ಕಾನ್ಪುರದಲ್ಲಿ ತರಬೇತಿ ವಿಮಾನ ಪತನ ದುರ್ಘಟನೆಯಲ್ಲಿ ಮೃತಪಟ್ಟ ಉಡುಪಿ ಜಿಲ್ಲೆಯ ಪೈಲೆಟ್ ಅಭಿಷೇಕ್ ಪೂಜಾರಿ.
* ವಿಮಾನ ದುರ್ಘಟನೆಯಲ್ಲಿ ಮೃತಪಟ್ಟಿದ್ದ ಉಡುಪಿ ಜಿಲ್ಲೆ ಯುವಕ
ಉಡುಪಿ: ಉತ್ತರ ಪ್ರದೇಶದ ಕಾನ್ಪುರದಲ್ಲಿ ಆ.27ರಂದು ಸಂಭವಿಸಿದ್ದ ಖಾಸಗಿ ತರಬೇತಿ ವಿಮಾನ ಪತನದ ದುರ್ಘಟನೆಯಲ್ಲಿ ಮೃತಪಟ್ಟಿದ್ದ ಉಡುಪಿ ಜಿಲ್ಲೆಯ ಪೈಲೆಟ್ ಅಭಿಷೇಕ್ ಪೂಜಾರಿ (27) ಅವರ ಅಂತ್ಯಕ್ರಿಯೆ ಕಾರ್ಕಳ ತಾಲೂಕಿನ ಕಣಜಾರು ಗ್ರಾಮದ ಸೇಮೆಗುರಿ ಎಂಬಲ್ಲಿ ಭಾನುವಾರ (ಆ.30) ಬೆಳಗ್ಗೆ ನಡೆಯಿತು.
ಹಿಂದು ಸಂಪ್ರದಾಯದಂತೆ ತಂದೆ ಪ್ರಭಾಕರ್ ಪೂಜಾರಿ ಎಲ್ಲ ವಿಧಿ-ವಿಧಾನ ನೆರವೇರಿಸಿದರು. ಈ ಸಂದರ್ಭದಲ್ಲಿ ತಾಯಿ ಶಶಿಕಲಾ ಪೂಜಾರಿ, ಸಹೋದರ ಅಭಿನವ್, ಅಭಿಷೇಕ್ ಪೂಜಾರಿಯ ದೊಡ್ಡಪ್ಪನ ಕುಟುಂಬ, ಮಾವ ಜೀವನ್ ಪೂಜಾರಿ, ಸಂಬಂಧಿಕರು, ಸ್ಥಳೀಯರು ಹಾಗೂ ಇಂಜಿನಿಯರಿಂಗ್ ಸ್ನೇಹಿತರು ಪಾಲ್ಗೊಂಡಿದ್ದರು.
ಕೊನೆಗೂ ಸ್ಪಂದಿಸದ ತರಬೇತಿ ಕೇಂದ್ರ
ಕಾನ್ಪುರದಲ್ಲಿರುವ ಗರ್ಗ್ ಏವಿಯೇಷನ್ ಟ್ರೇನಿಂಗ್ ಸೆಂಟರ್ನಲ್ಲಿ ಅಭಿಷೇಕ್ ಪೂಜಾರಿ ಮೂರು ವರ್ಷದ ತರಬೇತಿ ಪಡೆಯುತ್ತಿದ್ದು, ಇದೇ ಸೆ.7ರಂದು ತರಬೇತಿ ಪೂರ್ಣಗೊಂಡು ಆತ ಕಂಡಿದ್ದ ಪೈಲೆಟ್ ಕನಸು ಈಡೇರುತ್ತಿತ್ತು. ಆದರೆ, ತರಬೇತಿ ವಿಮಾನ ಪತನ ದುರ್ಘಟನೆಯಲ್ಲಿ ಮೃತಪಟ್ಟಿದ್ದಾನೆ. ಟ್ರೇನಿಂಗ್ ಸೆಂಟರ್ನವರು ಘಟನೆ ನಡೆದಾಗಲೂ, ಪುತ್ರನ ಮೃತದೇಹ ಕೊಡುವಾಗಲೂ ಸಹ ಸರಿಯಾಗಿ ಸ್ಪಂದಿಸಿಲ್ಲ. ಅಲ್ಲಿನ ಸಹಪಾಠಿ ಪೈಲೆಟ್ಗಳು ಶವವನ್ನು ಪ್ಯಾಕ್ ಮಾಡಿಕೊಟ್ಟಿದ್ದು, ಊರಿಗೆ ತರುವಲ್ಲಿ ಸಹಕರಿಸಿದರು ಎಂದು ತಂದೆ ಪ್ರಭಾಕರ್ ಪೂಜಾರಿ ವಿಜಯವಾಣಿಗೆ ತಿಳಿಸಿದ್ದಾರೆ.
ಕಾನ್ಪುರದಿಂದ ಲಖನೌವರೆಗೆ ರಸ್ತೆ ಮಾರ್ಗದಲ್ಲಿ, ಲಖನೌದಿಂದ ಮುಂಬಯಿ ಹಾಗೂ ಮುಂಬಯಿಯಿಂದ ಮಂಗಳೂರುವರೆಗೆ ವಿಮಾನದಲ್ಲಿ ಅಭಿಷೇಕ್ ಪೂಜಾರಿಯ ಮೃತದೇಹ ತರಲಾಯಿತು. ಮಂಗಳೂರಿನಿಂದ ಆ್ಯಂಬುಲೆನ್ಸ್ ಮೂಲಕ ಕಣಜಾರು ಗ್ರಾಮಕ್ಕೆ ಬಂದಿದ್ದಾಗಿ ಪ್ರಭಾಕರ್ ಪೂಜಾರಿ ಮಾಹಿತಿ ನೀಡಿದರು.
ಗರ್ಗ್ ಏವಿಯೇಷನ್ ಟ್ರೇನಿಂಗ್ ಸೆಂಟರ್ನ ಅಧಿಕಾರಿಗಳಿಗೆ ಸ್ವಲ್ಪವೂ ಮಾನವೀಯತೆ ಇಲ್ಲ. ಘಟನೆಗೆ ಸಂಬಂಧಿಸಿ ಔಪಚಾರಿಕವಾಗಿ ಮಾತನಾಡಲು ಯಾರೊಬ್ಬರೂ ಬಂದಿಲ್ಲ. ವಿಮಾನ ಪತನ ದುರ್ಘಟನೆ ಕುರಿತು ಸಂಬಂಧಿತ ಪ್ರಾಧಿಕಾರ ಸೂಕ್ತ ತನಿಖೆ ನಡೆಸಿ ನಮಗೆ ವರದಿ ನೀಡಬೇಕು. ತರಬೇತಿ ನೀಡುವಾಗ ಮೊಬೈಲ್ ಒಯ್ಯುವಂತಿಲ್ಲ. ಆದರೆ, ವಿಮಾನ ಪತನದ ಜಾಗದಲ್ಲಿ ನನ್ನ ಪುತ್ರನ ಹಾಗೂ ತರಬೇತುದಾರರ ಮೊಬೈಲ್ ಪತ್ತೆಯಾಗಿದೆ. ನಮಗೆ ಸೂಕ್ತ ನ್ಯಾಯ ಬೇಕು.
— ಪ್ರಭಾಕರ್ ಪೂಜಾರಿ. ಮೃತ ಅಭಿಷೇಕ್ನ ತಂದೆ.