತ್​ ರಾವ್​ ಸ್ವಾಗತಿಸಿ, ವಂದಿಸಿದರು. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಸುಚಿತ್​ ಕೋಟ್ಯಾನ್​ ಕಾರ್ಯಕ್ರಮ ನಿರೂಪಿಸಿದರು.

ಸಂಸತ ವಿಭಾಗದ ಮುಖ್ಯಸ್ಥೆ ಡಾ. ವಸುಮತಿ ಭಟ್​ ನೇತೃತ್ವದಲ್ಲಿ ವಿದ್ಯಾರ್ಥಿಗಳು ಗಾಂಧೀಜಿಗೆ ಪ್ರಿಯವಾಗಿದ್ದ ಭಜನೆಗಳನ್ನು ಹಾಡಿದರು.

ಗಾಂಧೀಜಿ 23ನೇ ವಯಸ್ಸಿನಲ್ಲಿ ಯುವ ವಕೀಲರಾಗಿ ದಕ್ಷಿಣ ಆಫ್ರಿಕಾದಲ್ಲಿನ ಕಕ್ಷಿದಾರರಿಗೆ ಯಾವುದೇ ಹೊರೆಯಾಗದಂತೆ ರಾಜೀ ಸಂಧಾನದ ಮೂಲಕ ಅನೇಕ ಪ್ರಕರಣ ಬಗೆಹರಿಸಿದರು. 'ಇಂಡಿಯನ್​ ಒಪೀನಿಯನ್​' ಪತ್ರಿಕೆ ಆರಂಭಿಸಿ ಅದರಲ್ಲಿ ನಾಲ್ಕು ಭಾಷೆಗಳನ್ನು ಉಪಯೋಗಿಸಿದರು. ಜನರಿಗೆ, ಸಾರ್ವಜನಿಕ ಆಸ್ತಿಗಳಿಗೆ ಯಾವುದೇ ಹಾನಿಯಾಗದಂತೆ ಅವರು ನಡೆಸುತ್ತಿದ್ದ ಚಳವಳಿಯ ರೀತಿಯನ್ನು ಇಂದಿನ ಯುವಜನತೆ ಅರಿತುಕೊಳ್ಳಬೇಕು.
ಒ.ಆರ್​. ಪ್ರಕಾಶ್​. ಮಂಗಳೂರಿನ ಸರ್ಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ರೀಡರ್​.