ಪರೀಕ್ಷಾ ಕೇಂದ್ರದಿಂದ ಹೊರ ಬರುವ ವಿದ್ಯಾರ್ಥಿಗಳಿಗೆ ಹಣ್ಣು ಹಂಪಲು ವಿತರಿಸುತ್ತಿರುವ ಹಳೆ ವಿದ್ಯಾರ್ಥಿ ಸಂಘದ ಸದಸ್ಯರು.
ಹರಿಪ್ರಸಾದ್ ನಂದಳಿಕೆ ಬೆಳ್ಮಣ್
ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಒತ್ತಡ, ಹಸಿವು ಮತ್ತು ಸುಸ್ತಿನ ನಡುವೆ ಪರೀಕ್ಷಾ ಕೇಂದ್ರದಿಂದ ಹೊರಬರುವ ವಿದ್ಯಾರ್ಥಿಗಳ ಮುಖದಲ್ಲಿ ಮಂದಹಾಸ ಮೂಡಿಸುವ ಕೆಲಸವನ್ನು ಬೆಳ್ಮಣ್ ಸರ್ಕಾರಿ ಪದವಿಪೂರ್ವ ಕಾಲೇಜಿನ ಹಳೇ ವಿದ್ಯಾರ್ಥಿ ಸಂಘ ಮಾಡುತ್ತಿದೆ. ಪರೀಕ್ಷಾರ್ಥಿಗಳಿಗೆ ಪ್ರತಿದಿನ ಹಣ್ಣು ಹಾಗೂ ಬಿಸ್ಕತ್ತು ವಿತರಿಸುವ ಮೂಲಕ ಸಂಘ ತನ್ನ ಸಾಮಾಜಿಕ ಬದ್ಧತೆ ಮೆರೆದಿದೆ.
280 ವಿದ್ಯಾರ್ಥಿಗಳಿಗೆ ಪ್ರಯೋಜನ
ಬೆಳ್ಮಣ್ ಕೇಂದ್ರದಲ್ಲಿ ಕಾಂತಾವರ, ಬೋಳ, ಮುಂಡ್ಕೂರು, ನಂದಳಿಕೆ, ಇನ್ನಾ ಸೇರಿದಂತೆ ಸುತ್ತಮುತ್ತಲಿನ ಆರೇಳು ಗ್ರಾಮಗಳ ವಿವಿಧ ಪ್ರೌಢಶಾಲೆಗಳ 280ಕ್ಕೂ ಅಧಿಕ ವಿದ್ಯಾರ್ಥಿಗಳು ಬೆಳ್ಮಣ್ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯುತ್ತಿದ್ದಾರೆ. ಪರೀಕ್ಷೆ ಮುಗಿಸಿ ಹೊರಬರುವ ಪ್ರತಿಯೊಬ್ಬ ವಿದ್ಯಾರ್ಥಿಗೂ ಸೇಬು, ಪೇರಳೆ, ಕಿತ್ತಳೆ ಸೇರಿದಂತೆ ವಿವಿಧ ಹಣ್ಣುಗಳು ಹಾಗೂ ಬಿಸ್ಕತ್ತು ಪ್ಯಾಕೆಟ್‌ಗಳನ್ನು ವಿತರಿಸಲಾಗುತ್ತಿದೆ.
ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಪರೀಕ್ಷೆಗಾಗಿ ಬೆಳಗ್ಗೆ 7 ಗಂಟೆಗೆ ಮನೆ ಬಿಡುತ್ತಾರೆ. ಹಲವರು ಅವಸರದಲ್ಲಿ ಉಪಾಹಾರ ಸೇವಿಸದೆ ಬರುವ ಸಾಧ್ಯತೆಗಳಿರುತ್ತವೆ. ಪರೀಕ್ಷೆ ಮುಗಿಸಿ ಮರಳಿ ಮನೆ ಸೇರುವಾಗ ಮಧ್ಯಾಹ್ನ 2ರಿಂದ 3 ಗಂಟೆಯಾಗುತ್ತದೆ. ದೂರದ ಊರುಗಳಿಗೆ ಪ್ರಯಾಣಿಸಬೇಕಾದ ವಿದ್ಯಾರ್ಥಿಗಳ ಹಸಿವು ನೀಗಿಸಲು ಮತ್ತು ಅವರಿಗೆ ಮಾನಸಿಕ ಸ್ಥೈರ್ಯ ತುಂಬಲು ಸಂಘ ಈ ಮಾದರಿ ಯೋಜನೆ ಕೈಗೆತ್ತಿಕೊಂಡಿರುವುದು ಸಾರ್ವಜನಿಕೆ ಪ್ರಶಂಸೆಗೆ ಪಾತ್ರವಾಗಿದೆ.
ನಮ್ಮ ಶಾಲೆಯಲ್ಲಿ ಪರೀಕ್ಷೆ ಬರೆಯುತ್ತಿರುವ ಮಕ್ಕಳು ನಮ್ಮವರೇ ಎಂಬ ಭಾವನೆಯಿಂದ ಈ ಕಾರ್ಯ ಮಾಡುತ್ತಿದ್ದೇವೆ. ಪರೀಕ್ಷೆಯ ಆತಂಕ ದೂರವಾಗಿ, ಮಕ್ಕಳು ಖುಷಿಯಿಂದ ಮನೆಗೆ ಮರಳಲಿ ಎನ್ನುವುದೇ ನಮ್ಮ ಆಶಯ.
ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಇಂತಹ ಸಣ್ಣ ಸಹಾಯವೂ ದೊಡ್ಡ ಮಟ್ಟದ ಮಾನಸಿಕ ಸ್ಥೈರ್ಯ ನೀಡುತ್ತದೆ. ಮನೆ ತಲುಪುವವರೆಗೆ ಸುಸ್ತಾಗಬಾರದು ಎಂಬ ಕಾಳಜಿ ನಮ್ಮದು.
ಮಕ್ಕಳು ಪರೀಕ್ಷೆ ಮುಗಿಸಿ ಹೊರಬರುವಾಗ ಅವರ ಮುಖದಲ್ಲಿ ಹಸಿವು ಮತ್ತು ಸುಸ್ತು ಇರುತ್ತದೆ. ಅದನ್ನು ಮನಗಂಡು ಹಳೇ ವಿದ್ಯಾರ್ಥಿಗಳ ಸಹಕಾರದೊಂದಿಗೆ ಈ ಪ್ರಯತ್ನ ಮಾಡಿದ್ದೇವೆ.