ಮೂಲ್ಕಿ ತಾಲೂಕಿನ ಅತಿಕಾರಿಬೆಟ್ಟು ಗ್ರಾಮ ಪಂಚಾಯಿತಿ 
ಉಡುಪಿ

ಅತಿಕಾರಿಬೆಟ್ಟು ಗ್ರಾಪಂಗೆ ಗಾಂಧಿ ಪುರಸ್ಕಾರದ ಗರಿ

ವಿಜಯವಾಣಿ ಸುದ್ದಿಜಾಲ ಮೂಲ್ಕಿ
ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ತಾಲೂಕಿನ ಅತಿಕಾರಿಬೆಟ್ಟು ಗ್ರಾಮ ಪಂಚಾಯಿತಿ 2024-25ನೇ ಸಾಲಿನ ಪ್ರತಿಷ್ಠಿತ ‘ಗಾಂಧಿ ಪುರಸ್ಕಾರ’ಕ್ಕೆ ಭಾಜನವಾಗಿದೆ. ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಹಾಗೂ ಮೈಸೂರು ವಿಭಾಗ ಮಟ್ಟದಲ್ಲಿ ತೃತೀಯ ಸ್ಥಾನ ಗಳಿಸುವ ಮೂಲಕ, ಈ ಗೌರವಕ್ಕೆ ಪಾತ್ರವಾದ ಜಿಲ್ಲೆಯ ಏಕೈಕ ಪಂಚಾಯಿತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಸಾಧನೆಗಾಗಿ ಪಂಚಾಯಿತಿಗೆ 10 ಲಕ್ಷ ರೂ. ಪ್ರೋತ್ಸಾಹಧನ ಲಭಿಸಲಿದೆ.
ಅತಿಕಾರಿಬೆಟ್ಟು ಗ್ರಾಮ ಪಂಚಾಯಿತಿ 2024-25ನೇ ಸಾಲಿನ ಪ್ರಸ್ತುತ ತೆರಿಗೆ ಬೇಡಿಕೆಯ ಶೇ.100ರಷ್ಟು ತೆರಿಗೆ ವಸೂಲಾತಿ, ಜಲಜೀವನ್ ಮಿಷನ್ ಯೋಜನೆಯ ಸಮರ್ಪಕ ಅನುಷ್ಠಾನ, ಗ್ರಾಮದ ಸ್ವಚ್ಛತೆಗೆ ಸಂಬಂಧಪಟ್ಟಂತೆ ಸ್ವಚ್ಛವಾಹಿನಿ ಖರೀದಿ, ಸುಸಜ್ಜಿತ ಸ್ವಚ್ಛ ಸಂಕೀರ್ಣ ಘಟಕ ನಿರ್ಮಾಣ, ಗ್ರಾಪಂ ಮಟ್ಟದ ಒಕ್ಕೂಟದೊಂದಿಗೆ ಒಡಂಬಡಿಕೆ ಮೂಲಕ ಘನತ್ಯಾಜ್ಯ ನಿರ್ವಹಣೆ, ನರೇಗಾ ಯೋಜನೆಯಡಿ ಕೂಲಿ ಕಾರ್ಮಿಕರಿಗೆ ಉದ್ಯೋಗ ಚೀಟಿ ವಿತರಣೆ, ಕೂಸಿನ ಮನೆ ನಿರ್ವಹಣೆ, ವೈಯಕ್ತಿಕ, ಸಾರ್ವಜನಿಕ ಕಾಮಗಾರಿಗಳ ಯಶಸ್ಸಿನ ಅನುಷ್ಠಾನ, ಮಾಸಿಕ ರೋಜ್‌ಗಾರ್ ದಿನಾಚರಣೆ, ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮ ಸಭೆಗಳ ಆಯೋಜನೆ, ಗ್ರಾಮದಲ್ಲಿ, ಬೀದಿದೀಪಗಳ ವ್ಯವಸ್ಥೆ, ಮಕ್ಕಳಲ್ಲಿ ಓದುವ ಹವ್ಯಾಸ ಹೆಚ್ಚಿಸಲು ಸುಸಜ್ಜಿತ ಅರಿವು ಕೇಂದ್ರ, ಸಾರ್ವಜನಿಕ ಸ್ಮಶಾನ ಅಭಿವೃದ್ಧಿ, ನರೇಗಾ ಯೋಜನೆಯಡಿ ಮತ್ತು ಇತರೆ ಇಲಾಖೆ ಅನುದಾನದಡಿ ಸುಸಜ್ಜಿತ ಅಂಗನವಾಡಿ ಕಟ್ಟಡಗಳ ರಚನೆ, ಆರೋಗ್ಯ ಉಪಕೇಂದ್ರ, ಕ್ಷೇಮಕೇಂದ್ರದ ಮೂಲಕ ಎಲ್ಲಾ ಮಕ್ಕಳಿಗೆ ರೋಗ ನಿರೋಧಕ ಲಸಿಕೆ, ಗ್ರಾಮದ ಜನರಿಗೆ ಆರೋಗ್ಯ ತಪಾಸಣಾ ಶಿಬಿರಗಳ ಆಯೋಜನೆ, ಗ್ರಾಮದ ಎಲ್ಲ ವಿಶೇಷಚೇತನರಿಗೆ ಸರ್ಕಾರದ ಸೌಲಭ್ಯ ಒದಗಿಸಲು ವಿಶೇಷ ಒತ್ತು ನೀಡಿದೆ.

