* ಉಡುಪಿ ನಗರ ವಾಸಿಗರ ಅಸಮಾಧಾನ
* ಮೆಸ್ಕಾಂ ಕಾರ್ಯ ವೈಖರಿಗೆ ಆಕ್ರೋಶ
ಉಡುಪಿ: ತಿಂಗಳಿಂದ ಬಿಸಿಲ ಝಳ ಹೆಚ್ಚುತ್ತಿದ್ದು ಇದರ ನಡುವೆ ವಿದ್ಯುತ್ ಸಹ ಆಗಾಗ ಕೈಕೊಡುತ್ತಿದ್ದು, ಜನರು ಇನ್ನಷ್ಟು ಸಂಕಷ್ಟ ಅನುಭವಿಸುವಂತಾಗಿದೆ. ವಿದ್ಯುತ್ ವ್ಯತ್ಯಯದ ಸೂಚನೆಯ ಹೊರತಾಗಿಯೂ ಸಹ ಮತ್ತೆ ಯಾವುದೇ ಪೂರ್ವ ಸೂಚನೆಯಿಲ್ಲದೆ ಮೆಸ್ಕಾಂನವರು ಯಾವುದೇ ವೇಳೆಯಲ್ಲಾದರೂ ವಿದ್ಯುತ್ ಸ್ಥಗಿತ ಮಾಡುತ್ತಿದ್ದು, ಜನರಿಗೆ ಸಮಸ್ಯೆಯಾಗತೊಡಗಿದೆ.
ಮಂಗಳವಾರ ನಿರ್ವಹಣಾ ಕಾರ್ಯದ ನಿಮಿತ್ತ ಬೆಳಗ್ಗೆ 9:30ರಿಂದ ಸಂಜೆ 5ರ ವರೆಗೆ ವಿದ್ಯುತ್ ಸ್ಥಗಿತ ಮಾಡುವುದನ್ನು ಮೆಸ್ಕಾಂ ವಾಡಿಕೆ ಮಾಡಿಕೊಂಡಿದೆ. ಇದರ ಹೊರತಾಗಿಯೂ ಅನ್ಯ ದಿನಗಳಲ್ಲಿಯೂ ಸಹ ಪ್ರತಿದಿನ ಬೆಳಗ್ಗೆ 10 ಗಂಟೆಯ ವೇಳೆಯಲ್ಲಿ ಮುಂದಿನ ಗಂಟೆಗಳ ಕಾಲ ಹಾಗೂ ಸಂಜೆ ಮತ್ತು ರಾತ್ರಿ ವೇಳೆಯಲ್ಲೂ ಕರೆಂಟ್ ತೆಗೆಯುತ್ತಿದ್ದು ಜನರಿಗೆ ನಿದ್ದೆ ಮಾಡಲೂ ತೊಡಕಾಗುತ್ತಿದೆ. ಸೆಕೆಯ ದಗೆಯಿಂದ ಹಾಗೂ ಸೊಳ್ಳೆಯಿಂದ ರಕ್ಷಿಸಿಕೊಳ್ಳಲು ಫ್ಯಾನ್, ಎಸಿ, ಕೂಲರ್ ಇನ್ನಿತರ ತಂಪು ಸಾಧನಗಳನ್ನು ಚಾಲ್ತಿಯಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ನಗರ ಭಾಗದಲ್ಲೇ ಸಮಸ್ಯೆ
ಉಡುಪಿ ನಗರದ ಪ್ರಮುಖ ಸ್ಥಳವಾದ ಇಂದ್ರಾಳಿ, ಕುಂಜಿಬೆಟ್ಟು, ಈಶ್ವರ ನಗರ, ಮಣಿಪಾಲ ಇನ್ನಿತರ ಕಡೆಗಳಲ್ಲಿ ಯಾವುದೇ ಅವಧಿಯಲ್ಲಾದರೂ ವಿದ್ಯುತ್ ಸ್ಥಗಿತ ಮಾಡಲಾಗುತ್ತಿದೆ. ಮಳೆ-ಗಾಳಿ ಇಲ್ಲದಿದ್ದರೂ ಸಹ ರಾತ್ರಿ 12 ಗಂಟೆಯ ಬಳಿಕ, ನಸುಕಿನ 4 ಗಂಟೆಯಿಂದ 6 ಗಂಟೆ ಹೀಗೆ ಮನ ಬಂದಂತೆ ಲೋಡ್ ಶೆಡ್ಡಿಂಗ್ ಮಾಡುತ್ತಿದ್ದಾರೆ. ಮಣಿಪಾಲ ಭಾಗದಲ್ಲಿರುವ ಬೃಹತ್ ಕೈಗಾರಿಕಾ ವಲಯ ಹಾಗೂ ಉಡುಪಿ ನಗರದ ಭಾಗದಲ್ಲಿರುವ ಹೋಟೆಲ್ ಇನ್ನಿತರ ವಾಣಿಜ್ಯಾತ್ಮಕ ಚಟುವಟಿಕೆಗಳ ಕಾರ್ಯಗಳಿಗೆ ತೊಡಕುಂಟಾಗುತ್ತಿದೆ.
