ಗ್ಯಾಬಿಯನ್ ವಾಲ್ ನಿರ್ಮಿಸಲಾಗುತ್ತಿರುವ ಅನತಿ ದೂರದಲ್ಲಿರುವ ಗುಡ್ಡದ ಮೇಲ್ಭಾಗ, ಗುಂಡಿ ಪ್ರದೇಶ
ಚತುಷ್ಪಥ ಕಾಮಗಾರಿ ನಡೆಯುತ್ತಿರುವ ಮಂಗಳೂರು-ಸೋಲಾಪುರ ರಾಷ್ಟ್ರೀಯ ಹೆದ್ದಾರಿ 169ರ ಕೆತ್ತಿಕಲ್ ಗುಡ್ಡ ಪ್ರದೇಶದಲ್ಲಿ ಪದೇ ಪದೆ ಸಂಭವಿಸುವ ಗುಡ್ಡ ಕುಸಿತಕ್ಕೆ ತಡೆ ನೀಡಲು ಅತ್ಯಾಧುನಿಕ ತಂತ್ರಜ್ಞಾನದ ‘ಗ್ಯಾಬಿಯನ್ ವಾಲ್’ ನಿರ್ಮಿಸಲಾಗುತ್ತಿದೆ. ಈಗಾಗಲೇ ಶೇ. 90ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಮುಂಬರುವ ಮಳೆಗಾಲದ ಸವಾಲನ್ನು ಎದುರಿಸಲು ಸಜ್ಜಾಗಿದೆ.
ಕಳೆದ ಎರಡು ಮಳೆಗಾಲದಲ್ಲಿ ಸತತವಾಗಿ ಗುಡ್ಡ ಕುಸಿದು ಹೆದ್ದಾರಿ ಸಂಚಾರಕ್ಕೆ ಅಡ್ಡಿಯಾಗಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರದ ಗಣಿ ಸಚಿವಾಲಯದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ರಾಕ್ ಮ್ಯಾನೇಜ್‌ಮೆಂಟ್ (ಎನ್‌ಐಆರ್‌ಎಂ) ಶಿಫಾರಸಿನ ಮೇರೆಗೆ ಸುರಕ್ಷತಾ ಕ್ರಮವಾಗಿ ಈ ಗೋಡೆ ನಿರ್ಮಿಸಲಾಗುತ್ತಿದೆ.
ವೆಟ್-ವೆಲ್‌ಗೆ ಅಪಾಯ
ಕೆತ್ತಿಕಲ್ ಗುಡ್ಡ ಪ್ರದೇಶದಲ್ಲಿ ಮಣ್ಣು ಮಾರಾಟದಿಂದ ಮಳೆಗಾಲದಲ್ಲಿ ಭಾರಿ ಪ್ರಮಾಣದಲ್ಲಿ ಗುಡ್ಡ ಕುಸಿತ ಉಂಟಾಗಿತ್ತು. ಪರಿಣಾಮ ಗುಡ್ಡದ ಮೇಲ್ಭಾಗದ 11 ಕುಟುಂಬಗಳು ಸ್ಥಳಾಂತರಗೊಂಡಿವೆ. ಆದರೆ ಈ ಕುಟುಂಬಗಳಿಗೆ ಇನ್ನೂ ಪರಿಹಾರ ಲಭ್ಯವಾಗಿಲ್ಲ. ಗುಡ್ಡದ ಮೇಲ್ಭಾಗದಲ್ಲಿರುವ ಮಂಗಳೂರು ಮಹಾನಗರ ಪಾಲಿಕೆಯ ಕೋಟ್ಯಂತರ ರೂ. ವೆಚ್ಚದ ವೆಟ್-ವೆಲ್ ರಕ್ಷಣೆಗೆ ಈ ಗೋಡೆ ಎಷ್ಟರ ಮಟ್ಟಿಗೆ ಸಹಕಾರಿ ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ.