ವಿವಿಧ ಕಾರ್ಯಕ್ರಮಗಳ ಪರಿಗಣನೆ

ಬಾಪೂಜಿ ಸೇವಾ ಕೇಂದ್ರದ ಮೂಲಕ ಗ್ರಾಮಸ್ಥರಿಗೆ ಜನನ ಮರಣ ಪ್ರಮಾಣ ಪತ್ರ 9/11ಎ, ಕಟ್ಟಡ ಲೈಸೆನ್ಸ್, ವ್ಯಾಪಾರ ಪರವಾನಿಗೆ, ನೀರಿನ ಸಂಪರ್ಕ ಮತ್ತು ಇತರೆ ಸೇವೆಗಳನ್ನು ಒದಗಿಸುವುದು. ನಗದು ರಹಿತ ಪಾವತಿಗಳನ್ನು ಉತ್ತೇಜಿಸಲು ಗ್ರಾಮ ಪಂಚಾಯಿತಿಯಲ್ಲಿ ಯುಪಿಐ ಮೂಲಕ ತೆರಿಗೆ ವಸೂಲಾತಿಗೆ ಆದ್ಯತೆ, ಮಹಿಳೆ ಮತ್ತು ಮಕ್ಕಳ ರಕ್ಷಣೆಗಾಗಿ ಮಹಿಳಾ ಮತ್ತು ಮಕ್ಕಳ ಕಾವಲು ಸಮಿತಿ, ಜಾಗೃತಿ ಶಿಬಿರಗಳ ಮೂಲಕ ಬಾಲ್ಯ ವಿವಾಹ, ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಕ್ರಮ, ಗ್ರಾಪಂನಲ್ಲಿ ಗ್ರಾಮಸ್ಥರ ಸಹಭಾಗಿತ್ವ ಖಚಿತ ಪಡಿಸಲು ಗ್ರಾಮಸಭೆ, ಮಹಿಳಾ ಗ್ರಾಮಸಭೆ, ಪ.ಜಾತಿ/ಪ.ಪಂಗಡ ಕುಂದುಕೊರತೆ ಸಭೆ, ವಿಶೇಷ ಚೇತನ ಸಮನ್ವಯ ಗ್ರಾಮ ಸಭೆ, ಕೆಡಿಪಿ ಸಭೆ, ಸಾಮಾನ್ಯ ಸಭೆ ಇತರೆ ಸಮಿತಿ ಸಭೆಗಳ ಆಯೋಜನೆ, ಜಿಪಿಎಲ್‌ಎಫ್ ಒಕ್ಕೂಟದಲ್ಲಿ ಒಟ್ಟು 32 ಸಂಘಗಳಿಗೆ ಕೌಶಲ ತರಬೇತಿಗಳ ಆಯೋಜನೆ, ಮಾಸಿಕ ಸಂತೆಗಳ ಆಯೋಜನೆ, ಒಕ್ಕೂಟದ ಸದಸ್ಯರು, ಅಕ್ಕ ಸಂಜೀವಿನಿ ಅಂಗಡಿ ಮತ್ತು ಸ್ವ ಉದ್ಯೋಗದ ಮೂಲಕ ಜೀವನೋಪಾಯ ಮುಂತಾದ ಅಂಶಗಳನ್ನು ಪರಿಗಣಿಸಿ ಸದರಿ ಪುರಸ್ಕಾರ ನೀಡಲಾಗಿದೆ.