ಮಳೆ, ಗಾಳಿ ಅಥವಾ ಇನ್ಯಾವುದೇ ಹವಾಮಾನ ವೈಪರೀತ್ಯ ಇಲ್ಲದಿದ್ದಾಗಲೂ ಸಹ ಅನಗತ್ಯವಾಗಿ ವಿದ್ಯುತ್ ಸ್ಥಗಿತ ಮಾಡುವುದು ಎಷ್ಟು ಸರಿ? ಇನ್ವರ್ಟರ್ ವ್ಯವಸ್ಥೆ ಇಲ್ಲದವರು, ಮಧ್ಯಮ ವರ್ಗದವರು ರಾತ್ರಿ ವೇಳೆ ತೊಂದರೆ ಅನುಭವಿಸುವಂತಾಗಿದೆ. ಯಾವುದೇ ತೊಂದರೆ ಇಲ್ಲದಿದ್ದಾಗಲೂ ವಿದ್ಯುತ್ ಕಡಿತ ಮಾಡದಂತೆ ನಗರ ವಾಸಿಗರು ಮೆಸ್ಕಾಂಗೆ ವಿನಂತಿಸಿದ್ದಾರೆ.
"
ನಿಟ್ಟೂರು ಸ್ಟೇಶನ್ ವ್ಯಾಪ್ತಿಯಲ್ಲಿ ಟ್ರಾನ್ಸ್ಫಾರ್ಮರ್ ಕೆಟ್ಟಿದ್ದರಿಂದ ಉಡುಪಿ ಭಾಗದಲ್ಲಿ ವಿದ್ಯುತ್ ವ್ಯತ್ಯಯಗೊಂಡಿತ್ತು. ಇದೀಗ ದುರಸ್ತಿ ಮಾಡಲಾಗಿದೆ. ಅಲ್ಲದೆ, ಎಲ್ಲೆಡೆ ಕಂಬ, ತಂತಿ ನಿರ್ವಹಣೆ ಮಾಡಲು ಸೂಕ್ತ ಗ್ಯಾಂಗ್ಮನ್ಗಳನ್ನು ಹಾಗೂ ವಾಹನಗಳನ್ನೂ ಪೂರೈಸಲಾಗಿದೆ. ಎಲ್ಲಿಯಾದರೂ ದಿಢೀರನೆ ಸಮಸ್ಯೆಯಾದರೆ ಅನಿವಾರ್ಯವಾಗಿ ವಿದ್ಯುತ್ ಕಡಿತ ಮಾಡಬೇಕಾಗುತ್ತದೆ.
— ರಾಕೇಶ್ ಬೇಕಲ್. ಉಡುಪಿ ಜಿಲ್ಲಾ ಮೆಸ್ಕಾಂನ ಅಧೀಕ್ಷಕ ಇಂಜಿನಿಯರ್.