ಹೆದ್ದಾರಿಗೂ ಅಪಾಯ ತಪ್ಪಿದಲ್ಲ
ಗ್ಯಾಬಿಯನ್ ವಾಲ್ ನಿರ್ಮಿಸಲಾಗುತ್ತಿರುವ ಪ್ರದೇಶದಿಂದ 50 ಮೀಟರ್ ಅಂತರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಗುಡ್ಡ ಕುಸಿದು ಭಾರಿ ಗುಂಡಿ ಸೃಷ್ಟಿಯಾಗಿದೆ. ಇಲ್ಲಿ ಮಣ್ಣು ತುಂಬಿಸುವ ಕೆಲಸ ಇನ್ನಷ್ಟೇ ಆಗಬೇಕಿದೆ. ಒಂದೊಮ್ಮೆ ಮಳೆಗಾಲಕ್ಕೆ ಮುಂಚೆ ಈ ಕೆಲಸ ಪೂರ್ಣಗೊಳ್ಳದೆ ಹೋದಲ್ಲಿ ಮೇಲ್ಭಾಗದ ಮನೆಗಳ(ಖಾಲಿ ಮಾಡಲಾದ ಮನೆಗಳಿವೆ) ಸಹಿತ ಹೆದ್ದಾರಿಯತ್ತ ಗುಡ್ಡ ಕುಸಿತಗೊಂಡರೆ ಅಚ್ಚರಿಪಡಬೇಕಿಲ್ಲ. ಆಗ ವಾಲ್ ನಷ್ಟದೊಂದಿಗೆ ಹೆದ್ದಾರಿಗೂ ಅಪಾಯ ತಪ್ಪಿದಲ್ಲ.
ಫ್ಲೈಓವರ್ ಹೆಚ್ಚು ಸೂಕ್ತ
ಗುಡ್ಡ ಕೊರೆದು ಅಪಾಯ ತಂದುಕೊಳ್ಳುವ ಬದಲು ವಾಮಂಜೂರು ಚೆಕ್‌ಪೋಸ್ಟ್‌ನಿಂದ ಪರಾರಿಯವರೆಗೆ ಫ್ಲೈಓವರ್ ನಿರ್ಮಿಸಿದ್ದರೆ ಸರ್ಕಾರಕ್ಕೆ ಹಣ ಉಳಿತಾಯವಾಗುತ್ತಿತ್ತು ಎಂಬುದು ಸಾರ್ವಜನಿಕರ ಅಭಿಪ್ರಾಯ.
ವಿಶೇಷತೆ ಏನು?
ಕೆತ್ತಿಕಲ್ ಗುಡ್ಡ ಪ್ರದೇಶದಲ್ಲಿ ಸುಮಾರು 120 ರಿಂದ 140 ಮೀಟರ್ ಉದ್ದದ ಈ ಗೋಡೆಯನ್ನು ಕಪ್ಪು ಕಲ್ಲುಗಳು ಮತ್ತು ಕಬ್ಬಿಣದ ಬಲೆ ಬಳಸಿ ನಿರ್ಮಿಸಲಾಗುತ್ತಿದೆ. ಗುಡ್ಡದ ಭೌಗೋಳಿಕ ವಿನ್ಯಾಸಕ್ಕೆ ಅನುಗುಣವಾಗಿ ಇದು 3 ರಿಂದ 7 ಮೀಟರ್ ಎತ್ತರವಿದೆ. ಸಾಮಾನ್ಯವಾಗಿ ರೈಲು ಹಳಿಗಳ ಪಕ್ಕದ ಗುಡ್ಡ ಕುಸಿತ ತಡೆಯಲು ಈ ತಂತ್ರಜ್ಞಾನ ಬಳಸಲಾಗುತ್ತದೆ.
ಮಳೆಗಾಲಕ್ಕಿಂತ ಮುಂಚೆ ಗ್ಯಾಬಿಯನ್ ವಾಲ್ ಕಾಮಗಾರಿ ಪೂರ್ಣಗೊಳ್ಳಲಿದೆ. ಎನ್‌ಐಆರ್‌ಎಂ ತಜ್ಞರ ಸಲಹೆಯಂತೆ ಗುಡ್ಡದ ನೀರು ಹರಿದು ಹೋಗಲು ಮೂರು ಹಂತದ ಚರಂಡಿ ವ್ಯವಸ್ಥೆ ಮತ್ತು ಹೆದ್ದಾರಿ ಅಡಿ ಭಾಗದಲ್ಲಿ ಬೃಹತ್ ಮೋರಿ ಅಳವಡಿಸಲಾಗಿದೆ.
ಇದು ಹೆಚ್ಚುವರಿ ಕಾಮಗಾರಿಯಾಗಿದ್ದು, ಮಳೆಗಾಲಕ್ಕೆ ಮುಂಚೆಯೇ ಪೂರ್ಣಗೊಳ್ಳಲಿದೆ. ಗೋಡೆಯ ಮುಂಭಾಗದ ಗುಂಡಿಗಳಿಗೆ ಮಣ್ಣು ತುಂಬಿಸುವ ಕೆಲಸ ಶೀಘ್ರ ಆರಂಭವಾಗಲಿದ್ದು, ಮಳೆಗಾಲದಲ್ಲಿ ಇದು ಸುರಕ್ಷಿತವಾಗಿರಲಿದೆ.